ಹುಬ್ಬಳ್ಳಿಯ ಯಶಸ್ಸಿನ ನಂತರ, ರಾಜ್ಯ ಸರ್ಕಾರ ನಾಲ್ಕು ಹೊಸ ಸರ್ಕಾರಿ ಐವಿಎಫ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಈ ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ದಂಪತಿಗಳಿಗೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚವಿಲ್ಲದೆ, ಕೈಗೆಟಕುವ ದರದಲ್ಲಿ ಕೃತಕ ಗರ್ಭಧಾರಣೆ ಚಿಕಿತ್ಸೆ ಪಡೆಯಲು ನೆರವಾಗಲಿದೆ.

ಲಿಂಗರಾಜು ಕೋರಾ

Add Asianetnews Kannada as a Preferred SourcegooglePreferred

ಬೆಂಗಳೂರು: ಹುಬ್ಬಳ್ಳಿಯ ಕಿಮ್ಸ್‌ ನಂತರ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು, ಕಲಬುರಗಿ ಮತ್ತು ಮೈಸೂರಿನಲ್ಲಿ ತಲಾ ಒಂದು ಸರ್ಕಾರಿ ಕೃತಕ ಗರ್ಭಧಾರಣೆ (ಐವಿಎಫ್‌) ಕೇಂದ್ರಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಇದರಿಂದ ರಾಜ್ಯದಲ್ಲಿ ಸಹಜ ಗರ್ಭಧಾರಣೆ ಸಮಸ್ಯೆಯಿಂದ ಪರಿತಪಿಸುತ್ತಿರುವ ಬಡ ಹಾಗೂ ಮಧ್ಯಮವರ್ಗದ ದಂಪತಿ ಕೈಗೆಟಕುವ ಅಥವಾ ಅತಿ ಕಡಿಮೆ ವೆಚ್ಚದಲ್ಲಿ ಐವಿಎಫ್‌ ಎಂಬ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಮೂಲಕ ಮಗು ಪಡೆಯಲು ಅವಕಾಶಗಳು ಹೆಚ್ಚಲಿವೆ.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ(ಕಿಮ್ಸ್‌) ರಾಜ್ಯದ ಮೊದಲ ಸರ್ಕಾರಿ ಐವಿಎಫ್‌ ಕೇಂದ್ರ ಸ್ಥಾಪಿಸಿದ್ದು, ಶೀಘ್ರ ಉದ್ಘಾಟನೆಯಾಗಲಿದೆ. ಇದೀಗ ಬೆಂಗಳೂರಿನ ವಾಣಿ ವಿಲಾಸ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐವಿಎಫ್‌ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಕಲಬುರಗಿ ಮತ್ತು ಮೈಸೂರಿನಲ್ಲಿ ಯಾವ ಸರ್ಕರಿ ಆಸ್ಪತ್ರೆಗಳಲ್ಲಿ ಐವಿಎಫ್‌ ಕೇಂದ್ರಗಳನ್ನು ಆರಂಭಿಸಲು ಟೆಂಡರ್‌ ಆರಂಭಿಸಬೇಕಿದೆ.

ಯಾಕೆ ಸರ್ಕಾರಿ ಐವಿಎಫ್‌ ಕೇಂದ್ರ?:

ಆಧುನಿಕ ಜೀವನ ಶೈಲಿ ಹಾಗೂ ಇತರೆ ಕಾರಣಗಳಿಂದ ಈಗಿನ ಪೀಳಿಗೆಯಲ್ಲಿ ಫಲವಂತಿಕೆ ದರ ಕಡಿಮೆಯಾಗುತ್ತಿದೆ. ಇದರಿಂದ ಸಹಜವಾಗಿ ಗರ್ಭಧಾರಣೆಯಾಗದ ಸಾಕಷ್ಟು ದಂಪತಿ ಐವಿಎಫ್‌ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಆದರೆ, ಖಾಸಗಿ ವ್ಯವಸ್ಥೆಯಲ್ಲಿ ಚಿಕಿತ್ಸೆಗೆ ಒಮ್ಮೆಗೆ 4 ರಿಂದ 5 ಲಕ್ಷ ರು. ಬೇಕಾಗುತ್ತದೆ. ಬಡ ಕುಟುಂಬದವರಿಗೆ ಇದು ಕೈಗೆಟುಕದ ಕಾರಣ ಸರ್ಕಾರಿ ಐವಿಎಫ್‌ ಕೇಂದ್ರಗಳನ್ನು ಸರ್ಕಾರ ಆರಂಭಿಸುತ್ತಿದೆ.

ವರ್ಷಾಂತ್ಯದಲ್ಲಿ ವಾಣಿ ವಿಲಾಸ, ಬೌರಿಂಗ್‌ನಲ್ಲಿ ಐವಿಎಫ್‌ ಸೇವೆ ಶುರು

ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ.ಸವಿತಾ ಸಿ. ಅವರ ಪ್ರಕಾರ, ಐವಿಎಫ್ ಕೇಂದ್ರಕ್ಕೆ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಸ್ಥಳಾವಕಾಶವಿದೆ. ಪ್ರತ್ಯೇಕ ಮೂಲಸೌಕರ್ಯ, ಉಪಕರಣ ಖರೀದಿ ಹಾಗೂ ತಜ್ಞ ವೈದ್ಯರನ್ನು ಒಳಗೊಂಡ ಮಾನವ ಸಂಪನ್ಮೂಲ ನೇಮಕಾತಿಗೆ ಕ್ರಮ ವಹಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರದಿಂದ 1 ಕೋಟಿ ರು. ಅನುದಾನ ನೀಡಲಾಗಿದ್ದು, ಜೊತೆಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ (ಕೆಎಸ್‌ಡಿಎಲ್‌) ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ಅಡಿ 50 ಲಕ್ಷ ರು.ಅನುದಾನ ದೊರಕಿದೆ. ವರ್ಷಾಂತ್ಯದೊಳಗೆ ಕೇಂದ್ರ ಆರಂಭಿಸಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಬೌರಿಂಗ್‌ ಆಸ್ಪತ್ರೆಗಳಲ್ಲಿ ಆರಂಭಿಸುತ್ತಿರುವ ಐವಿಎಫ್‌ ಕೇಂದ್ರಕ್ಕೂ ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದ್ದು, ಆದಷ್ಟು ಕೆಲ ತಿಂಗಳಲ್ಲಿ ಐವಿಎಫ್‌ ಚಿಕಿತ್ಸೆ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಕೇಂದ್ರಕ್ಕೂ ಸರ್ಕಾರ ಸೂಕ್ತ ಅನುದಾನ ಒದಗಿಸಿದೆ.

ಸರ್ಕಾರಿ ದರದಲ್ಲಿ ಐವಿಎಫ್‌ ಚಿಕಿತ್ಸೆ

ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಈಗಾಗಲೇ ಹುಬ್ಬಳ್ಳಿಯ ಕಿಮ್ಸ್‌ನ ಐವಿಎಫ್‌ ಕೇಂದ್ರವನ್ನು ಸರ್ಕಾರದ ಅಧೀನದಲ್ಲೇ ಹಾಗೂ ಸರ್ಕಾರ ನಿಗದಿಪಡಿಸಿದ ದರದಂತೆ ಚಿಕಿತ್ಸೆ ನಡೆಸಲು ತೀರ್ಮಾನಿಸಲಾಗಿದೆ. ಬಡ ಕುಟುಂಬಗಳಿಗೆ ಸಾರ್ವತ್ರಿಕ ಆರೋಗ್ಯ ವಿಮಾ ಯೋಜನೆ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ (ಎಬಿಆರ್‌ಕೆ) ಅಡಿಯಲ್ಲೇ ಚಿಕಿತ್ಸೆ ನೀಡಬಹುದು ಎಂದು ಹೇಳಿದೆ. 

ಐವಿಎಫ್ ಚಿಕಿತ್ಸೆಗೆ ಒಬ್ಬ ಫಲಾನುಭವಿಗೆ 1.34 ಲಕ್ಷ ರು. ದರ ನಿಗದಿಪಡಿಸಿದೆ. ಒಂದು ಭಾರಿ ಚಿಕಿತ್ಸೆ ಯಶಸ್ವಿಯಾಗದಿದ್ದರೆ ಇದೇ ದರದಲ್ಲಿಯೇ ಮೂರು ಬಾರಿ ಚಿಕಿತ್ಸೆ ನೀಡುವ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಅನುದಾನವನ್ನು ಸರ್ಕಾರ ನೀಡಿದ್ದು, ಅದು ಕ್ರಿಯಾ ಹಂತದಲ್ಲಿ ‌ಇದೆ. ಇದೇ ಮಾದರಿಯನ್ನೇ ಈಗ ಸಿದ್ಧವಾಗಿರುವ ಬೆಂಗಳೂರಿನ ಇನ್ನೆರಡು ಕೇಂದ್ರಗಳಲ್ಲೂ ಅನುಸರಿಸಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಶೀಘ್ರ ಟೆಂಡರ್‌

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಸಿದ್ಧಗೊಂಡಿರುವ ರಾಜ್ಯದ ಮೊದಲ ಸರ್ಕಾರಿ ಐವಿಎಫ್‌ ಕೇಂದ್ರ ಕೆಲವೇ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಜೊತೆಗೆ ಬೆಂಗಳೂರಿನ ವಾಣಿ ವಿಲಾಸ ಮತ್ತು ಬೌರಿಂಗ್‌ ಆಸ್ಪತ್ರೆಗಳಲ್ಲೂ ಪ್ರತ್ಯೇಕ ಐವಿಎಫ್‌ ಕೇಂದ್ರಗಳನ್ನು ಆರಂಭಿಸಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು ಸಿದ್ಧತೆ ಆಗುತ್ತಿದೆ. ನಂತರ ಮೈಸೂರು ಮತ್ತು ಕಲಬುರಿಯಲ್ಲೂ ಇನ್ನೆರಡು ಸರ್ಕಾರಿ ಐವಿಎಫ್‌ ಕೇಂದ್ರಗಳನ್ನು ಆರಂಭಿಸಲಾಗುವುದು. ಇದಕ್ಕೆ ಶೀಘ್ರ ಟೆಂಡರ್‌ ಕರೆಯುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದ್ದಾರೆ.