Asianet Suvarna News Asianet Suvarna News

ಒಪ್ಪಂದ ಮುಗಿದ ಬಳಿಕ Cheque Bounce ಆದರೆ ಶಿಕ್ಷಾರ್ಹವಲ್ಲ: ಹೈಕೋರ್ಟ್

ಒಪ್ಪಂದ ಮುಗಿದ ಬಳಿಕ ಚೆಕ್‌ಬೌನ್ಸ್‌ ಆದರೆ ಶಿಕ್ಷಾರ್ಹ ಅಲ್ಲ. ಚೆಕ್‌ನಲ್ಲಿ ದಿನಾಂಕ ನಮೂದಿಸದೇ ಇದ್ದಾಗ ಚೆಕ್‌ ಪಡೆದ 6 ತಿಂಗಳಲ್ಲಿ ಬ್ಯಾಂಕಿಗೆ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶ

After contract over cheque bounce Not punishable says karnataka high court gow
Author
Bengaluru, First Published Aug 1, 2022, 7:52 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು (ಜು.1): ಸಾಲ ಮರುಪಾವತಿಸುವ ಬಗ್ಗೆ ಮಾಡಿಕೊಂಡ ಒಪ್ಪಂದದಲ್ಲಿ (ಅಗ್ರಿಮೆಂಟ್‌) ನಮೂದಿಸಿದ ಅವಧಿ ಮುಕ್ತಾಯವಾದ ನಂತರ ಬ್ಯಾಂಕಿಗೆ ಸಲ್ಲಿಸಿದ (ಪ್ರೆಸೆಂಟ್‌) ಚೆಕ್‌ ಬೌನ್ಸ್‌ ಆದಾಗ ಸಾಲ ಪಡೆದ ವ್ಯಕ್ತಿ ವಿರುದ್ಧ ‘ನೆಗೋಶಿಯಬಲ್‌ ಇನ್‌ಸ್ಟ್ರುಮೆಂಟ್‌ ಆ್ಯಕ್ಟ್-1881ರ (ಎನ್‌ಐ ಕಾಯ್ದೆ) ಸೆಕ್ಷನ್‌ 138’ರ ಅಡಿಯಲ್ಲಿ ಶಿಕ್ಷಿಸಲು ಅವಕಾಶವಿಲ್ಲ ಎಂದು ಹೈಕೋರ್ಚ್‌ ಆದೇಶಿಸಿದೆ. ಬೆಂಗಳೂರಿನ ಜಯನಗರದ 9ನೇ ಬ್ಲಾಕ್‌ ನಿವಾಸಿ ಕೆ.ಎನ್‌.ರಾಜು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಇದೇ ವೇಳೆ ರಾಜು ಅವರಿಂದ ಸಾಲ ಪಡೆದಿದ್ದ ಮಂಜುನಾಥ್‌ ಅವರನ್ನು ಖುಲಾಸೆಗೊಳಿಸಿದ ಮ್ಯಾಜಿಸ್ಪ್ರೇಟ್‌ ಕೋರ್ಚ್‌ ಆದೇಶವನ್ನು ಪುರಸ್ಕರಿಸಿದೆ. ಉತ್ತರಹಳ್ಳಿಯ ಬಂಗಾರಪ್ಪ ಲೇಔಟ್‌ ನಿವಾಸಿ ಟಿ.ವಿ.ಮಂಜುನಾಥ್‌, ಮೇಲ್ಮನವಿದಾರ ರಾಜು ಅವರಿಂದ 2004ರ ಅ.29ರಂದು 70 ಸಾವಿರ ರು. ಸಾಲ ಪಡೆದಿದ್ದರು. ಸಾಲಕ್ಕೆ ಭದ್ರತಾ ಖಾತರಿಯಾಗಿ 3 ಚೆಕ್‌ ನೀಡಿದ್ದ ಮಂಜುನಾಥ್‌, 3 ವರ್ಷದಲ್ಲಿ ಸಾಲ ಮರು ಪಾವತಿ ಮಾಡುವುದಾಗಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು.

ಮಂಜುನಾಥ್‌ ಸೂಚನೆ ಮೇರೆಗೆ ರಾಜು 2008ರ ಮೇ 28ರಂದು 3 ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ, ಮಂಜುನಾಥ್‌ ಸಹಿ ವ್ಯತ್ಯಾಸ/ಅಪೂರ್ಣ ಇದ್ದ ಮತ್ತು ಖಾತೆಯಲ್ಲಿ ಹಣವಿಲ್ಲದ ಕಾರಣಕ್ಕೆ 2008ರ ಆ.29ರಂದು ಚೆಕ್‌ ಬೌನ್ಸ್‌ ಆಗಿತ್ತು. ಇದರಿಂದ ರಾಜು 2008ರ ಸೆ.26ರಂದು ಲೀಗಲ್‌ ನೋಟಿಸ್‌ ನೀಡಿ ಹಣ ಹಿಂದಿರುಗಿಸುವಂತೆ ಸೂಚಿಸಿದ್ದರು. ಲೀಗಲ್‌ ನೋಟಿಸ್‌ ಸ್ವೀಕರಿಸಿದರೂ ಮಂಜುನಾಥ್‌ ಉತ್ತರ ನೀಡಲಿಲ್ಲ.

ಸಾಲದ ಹಣ ಹಿಂದಿರುಗಿಸದೆ ಇದ್ದಾಗ ರಾಜು ಅವರು ಎನ್‌ಐ ಕಾಯ್ದೆ ಸೆಕ್ಷನ್‌ 138ರ ಅಡಿಯಲ್ಲಿ ಚೆಕ್‌ ಬೌನ್ಸ್‌ ಆರೋಪ ಸಂಬಂಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 16ನೇ ಎಸಿಎಂಎಂ ನ್ಯಾಯಾಲಯ ಮಂಜುನಾಥ್‌ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ 2009ರ ಡಿ.17ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜು ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಚ್‌ ಆದೇಶವೇನು?: ಎನ್‌ಐ ಕಾಯ್ದೆಯ ನಿಯಮಗಳ ಪ್ರಕಾರ, ಚೆಕ್‌ ಬೌನ್ಸ್‌ ಆದ ದಿನದಿಂದ 30 ದಿನಗಳಲ್ಲಿ ಸಾಲದ ಹಣ ಮರುಪಾವತಿಗೆ ಬೇಡಿಕೆ ಮುಂದಿಟ್ಟು ಲೀಗಲ್‌ ನೋಟಿಸ್‌ ನೀಡಬೇಕು. ಆದರೆ, ಈ ಪ್ರಕರಣದಲ್ಲಿ 2008ರ ಸೆ.26ರಂದು ಲೀಗಲ್‌ ನೊಟಿಸ್‌ ಜಾರಿ ಮಾಡಿ ಹಣ ಹಿಂಪಾವತಿಗೆ ಸೂಚಿಸಲಾಗಿದೆ. ಪಾಟಿ ಸವಾಲು ವೇಳೆ ರಾಜು ನೀಡಿದ ಹೇಳಿಕೆ ಪ್ರಕಾರ ಒಪ್ಪಂದದ ಅವಧಿ ಮುಕ್ತಾಯವಾದ ನಂತರ ದಿನಾಂಕ ನಮೂದಿಸಿ ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಲಾಗಿದೆ. ಚೆಕ್‌ ಬೌನ್ಸ್‌ ಆದ ಕಾರಣ ಎನ್‌ಐ ಕಾಯ್ದೆ ಸೆಕ್ಷನ್‌ 138ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಒಪ್ಪಂದ ಮಾಡಿಕೊಂಡ ದಿನವೇ ಅಂದರೆ 2004ರ ಅ.29ರಂದು ದಿನಾಂಕ ನಮೂದಿಸದ ಮೂರು ಚೆಕ್‌ಗಳನ್ನು ರಾಜುಗೆ ಮಂಜುನಾಥ್‌ ನೀಡಿದ್ದರು. ಚೆಕ್‌ನಲ್ಲಿ ದಿನಾಂಕ ನಮೂದಿಸದೇ ಇದ್ದ ಸಂದರ್ಭದಲ್ಲಿ ಚೆಕ್‌ ವಿತರಿಸಿದ ಆರು ತಿಂಗಳ ನಂತರ ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಒಪ್ಪಂದ ಅವಧಿಯಾದ ಮೂರು ವರ್ಷ ಮುಗಿದ ಮೇಲೆ 10 ತಿಂಗಳ ನಂತರ ಚೆಕ್‌ ಅನ್ನು ಬ್ಯಾಂಕಿಗೆ ಸಲ್ಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸದೆ ನ್ಯಾಯಾಲಯಕ್ಕೆ ಅನ್ಯಮಾರ್ಗವಿಲ್ಲ. ಅದರಂತೆ ಎನ್‌ಐ ಕಾಯ್ದೆಯ ಸೆಕ್ಷನ್‌ 138 ಅಡಿ ದಾಖಲಿಸಿದ ಚೆಕ್‌ ಬೌನ್ಸ್‌ ಪ್ರಕರಣದಿಂದ ಮಂಜುನಾಥ್‌ನನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವು ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತೀರ್ಮಾನಿಸಿದ ಹೈಕೋರ್ಚ್‌, ರಾಜು ಮೇಲ್ಮನವಿಯನ್ನು ವಜಾಗೊಳಿಸಿದೆ.

 Check Bounce Case:ಎಚ್ಚೆತ್ತ ಜಿಲ್ಲಾಡಳಿತ,ಸುರಪುರ KGB ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕೇಸ್

ಸೆಕ್ಷನ್‌ 138 ಏನು ಹೇಳುತ್ತದೆ?: ಎನ್‌ಐ ಕಾಯ್ದೆಗೆ 2002ರಲ್ಲಿ ತಿದ್ದುಪಡಿ ತಂದ ನಂತರ ಸೆಕ್ಷನ್‌ 138 ಅಡಿಯ ಚೆಕ್ ಬೌನ್ಸ್‌ ಪ್ರಕರಣದಲ್ಲಿ ಆರೋಪ ಸಾಬೀತಾದರೆ ದೋಷಿಗೆ ಎರಡು ವರ್ಷದವರೆಗೆ ಶಿಕ್ಷೆ ವಿಸ್ತರಿಸಬಹುದು ಹಾಗೂ ಚೆಕ್‌ ಮೊತ್ತದ ಎರಡಷ್ಟುದಂಡ ವಿಧಿsಬಹುದು. ಅದಕ್ಕೂ ಮುನ್ನ ಮ್ಯಾಜಿಸ್ಪ್ರೇಟ್‌ ಕೋರ್ಚ್‌ ವಿಚಾರಣೆ ನಡೆಸಬೇಕಾಗುತ್ತದೆ. ಆರೋಪ ಸಾಬೀತು ಮಾಡಿದರೆ ಒಂದು ವರ್ಷ ಮೀರದಂತೆ ಜೈಲು ಶಿಕ್ಷೆ ಮತ್ತು 5 ಸಾವಿರ ರು.ಗಿಂತ ಹೆಚ್ಚು ದಂಡ ವಿಧಿಸಬಹುದು. ಆದರೆ, ಪರಿಹಾರ ಘೋಷಿಸಲು ಯಾವುದೇ ಮಿತಿ ಇರುವುದಿಲ್ಲ.

Follow Us:
Download App:
  • android
  • ios