ಕಳಸಾ-ಬಂಡೂರಿ ಯೋಜನೆಗೆ ನೀರು ಹರಿಸಲು ಗೆಜೆಟ್‌ ಅಧಿಸೂಚನೆ ಮೂಲಕ ಸಮ್ಮತಿ ಸಿಕ್ಕಿದೆ. ಈ ಪ್ರಕಾ​ರ 13.42 ಟಿಎಂಸಿ ನೀರು ಬಳಕೆಗೆ ಕರ್ನಾ​ಟಕಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಉತ್ತರ ಕರ್ನಾಟಕದ ಅನ್ನದಾತರ ‘ಮಹದಾಯಿ ಹೋರಾಟ’ಕ್ಕೆ ಕೊನೆಗೂ ಜಯವಾಗಿದೆ.

ಪೂರ್ಣ ನ್ಯಾಯ ಸಿಗದಿದ್ದರೂ ಜನ-ಜಾನುವಾರುಗಳ ಆರಿದ ಗಂಟಲಿಗೆ ಮತ್ತು ಬರಗಾಲದಿಂದ ಒಣಗಿದ ಭೂಮಿಯ ಎದೆಗೆ ತಂಪೆರೆಯುವಷ್ಟುನೀರು ಲಭಿಸಿದೆ. ಆದರೆ ಕನ್ನ​ಡಿ​ಗರ ಹೋರಾಟ ಇನ್ನೂ ಬಾಕಿ ಇದೆ.

ನದಿ ಕರ್ನಾಟಕದ್ದು, ತಕರಾರು ಗೋವಾದ್ದು!

ಪಶ್ಚಿಮಘಟ್ಟದ 30 ಕ್ಕೂ ಹೆಚ್ಚು ತೊರೆ, ಹಳ್ಳಗಳಿಂದ ಮೈದುಂಬುವ ನದಿ ಮಹ​ದಾ​ಯಿ. ಪಶ್ಚಿಮಾಭಿಮುಖವಾಗಿ ಹರಿಯುವ ಅಂತಾರಾಜ್ಯ ನದಿ ಕೂಡ. ಇದರ ಮೂಲ ಕರ್ನಾಟಕದ ಖಾನಾಪುರ ತಾಲೂಕಿನ ದೇಗಾಂ ಗ್ರಾಮ. ಅರಬ್ಬಿ ಸಮುದ್ರ ಸೇರುವ ಮುನ್ನ ಕರ್ನಾಟಕದಲ್ಲಿ 35 ಕಿ.ಮೀ. ಮತ್ತು ಗೋವಾದಲ್ಲಿ 82 ಕಿ.ಮೀ. ಹರಿಯುತ್ತದೆ. ಕರ್ನಾಟಕದ ಜನ ಇದನ್ನು ಮಹಾತಾಯಿ (ಮಹದಾಯಿ) ಎಂದು ಕರೆದರೆ, ಗೋವನ್ನರು ಮಾಂಡೋವಿ ಎನ್ನುತ್ತಾರೆ. 2032 ಚ.ಕಿ.ಮೀ.ನಷ್ಟುಜಲಾನಯನ ಪ್ರದೇಶ ಹೊಂದಿದ್ದು, ಕರ್ನಾಟಕದಲ್ಲಿ 375 ಚ.ಕಿ.ಮೀ. ಪ್ರದೇಶ ಇದೆ.

'ಯಡಿಯೂರಪ್ಪ ಬರ್ತ್‌ಡೇಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್'

ಕೇಂದ್ರ ಜಲ ಆಯೋಗದ ವರದಿಯಂತೆ ಒಟ್ಟು ಮಹದಾಯಿ ಕೊಳ್ಳದಲ್ಲಿ ನೀರಿನ ಇಳುವರಿ (ಯೀಲ್ಡ್‌) ಶೇ.50ರ ಅವಲಂಬನೆಯಲ್ಲಿ 220 ಟಿಎಂಸಿ ಮತ್ತು ಶೇ.75ರ ಅವಲಂಬನೆಯಲ್ಲಿ 199.6 ಟಿಎಂಸಿ ಎಂದು ಅಂದಾಜಿಸಲಾಗಿದೆ. ಪಶ್ಚಿಮಘಟ್ಟದ ಹಸಿರು ತಪ್ಪಲಿನಲ್ಲಿ ಹುಟ್ಟಿಅರಬ್ಬಿ ಸಮುದ್ರ ಸೇರುವ ಈ ನದಿ ಆರೇಳು ಕೀಮಿ ಜಲಮಾರ್ಗಕ್ಕೆ ಸಹಕಾರಿ ಆಗುವುದನ್ನು ಬಿಟ್ಟರೆ ಗೋವಾಕ್ಕೆ ಯಾವುದಕ್ಕೂ ಪ್ರಯೋಜನವಿಲ್ಲ.

ರೈತರೇ ಹೋರಾಡಿ ನ್ಯಾಯ ಪಡೆದ ಐತಿ​ಹಾ​ಸಿಕ ಚಳ​ವ​ಳಿ

70ರ ದಶಕದಲ್ಲಿ ಬದಾಮಿಯ ಮಾಜಿ ಶಾಸಕ ಬಿ.ಎಂ.ಹೊರಕೇರಿ ಅವರು ಹೂಡಿದ ಈ ಹೋರಾಟ ದೊಡ್ಡ ಜನಾಂದೋಲನವಾಗಿ ರೂಪುಗೊಂಡಿದ್ದು ಇತಿಹಾಸ. ಸುದೀರ್ಘ ಐದು ದಶಕಗಳ ಈ ಹೋರಾಟದಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ರೈತರೇ ಹೋರಾಡಿ ನ್ಯಾಯ ಪಡೆದದ್ದು ಕರ್ನಾಟಕದ ಚಳವಳಿಗಳ ಇತಿಹಾಸದಲ್ಲೇ ಹೊಸ ದಾಖಲೆ!

ಮಹದಾಯಿ ನ್ಯಾಯಾಧಿಕರಣ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರೂ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ಐತೀರ್ಪು ನೀಡಿದಾಗಲೂ ಅದರ ಅಧಿಚೂಚನೆ ಹೊರಡಿಸಲು ಮೀನಮೇಷ ಎಣಿಸಿದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟಿನಿಂದ ನಿರ್ದೇಶನ ಕೊಡಿಸಿ ಅಧಿಸೂಚನೆ ಪಡೆದಿರುವ ಹೋರಾಟಗಾರರ ಕೆಚ್ಚು ಗಮನೀಯ. ಬಿ.ಎಂ.ಹೊರಕೇರಿ ಹೂಡಿದ ಹೋರಾಟ ಸೊಬರದಮಠ ಶ್ರೀಗಳ ಕಾಲದಲ್ಲಿ ಫಲವಾಗಿ ಅರಳಿದೆ. ಮತ್ತೊಂದು ನರಗುಂದ ಬಂಡಾಯ ಗೆದ್ದ ಹೆಮ್ಮೆ ಅವರದು.

ಮಹದಾಯಿ: ಕರ್ನಾಟಕಕ್ಕೆ ಜಯ, ಗೋವಾದ ತಕರಾರಿಗೆ ಮಣೆ ಹಾಕದ ಕೇಂದ್ರ!

ತೀರ್ಪು ವಿಳಂಬ​ದಿಂದ 500 ಕೋಟಿಗೇರಿದೆ ಕಾಮ​ಗಾರಿ ವೆಚ್ಚ!

ರಾಜ್ಯದಲ್ಲಿ ಈಗಾಗಲೇ ಚಾಲನೆಯಲ್ಲಿರುವ ನೀರಾವರಿ ಯೋಜನೆಗಳ ಸ್ಥಿತಿಗತಿ ಮತ್ತು ಗತಿಸಿರುವ ಸಮಯ, ವೆಚ್ಚವಾದ ಹಣದ ಲೆಕ್ಕ ಹಾಕಿದರೆ ನಿಜಕ್ಕೂ ಗಾಬರಿಯಾಗುತ್ತದೆ. 125 ಕೋಟಿ ರು. ವೆಚ್ಚದ ‘ಕಳಸಾ-ಬಂಡೂರಿ ತಿರುವು ಯೋಜನೆ’ಗೆ ಎಸ್‌.ಎಂ.ಕೃಷ್ಣ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ 44 ಕೋಟಿ ರು. ಅನುದಾನ ಕಾಯ್ದಿರಿಸಿತ್ತು.

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಬಿಜೆಪಿ ಸರ್ಕಾರ 100 ಕೋಟಿ ತೆಗೆದಿರಿಸಿ ಕಾಮಗಾರಿಗೆ ಚಾಲನೆ ನೀಡಿತ್ತು. ಮುಂದೆ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಕಾಮಗಾರಿ ಚುರುಕುಗೊಳಿಸಿದೆ. ನ್ಯಾಯಾಧಿಕರಣದ ತೀರ್ಪಿನ ವಿಳಂಬದಿಂದಾಗಿ ಅದರ ವೆಚ್ಚ ಈಗ 500 ಕೋಟಿಗೆ ಏರಿದೆ. ಕಾಮಗಾರಿ ಮಾತ್ರ ಇನ್ನೂ ಬಹಳಷ್ಟಿದೆ.

ಗೆಲುವು ದೊರ​ಕಿ​ದೆ: ಮುಂದೇನು?

ತಕ್ಷಣಕ್ಕೆ ಈ ಪ್ರಶ್ನೆಗೆ ಎರಡು ಪರಿಹಾರಾತ್ಮಕ ಉತ್ತರಗಳಿವೆ. ಅವು, ಮಹದಾಯಿ ನ್ಯಾಯಾಧಿಕರಣದ ತೀರ್ಪಿನಲ್ಲಿ ಸದ್ಯ ದಕ್ಕಿರುವ 13.42 ಟಿಎಂಸಿ ನೀರನ್ನು ಶೀಘ್ರಗತಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಯೋಜನೆಗಳನ್ನು ಪೂರ್ಣಗೊಳಿಸುವುದು ಮತ್ತು ನ್ಯಾಯಯುತವಾಗಿ ನಮಗೆ ಮಹದಾಯಿಯಲ್ಲಿ ಸಿಗÜಬೇಕಿರುವ ಹಕ್ಕಿನ ನೀರನ್ನು ಪಡೆಯಲು ಕಾನೂನು ಹೋರಾಟ ಹಾಗೂ ಜನಾಂದೋಲನವನ್ನು ಒಟ್ಟೊಟ್ಟಿಗೆ ಮುಂದುವರೆಸುವುದು! ದಕ್ಕಿರುವ ನೀರನ್ನು ಸದ್ಬಳಕೆ ಮಾಡುವುದು ಮತ್ತು ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಸಣ್ಣ ಸಂಗತಿಗಳಲ್ಲ.

ಕರ್ನಾಟಕ ಸರ್ಕಾರದ ಮುಂದಿ​ರುವ ಸವಾ​ಲೇ​ನು?

ಸುಪ್ರೀಂಕೋರ್ಟಿನ ನಿರ್ದೇಶನದಂತೆ ಕಳಸಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ತೆರವುಗೊಳಿಸಬೇಕು. ಕಳಸಾ, ಬಂಡೂರಾ ಕಾಲುವೆ ಮತ್ತು ಸಣ್ಣ ಡ್ಯಾಂಗಳ ನಿರ್ಮಾಣ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಮಾಡಬೇಕು. ಇದಕ್ಕೆ ಅಡ್ಡಿಯಾಗುವ ಪರಿಸರ ಇಲಾಖೆಯ ಅನುಮತಿ ಪಡೆಯಬೇಕು. ವಿವಾದ ಇದ್ದಾಗ ತೋರಿದ್ದ ಉತ್ಸಾಹವನ್ನು ಸರ್ಕಾರ ಈಗ ತೋರುವ ಮೂಲಕ ಹೋರಾಡಿದ ಅನ್ನದಾತರ ಹೊಲಕ್ಕೆ ನೀರು ಹರಿಸಬೇಕಿದೆ.

ನೀರಿಲ್ಲದೇ ಹಾಳಾಗಿ ಹೋಗಿರುವ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಾಲುವೆ, ಹೊಲಗಾಲುವೆಗಳನ್ನು ಪುನರ್‌ ನಿರ್ಮಿಸಬೇಕು. ಸಾಧ್ಯವಾದಲ್ಲೆಲ್ಲಾ ಕೆರೆ ತುಂಬುವ ಯೋಜನೆಗಳನ್ನೂ ಕೈಗೆತ್ತಿಕೊಳ್ಳಬೇಕಿದೆ. ಈ ಎಲ್ಲಾ ಕಾಮಗಾರಿಗಳಿಗೆ ಏನಿಲ್ಲವೆಂದರೂ ಐದಾರು ಸಾವಿರ ಕೋಟಿ ಹಣ ಬೇಕಾಗುತ್ತದೆ. ರಾಜ್ಯ ಸರ್ಕಾರ ಇಷ್ಟೊಂದು ಹಣ ನೀಡುತ್ತಾ ಎಂಬುದು ಪ್ರಮುಖ ಪ್ರಶ್ನೆ.

13.5 ಟಿಎಂಸಿ ನೀರು ಹಿಡಿ​ದಿ​ಡು​ವುದು ಎಲ್ಲಿ?

ಈಗ ಬಳಕೆಗೆ ಅನುಮತಿ ಲಭಿಸಿರುವ 13.5 ಟಿಎಂಸಿ ನೀರನ್ನು ಮಹದಾಯಿಯ ಕಳಸಾ, ಬಂಡೂರಾ, ಚೋರ್ಲಾ, ಸಿಂಗಾರಾ, ವಾಟಿ, ಹಳತಾರ ಮುಂತಾದ ಝರಿ ರೂಪದ ಹಳ್ಳಗಳನ್ನು ಮಲಪ್ರಭಾ ಉಗಮ ಸ್ಥಾನಕ್ಕೆ ಹರಿಸಿ ನದಿ ಮೂಲಕ ಅಲ್ಲಿಂದ ಸವದತ್ತಿ ಬಳಿಯ ರೇಣುಕಾ ಸಾಗರದಲ್ಲಿ ಸಂಗ್ರಹಿಸಬೇಕು. ಈ ನೀರು ಬಳಕೆಗೆ ಈಗ ನಮ್ಮ ಮುಂದೆ ಇರುವುದು ಇದೊಂದೇ ಮಾರ್ಗ. ಆದರೆ, ಇಷ್ಟೊಂದು ಪ್ರಮಾಣದ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಅಣೆಕಟ್ಟೆಗಿಲ್ಲ.

ಸವದತ್ತಿ ಹತ್ತಿರ ನವಿಲು ತೀರ್ಥ ಬಳಿ ಮಲಪ್ರಭಾ ನದಿಗೆ ಅಣೆಕಟ್ಟೆನಿರ್ಮಿಸಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 5.27 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ‘ಮಲಪ್ರಭಾ ನೀರಾವರಿ ಯೋಜನೆ’ಯ ಕಾರ್ಯ 1961ರಲ್ಲಿ ಪ್ರಾರಂಭಗೊಂಡು 1972-73ರ ಸುಮಾರಿಗೆ ಪೂರ್ಣಗೊಂಡಿತು. ಇಲ್ಲಿಯವರೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು 3-4 ಬಾರಿ ಮಾತ್ರ. ಘೋಷಿಸಿದ ಕ್ಷೇತ್ರಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗಿಲ್ಲ. ಈ ನಾಲ್ಕು ದಶಕಗಳಲ್ಲಿ ಈ ಅಣೆಕಟ್ಟೆಯಲ್ಲಿ ಶೇ.40ರಷ್ಟುಹೂಳು ತುಂಬಿದೆ ಎನ್ನುವ ವರದಿ ಬಂದಿದೆ. ಹಾಗಿ​ದ್ದಲ್ಲಿ 13.5 ಟಿಎಂಸಿ ನೀರನ್ನು ಹಿಡಿದಿಡುವುದು ಎಲ್ಲಿ?

ಮಹದಾಯಿ: ಕಾನೂನು ತೊಡಕು ನಿವಾರಿಸಲು ಕ್ರಮ, ರಮೇಶ್‌ ಜಾರಕಿಹೊಳಿ

ಇನ್ನೂ 149 ಟಿಎಂಸಿ ನೀರು ಯಾರಿಗೂ ಹಂಚಿಲ್ಲ!

ಮಹದಾಯಿ ತೀರ್ಪು ನೀಡಿದ ನ್ಯಾ.ಪಾಂಚಾಲ್‌ ಅವರ ವರದಿಯನ್ನು ತಡಕಾಡಿದರೆ ತಾನು ಸಮೀಕ್ಷೆ ಮಾಡಿದ 188.6 ಟಿಎಂಸಿ ನೀರಿನ ಲೆಕ್ಕಾಚಾರಕ್ಕೆ ಬದ್ಧವಾದ ನ್ಯಾಯಾಧಿಕರಣ ಅದರಲ್ಲೇ ಮೂರೂ ರಾಜ್ಯಗಳಿಗೆ 39 ಟಿಎಂಸಿ ಹಂಚಿ, ಉಳಿಕೆ 149 ಟಿಎಂಸಿ ಬಗ್ಗೆ ಚಕಾರವೆತ್ತಿಲ್ಲ. ಇದು ತೀರ್ಪು ಎನ್ನುವುದಕ್ಕಿಂತ ಆಯಾ ರಾಜ್ಯಗಳು ಮಹದಾಯಿ ನೀರಿನಲ್ಲಿ ತಕ್ಷಣಕ್ಕೆ ಕೈಗೆತ್ತಿಕೊಳ್ಳಲು ಬೇಡಿಕೆ ಇಟ್ಟಿದ್ದ ಯೋಜನೆಗಳಿಗೆ ನೀಡಿರುವ ಅನುಮತಿಯಂತಿದೆ.

ಗೋವಾ, ಮಹಾರಾಷ್ಟ್ರಗಳಿಗೆ ಹೋರಾಟದ ಯಾವುದೇ ದರ್ದು ಇಲ್ಲ. ಕಾರಣ ಮಹದಾಯಿ ನೀರಿನಿಂದ ಆ ರಾಜ್ಯಗಳಿಗೆ ಆಗಬೇಕಿರುವುದು ಏನೂ ಇಲ್ಲ. ಈ ನೀರು ಬೇಕಿರುವುದು ಕರ್ನಾಟಕಕ್ಕೆ. ಕಾರಣ, ಸತತ ಬರಗಾಲದಿಂದ ಒಣಗುವ ಭೂಮಿಗೆ ಹರಿಸಲು, ಜನತೆ ಮತ್ತು ಜಾನುವಾರುಗಳ ಆರಿದ ಗಂಟಲಿಗೆ ಹನಿಸಲು ಅಪಾರ ಪ್ರಮಾಣದ ಈ ನೀರು ಬೇಕಿದೆ. ಕರ್ನಾಟಕ ಮಹದಾಯಿ ನೀರಿನ ಹಕ್ಕಿನ ಹೋರಾಟ ಮರೆತರೆ, ತನ್ನ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗಲಿದೆ.

2010ರಲ್ಲಿ ರಚನೆಯಾದ ಮಹದಾಯಿ ನ್ಯಾಯಾಧಿಕರಣ

ಹಿಂದಿನ ಪ್ರಧಾನಿ ಡಾ.ಮನಮೋಹನ ಸಿಂಗ್‌ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಯದೇ ಇದ್ದಾಗ ಕಾಂಗ್ರೆಸ್‌ ಸರ್ಕಾರ ನವೆಂಬರ್‌ 16, 2010ರಂದು ನ್ಯಾ.ಪಾಂಚಾಳ ನೇತೃತ್ವದಲ್ಲಿ ‘ಮಹದಾಯಿ ನ್ಯಾಯಾಧಿಕರಣ’ ರಚಿಸಿ ಪ್ರಕರಣ ಇತ್ಯರ್ಥಕ್ಕೆ ನಾಲ್ಕು ವರ್ಷಗಳ ಅವಧಿ ನಿಗದಿಪಡಿಸಿತ್ತು.

ಈ ಅವಧಿಯಲ್ಲಿ ಅದು ಸಾಧ್ಯವಾಗದೇ ಇದ್ದಾಗ ನವೆಂಬರ್‌ 13, 2014ರಂದು ಮತ್ತೆ ಎರಡನೇ ಬಾರಿ ಅವಧಿ ವಿಸ್ತರಿಸಿ ಆಗಸ್ಟ್‌ 20, 2016ರ ಒಳಗಾಗಿ ತೀರ್ಪು ನೀಡುವಂತೆ ಕೋರಿತ್ತು. ನ್ಯಾಯಾಧಿಕರಣ ಮತ್ತೊಂದು ವರ್ಷದ ಸಮಯ ಕೇಳಿದ್ದರಿಂದ ಆ ಸಮಯ 2018ರ ಆಗಸ್ಟ್‌ ತಿಂಗಳಿಗೆ ಕೊನೆಗೊಂಡಿದೆ. ಇದೀಗ ಮತ್ತೆ 6 ತಿಂಗಳು ವಿಸ್ತರಣೆಯಾಗಿದೆ.

- ಮಲ್ಲಿಕಾರ್ಜುನ ಸಿದ್ದಣ್ಣವರ