ಈ ವರ್ಷದಿಂದ ರಸೆಲ್‌ ಮಾರ್ಕೆಟಲ್ಲಿ ‘ಮಾರ್ಕೆಟ್‌ ಶೋ’ ವೈಭವಕ್ಕೆ ಸಿದ್ಧತೆ -39 ವರ್ಷಗಳ ಬಳಿಕ ಶೋ ಆರಂಭಕ್ಕೆ ಮಾರುಕಟ್ಟೆಸಂಘಟನೆಗಳ ನಿರ್ಧಾರ ಮಳಿಗೆಯಲ್ಲಿ ಅಪರೂಪದ ವಸ್ತುಗಳ ಪ್ರದರ್ಶನಕ್ಕೆ ವ್ಯಾಪಾರಿಗಳ ತಯಾರಿ

ಮಯೂರ ಹೆಗಡೆ

 ಬೆಂಗಳೂರು (ಡಿ.5) : ರಸೆಲ್‌ ಮಾರ್ಕೆಟ್‌ನಲ್ಲಿ 39 ವರ್ಷಗಳ ಬಳಿಕ ಕ್ರಿಸ್‌ಮಸ್‌ನ ‘ಮಾರ್ಕೆಟ್‌ ಶೋ’ ಪುನರ್‌ ಆರಂಭಿಸಲು ವ್ಯಾಪಾರಿಗಳ ಸಂಘಟನೆ ನಿರ್ಧರಿಸಿದೆ. ಮಾಲ್‌, ಆನ್‌ಲೈನ್‌ ಶಾಪಿಂಗ್‌ ನಡುವೆ ಮಾರುಕಟ್ಟೆಯ ವೈಭವ ಕಳೆಗುಂದದಂತೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಕ್ರಿಸ್‌ಮಸ್‌ನಲ್ಲಿ ರಸೆಲ್‌ ಮಾರುಕಟ್ಟೆಸುತ್ತಮುತ್ತ ಹಬ್ಬದ ವಾತಾವರಣ ಇರುವುದು ಸಾಮಾನ್ಯ. ಅದಕ್ಕೆ ಇನ್ನಷ್ಟುಮೆರಗು ನೀಡಲು, ಹಳೆ ವೈಭವ ಮರುಕಳಿಸಲು ಈ ವರ್ಷದಿಂದ ಮಾರ್ಕೆಟ್‌ ಶೋ ನಡೆಸಲು ವ್ಯಾಪಾರಿ ಸಂಘಟನೆಗಳು ತೀರ್ಮಾನಿಸಿವೆ.

ಹೇಗಿದೆ ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್ ಡಿಸೇಲ್ ದರ

1983ರಲ್ಲಿ ಕೊನೆಯದಾಗಿ ‘ಮಾರ್ಕೆಟ್‌ ಶೋ’ ನಡೆದಿತ್ತು. ಅದಾದ ಬಳಿಕ ಹಲವು ಕಾರಣದಿಂದ ಈ ಉತ್ಸವ ನಿಂತುಹೋಗಿದೆ. ರಸೆಲ್‌ ಮಾರುಕಟ್ಟೆಯಲ್ಲಿ ಸುಮಾರು 475 ಮಳಿಗೆಗಳಿವೆ. ಹಣ್ಣು, ಡ್ರೈಫä್ರಟ್ಸ್‌, ತರಕಾರಿ, ಹೂವು, ಮೀನು, ಮಾಂಸದ ಅಂಗಡಿಗಳನ್ನು ವಿದ್ಯುತ್‌ ಅಲಂಕಾರ ಮಾಡಲಾಗುವುದು. ಇತರೆ ರಾಜ್ಯ, ವಿದೇಶಗಳಿಂದ ಬರುವ ಹಣ್ಣು, ಪರಿಕರ ಸೇರಿ ಇತರ ವಸ್ತುಗಳ ಮಾರಾಟ, ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿಕೊಳ್ಳುವಂತೆ ಎಲ್ಲ ಮಳಿಗೆಗಳ ವ್ಯಾಪಾರಿಗಳಿಗೆ ತಿಳಿಸಲಾಗುವುದು ಎಂದು ರಸೆಲ್‌ ಮಾರ್ಕೆಟ್‌ ಟ್ರೇಡರ್ಸ್‌ ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ಮಹ್ಮದ್‌ ಇದ್ರಿಸ್‌ ಚೌಧರಿ ತಿಳಿಸಿದರು.

ಈ ಬಾರಿ ಡೆಮೋ ರೀತಿಯಲ್ಲಿ ನಾವೇ ವ್ಯಾಪಾರಿಗಳು ಮಾರ್ಕೆಟ್‌ ಶೋ ಮಾಡಲಿದ್ದೇವೆ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕೇಳಿಕೊಳ್ಳಲಾಗುವುದು. ಮುಖ್ಯ ಆಯುಕ್ತರು, ಶಾಸಕರ ಜತೆಗೆ ಈ ಕುರಿತು ಚರ್ಚಿಸಲಿದ್ದೇವೆ ಎಂದು ಅಸೋಸಿಯೇಶನ್‌ ತಿಳಿಸಿದೆ.

ಹೊಸ ಬಣ್ಣ:

ಸ್ಮಾರ್ಚ್‌ ಸಿಟಿ ಯೋಜನೆಯಿಂದ ನಿರ್ಮಾಣ ಆಗುತ್ತಿರುವ ಮಾರುಕಟ್ಟೆಇನ್ನೆರಡು ತಿಂಗಳಲ್ಲಿ ಉದ್ಘಾಟನೆ ಆಗಲಿದೆ. ಮಾರ್ಕೆಟ್‌ ಶೋ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ರಸೆಲ್‌ ಮಾರುಕಟ್ಟೆಯಲ್ಲಿನ ಕುಂದು ಕೊರತೆ ನೀಗಿಸಲು ಬಿಬಿಎಂಪಿ ಅಧಿಕಾರಿಗಳನ್ನು ವ್ಯಾಪಾರಿಗಳು ಕೋರಿದ್ದಾರೆ. ಇದೀಗ ಮಾರುಕಟ್ಟೆಗೆ ನಾಲ್ಕೈದು ವರ್ಷಗಳ ಬಳಿಕ ಸುಣ್ಣಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ.

ಸೋರುವ ಮಾಳಿಗೆ:

ಮಾರುಕಟ್ಟೆಯ ರೂಫ್‌ಟಾಪ್‌ ಒಡೆದಿರುವ ಕಾರಣ ಮಳೆಗಾಲದಲ್ಲಿ ಮಳಿಗೆಗಳ ಒಳಗೆ ನೀರು ಬರುತ್ತಿದೆ. ಆದಷ್ಟುಬೇಗ ದುರಸ್ತಿ ಮಾಡಿಕೊಡಲು ಬಿಬಿಎಂಪಿಯನ್ನು ಆಗ್ರಹಿಸಿದ್ದೇವೆ. ಶಾಸಕ ರಿಜ್ವಾನ್‌ ಅರ್ಷದ್‌ ಅವರು ಶನಿವಾರ ಭೇಟಿ ನೀಡಿ ಮಾರುಕಟ್ಟೆಯಲ್ಲಿನ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.

Bengaluru: ಇನ್ನೂ ಪತ್ತೆಯಾಗದ ಚಿರತೆ; ಆತಂಕದಲ್ಲಿ ಜನ

ಏನಿದು ಮಾರ್ಕೆಟ್‌ ಶೋ

ರಸೆಲ್‌ ಮಾರ್ಕೆಟ್‌ ನಿರ್ಮಾಣ ಆಗಿದ್ದು 1927ರಲ್ಲಿ. ಬ್ರಿಟಿಷ್‌ ಕಾಲದಿಂದ ಕ್ರಿಸ್‌ಮಸ್‌ ವೇಳೆ ರಸೆಲ್‌ ಮಾರುಕಟ್ಟೆಯಲ್ಲಿ ‘ಮಾರ್ಕೆಟ್‌ ಶೋ’ ನಡೆಯುತ್ತಿತ್ತು. ಡಿ.24, 25ರಂದು ಮಾರುಕಟ್ಟೆಯ ಮಳಿಗೆಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗುತ್ತಿತ್ತು. ದೇಶ, ವಿದೇಶದಿಂದ ಖಾದ್ಯ, ವಸ್ತುಗಳನ್ನು ತಂದು ಮಾರಾಟ ಮಾಡಲಾಗುತ್ತಿತ್ತು. ಇದರಲ್ಲಿ ವಿಶೇಷವಾಗಿ ಕಾಣುತ್ತಿದ್ದ, ಅಪರೂಪದ ವಸ್ತುಗಳನ್ನು ತರಿಸುತ್ತಿದ್ದ ಮಳಿಗೆಗಳಿಗೆ ಬ್ರಿಟಿಷ್‌ ಆಡಳಿತ ಚಿನ್ನದ ಪದಕ, ಪ್ರಶಸ್ತಿ ನೀಡುತ್ತಿದ್ದರು ಎಂದು ಅಸೋಸಿಯೇಶನ್‌ ಪದಾಧಿಕಾರಿಗಳು ಹೇಳಿದರು.

1983ರ ಬಳಿಕ ನಿಂತಿದ್ದ ಮಾರ್ಕೆಟ್‌ ಶೋ ಮರು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಮಾಲ್‌, ಆನ್‌ಲೈನ್‌ ಶಾಪಿಂಗ್‌ ನಡುವೆ ನೇರ ಮಾರುಕಟ್ಟೆಯ ಸಂಸ್ಕೃತಿ ಉಳಿಸಲು ಇದನ್ನು ಆಯೋಜಿಸಲಾಗುವುದು.

ಸ್ಮಾರ್ಚ್‌ಸಿಟಿ ಮಾರುಕಟ್ಟೆಶೀಘ್ರ ಉದ್ಘಾಟನೆ ಆಗಲಿದೆ. ಅದಕ್ಕೂ ಮುನ್ನ ರಸೆಲ್‌ ಮಾರುಕಟ್ಟೆಯ ಸಮಸ್ಯೆ ನೀಗಿಸುವಂತೆ ವ್ಯಾಪಾರಿಗಳು ಕೋರಿದ್ದಾರೆ. ಹೊಸದಾಗಿ ಬಣ್ಣ ಬಳಿಯುವುದು ಸೇರಿ ಇತರೆ ಕಾಮಗಾರಿ ಕೈಗೊಳ್ಳಲಾಗಿದೆ.

-ಸೈಫುದ್ದಿನ್‌ ಮುಷೀರ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಬಿಬಿಎಂಪಿ