Asianet Suvarna News Asianet Suvarna News

ಈಗ FDA ಪರೀ​ಕ್ಷೆ​ಯಲ್ಲೂ ಅಕ್ರ​ಮದ ಶಂಕೆ, 1010 ಮಂದಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ!

* 1010 ಮಂದಿಯ ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟ

* ಈಗ ಎಫ್‌​ಡಿಎ ಪರೀ​ಕ್ಷೆ​ಯಲ್ಲೂ ಅಕ್ರ​ಮದ ಶಂಕೆ

* ಎಸ್‌ಐ ಪರೀಕ್ಷೆಯಿಂದ ಕುಖ್ಯಾತಿಗೀಡಾದ ಅಫಜಲ್ಪುರದವರೇ 202 ಮಂದಿ!

After PSI Acm Now the eyes are on FDA examination Concerns arise on scam pod
Author
Bangalore, First Published Apr 24, 2022, 4:37 AM IST

ಕಲಬುರಗಿ(ಏ.24): ಪಿಎಸ್‌ಐ ಪರೀಕ್ಷಾ ಹಗರಣದ ಬೆನ್ನಲ್ಲೇ ಕಳೆದ ವರ್ಷ ನಡೆದಿದ್ದ ಎಫ್‌ಡಿಎ(ಪ್ರಥಮ ದರ್ಜೆ ಸಹಾಯಕರು) ಪರೀಕ್ಷೆಯಲ್ಲೂ ಅಕ್ರಮ ನಡೆ​ದಿರುವ ಅನು​ಮಾನ ಇದೀಗ ಕಾಡಲು ಶುರು​ವಾ​ಗಿ​ದೆ.

ಎಫ್‌​ಡಿ​ಎ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ 1,010 ಜನರ ಹೆಸರಿರುವ ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಲಾಗಿದೆ. ಈ ಪೈಕಿ ಆಯ್ಕೆಯಾದ 202 ಮಂದಿ ಅಫಜಲ್ಪುರ ತಾಲೂಕಿಗೆ ಸೇರಿದವರು ಎಂಬುದೇ ಕುತೂ​ಹಲದ ವಿಚಾರ. ಪಿಎ​ಸ್‌ಐ ಪರೀ​ಕ್ಷೆ​ಯಲ್ಲಿ ಅಫ​ಜ​ಲ್ಪು​ರ​ವೇ ಅಕ್ರ​ಮದ ಕೇಂದ್ರ ಬಿಂದು​ವಾ​ಗಿ​ತ್ತು. ಹೀಗಾಗಿ ಪಿಎ​ಸ್‌ಐ ನೇಮ​ಕಾತಿ ರೀತಿ​ಯಲ್ಲೇ ಎಫ್‌​ಡಿಎ ಪರೀ​ಕ್ಷೆ​ಯಲ್ಲೂ ಅಕ್ರಮ ನಡೆದಿದೆಯೇ ಎಂಬ ಶಂಕೆ ಕಾಡಲಾರಂಭಿಸಿದೆ.

ಎಫ್‌​ಡಿಎ ಹುದ್ದೆ​ಗ​ಳ ನೇಮಕಾತಿಗಾಗಿ 2021ರಲ್ಲೇ ​ಪ​ರೀಕ್ಷೆ ನಡೆ​ದಿದ್ದು, ಈ ಪರೀಕ್ಷೆಯ ಆಯ್ಕೆ ಪಟ್ಟಿಯ ಬಗ್ಗೆಯೂ ಪರಾಮರ್ಶೆ, ವಿಚಾರಣೆ ನಡೆಯಬೇಕು ಎಂಬ ಆಗ್ರಹ ಅಭ್ಯ​ರ್ಥಿ​ಗ​ಳಿಂದ ಕೇಳಿಬರುತ್ತಿದೆ.

ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಹೈಟೆಕ್‌ ದಾರಿ ಬಳಸಿ ನಕಲಿಗೆ ಸಹಕರಿಸುವ ಜಾಲವೇ ಈ ಪರೀಕ್ಷೆಯಲ್ಲೂ ಕರಾಮತ್ತು ತೋರಿರುವ ಶಂಕೆಗಳಿವೆ. ಈಗಾಗಲೇ ಪಿಎಸ್‌ಐ ಪರೀಕ್ಷೆಯಲ್ಲಿನ ಅಕ್ರಮದಲ್ಲಿ ಆರೋಪಿಯಾಗಿರುವ ಸೊನ್ನದ ಮಹಾಂತೇಶ ಪಾಟೀಲ್‌, ರುದ್ರಗೌಡ ಪಾಟೀಲ್‌ ಸೋದ​ರ​ರನ್ನು ಸಿಐಡಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇವರ ಮನೆಯಲ್ಲಿ ಅನೇಕ ಹಾಲ್‌ಟಿಕೆಟ್‌ ದೊರಕಿರುವ ಮಾಹಿತಿ ಇದ್ದು, ಇವೆಲ್ಲವೂ ಬೇರೆ ಬೇರೆ ಪರೀಕ್ಷೆಗಳ ಹಾಲ್‌ಟಿಕೆಟ್‌ ಆಗಿದ್ದವು ಎಂದು ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಪರೀಕ್ಷಾ ಅಕ್ರ​ಮದ ತನಿಖೆ ವ್ಯಾಪ್ತಿ ಪಿಎ​ಸ್‌ಐ ಪರೀ​ಕ್ಷೆಗೆ ಸೀಮಿ​ತ​ವಾ​ಗದೆ ಇತ್ತೀ​ಚೆಗೆ ನಡೆದ ಇತರೆ ಪರೀ​ಕ್ಷೆ​ಗ​ಳಿಗೂ ವಿಸ್ತ​ರಿ​ಸುವ ಸಾಧ್ಯತೆ ಇದೆ ಎಂದು ಹೇಳ​ಲಾ​ಗು​ತ್ತಿ​ದೆ.

ಎಸ್‌ಐ ಪರೀಕ್ಷೆ ಅಕ್ರಮ: ಕಾಂಗ್ರೆಸ್‌ ಮುಖಂಡನ ಸೋದರ ಅರೆಸ್ಟ್‌!

ಪಿಎಸ್‌ಐ ನೇಮ​ಕಾತಿ ಪರೀಕ್ಷೆ ಅಕ್ರಮದ ತನಿಖೆಯಲ್ಲಿ ಶನಿವಾರ ಸಿಐಡಿ ಪೊಲೀ​ಸರು ಮಹ​ತ್ವದ ಪ್ರಗ​ತಿ ಸಾಧಿ​ಸಿ​ದ್ದಾ​ರೆ. ಬ್ಲೂಟೂತ್‌ ಮೂಲಕ ಪರೀಕ್ಷಾರ್ಥಿಗಳಿಗೆ ನೆರವಾದ ಹಗರಣದ ‘ಕಿಂಗ್‌ಪಿನ್‌’ ಎಂದೇ ಹೇಳಲಾಗಿರುವ ಅಫಜಲ್ಪುರದ ರುದ್ರಗೌಡ ಪಾಟೀಲ್‌(ಆ​ರ್‌.​ಡಿ.​ಪಾ​ಟೀ​ಲ​)ನನ್ನು ಬಂಧಿ​ಸುವಲ್ಲಿ ಯಶ​ಸ್ವಿ​ಯಾ​ಗಿ​ದ್ದಾ​ರೆ.

ಈಗಾಗಲೇ ಬಂಧನಕ್ಕೊಳಗಾಗಿ ಸಿಐಡಿ ವಶದಲ್ಲಿರುವ ಅಫಜಲ್ಪುರ ಕಾಂಗ್ರೆಸ್‌ ಮುಖಂಡ ಮಹಾಂತೇಶ್‌ ಪಾಟೀಲ್‌ನ ಕಿರಿಯ ಸಹೋದರ ಈ ರುದ್ರಗೌಡ ಪಾಟೀಲ್‌. ಈತನನ್ನು ಹುಡುಕಿಕೊಂಡು ಸಿಐಡಿ ಶುಕ್ರವಾರ ಅಫಜಲ್ಪುರಕ್ಕೆ ಹೋಗಿದ್ದಾಗ ಬಂಧನ ಭೀತಿಯಲ್ಲಿ ತಲೆ ಮರೆಸಿಕೊಂಡಿದ್ದ. ಮಹಾಂತೇಶ್‌ನÜನ್ನು ವಶಕ್ಕೆ ಪಡೆದ ವಿಷಯ ಅರಿತು ವ್ಯಗ್ರಗೊಂಡಿದ್ದ ರುದ್ರಗೌಡ, ಡಿವೈಎಸ್ಪಿ ಶಂಕರಗೌಡ ಪಾಟೀಲ್‌ ಸೇರಿ ತಂಡದಲ್ಲಿದ್ದ ಸಿಐಡಿ ಅಧಿಕಾರಿಗಳಿಗೆ ಕರೆ ಮಾಡಿ ಆವಾಜ್‌ ಕೂಡ ಹಾಕಿದ್ದ.

ಮೊಬೈಲ್‌ ಲೊಕೇ​ಷನ್‌ ಪತ್ತೆ ಹಚ್ಚಿ ಸೆರೆ: ರುದ್ರ​ಗೌ​ಡನ ಆವಾ​ಜ್‌​ನಿಂದ ಸಿಟ್ಟಿ​ಗೆ​ದ್ದಿದ್ದ ಸಿಐಡಿ ತಂಡ ಮೊಬೈಲ್‌ ಲೊಕೇ​ಷನ್‌ ಪತ್ತೆ ಹಚ್ಚಿ ಬಂಧ​ನಕ್ಕೆ ಬಲೆ ಬೀಸಿತ್ತು. ಶನಿ​ವಾರ ಮಹಾಂಂತೇಶ್‌ ಹಾಗೂ ರುದ್ರಗೌಡ ಸಹೋದರರ ನೇತೃತ್ವದಲ್ಲಿ ಅಫಜಲ್ಪುರ ಪಟ್ಟಣದಲ್ಲಿ 101 ಜೋಡಿ ಸಾಮೂಹಿಕ ವಿವಾಹ ಸಮಾ​ರಂಭ ಆಯೋ​ಜಿ​ಸ​ಲಾ​ಗಿತ್ತು. ಈ ಸಮಾರಂಭದಲ್ಲಿ ರುದ್ರಗೌಡ ಪಾಲ್ಗೊಳ್ಳಲು ಪಾಲ್ಗೊ​ಳ್ಳ​ಬ​ಹು​ದೆಂದು ಸಿಐಡಿ ಇಲ್ಲೂ ನಿಗಾ ಇಟ್ಟಿತ್ತು. ಅಫಜಲ್ಪುರ ಪೊಲೀಸರೂ ಸಮಾರಂಭದಲ್ಲಿ ಗಸ್ತಿ​ನಲ್ಲಿ ಭಾಗಿ​ಯಾ​ಗಿ​ದ್ದರು. ಈ ಮಧ್ಯೆ, ಮೊಬೈಲ್‌ ಲೊಕೇ​ಶನ್‌ ಆಧಾ​ರದ ಮೇರೆಗೆ ರುದ್ರ​ಗೌಡ ಮಹಾರಾಷ್ಟ್ರದ ಸೊಲ್ಲಾಪುರ ಆಸುಪಾಸಲ್ಲಿ​ರುವುದನ್ನು ಖಚಿತಪಡಿಸಿಕೊಂಡು ಶನಿವಾರ ಖೆಡ್ಡಾಗೆ ಬೀಳಿ​ಸು​ವಲ್ಲಿ ಯಶಸ್ವಿಯಾಯಿತು.

ಅಫಜಲ್ಪುರ ತಾಲೂಕಿನ ಸೊನ್ನ ಮೂಲದ, ಗೌರ ಬಿ. ಗ್ರಾಪಂ ಮಾಜಿ ಅಧ್ಯ​ಕ್ಷನೂ ಆದ ರುದ್ರಗೌಡ ಪಾಟೀಲ್‌ (ಗೌರ ಬಿ ಗ್ರಾಪಂ ಮಾಜಿ ಅಧ್ಯಕ್ಷ) ಬಂಧನದೊಂದಿಗೆ ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಬಂಧಿತರ ಸಂಖ್ಯೆ 14ಕ್ಕೇರಿ​ದೆ.

Follow Us:
Download App:
  • android
  • ios