Asianet Suvarna News Asianet Suvarna News

ಜೀವ ವೈವಿಧ್ಯಕ್ಕೆ ಕಾದಿದೆಯಾ ಗಂಡಾಂತರ : ಭಾರೀ ಆತಂಕ

ಸಾಧಾರಣವಾಗಿ ಡಿಸೆಂಬರ್‌- ಜನವರಿ ತಿಂಗಳಲ್ಲಿ ಹೂ ಬಿಡಬೇಕಿದ್ದ ನಿತ್ಯಹರಿದ್ವರ್ಣದ ಬಹುತೇಕ ಹಣ್ಣಿನ ಮರಗಳೆಲ್ಲ ಈಗಲೇ ಹೂವು ಚಿಗುರೊಡೆಯುತ್ತಿದ್ದು, ಜೀವವೈವಿಧ್ಯತೆಯನ್ನು ಅಲ್ಲೋಲ ಕಲ್ಲೋಲಗೊಳಿಸುವ ಲಕ್ಷಣಗಳು ಗೋಚರಿಸುತ್ತಿವೆ.

Affected bio diversity may cause calamities...
Author
Bengaluru, First Published Oct 8, 2018, 10:29 AM IST
  • Facebook
  • Twitter
  • Whatsapp

ಮಂಗಳೂರು :  ಮಳೆಗಾಲದಲ್ಲಿ ವ್ಯಾಪಕ ಭೂಕುಸಿತವಾಗಿ ಭಾರಿ ಪ್ರಕೃತಿ ವೈಪರೀತ್ಯಕ್ಕೆ ತುತ್ತಾದ ರಾಜ್ಯದ ಜೀವನಾಡಿ ಪಶ್ಚಿಮಘಟ್ಟ ಆ ಕಾರಣದಿಂದಲೇ ಇದೀಗ ಇನ್ನೊಂದು ಅಸಹಜ ವಿಕೋಪಕ್ಕೆ ತುತ್ತಾಗಿದೆ. ಸಾಧಾರಣವಾಗಿ ಡಿಸೆಂಬರ್‌- ಜನವರಿ ತಿಂಗಳಲ್ಲಿ ಹೂ ಬಿಡಬೇಕಿದ್ದ ನಿತ್ಯಹರಿದ್ವರ್ಣದ ಬಹುತೇಕ ಹಣ್ಣಿನ ಮರಗಳೆಲ್ಲ ಈಗಲೇ ಹೂವು ಚಿಗುರೊಡೆಯುತ್ತಿದ್ದು, ಜೀವವೈವಿಧ್ಯತೆಯನ್ನು ಅಲ್ಲೋಲ ಕಲ್ಲೋಲಗೊಳಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಇಲ್ಲಿರುವ ಮಾವು, ಹೊಳೆ ಹೊನ್ನೆ, ರಾಮಪತ್ರೆ, ರಕ್ತಮರ, ಅಶೋಕ ಸೇರಿದಂತೆ ಇನ್ನೂ ಅನೇಕ ಜಾತಿಯ ಮರಗಳೆಲ್ಲ ಅಕ್ಟೋಬರ್‌ ಮೊದಲ ವಾರದಲ್ಲೇ ಹೂಬಿಟ್ಟು ನಳನಳಿಸುತ್ತಿವೆ. ಘಟ್ಟಮಾತ್ರವಲ್ಲದೆ ಅದರ ಸುತ್ತಲಿನ ಪ್ರದೇಶಗಳಲ್ಲಿರುವ ಸ್ಥಳೀಯ ಪ್ರಭೇದದ ಮರಗಳು ಕೂಡ ಅವಧಿಗೆ ಮೊದಲೇ ಹೂ ಬಿಡುತ್ತಿವೆ. ಇನ್ನೂ ಕೆಲವು ಮರಗಳು ಹೂ ಬಿಡುವ ಹಂತದಲ್ಲಿವೆ. ಕರಾವಳಿಯಲ್ಲಂತೂ ಬಹುತೇಕ ಮಾವಿನ ಮರಗಳು ಈಗಲೇ ಚಿಗುರೊಡೆದು ನಿಂತಿದ್ದು, ಇದೆಲ್ಲವೂ ಪ್ರಕೃತಿಯಲ್ಲಿ ಅಸಮತೋಲನ ಸೃಷ್ಟಿಸುವ ಅಪಾಯದ ಮುನ್ಸೂಚನೆ ಒದಗಿಸಿದೆ.

ಪ್ರಕೃತಿ ವೈಪರೀತ್ಯದ ಫಲ!:

ಇತ್ತೀಚೆಗೆ ಘಟ್ಟಪ್ರದೇಶದಲ್ಲಿ ವ್ಯಾಪಕ ಭೂಕುಸಿತ ನಡೆದ ಬಳಿಕ ಉಂಟಾದ ಹವಾಮಾನ ಬದಲಾವಣೆಯೇ ಇದಕ್ಕೆ ಕಾರಣ ಎಂದು ಸಸ್ಯಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಆಗಸ್ಟ್‌ ತಿಂಗಳ ಮೊದಲಾರ್ಧದಲ್ಲಿ ವಾಡಿಕೆಗಿಂತ ಹೆಚ್ಚು- ಭಾರಿ ಮಳೆ ಭೋರ್ಗರೆದು ಸುರಿದಿತ್ತು. ಮಾನವ ಹಸ್ತಕ್ಷೇಪ ನಡೆದ ಘಟ್ಟಪ್ರದೇಶಗಳಲ್ಲೆಲ್ಲ ಪರ್ವತ ಶ್ರೇಣಿಗಳೇ ಕುಸಿದು ನೆಲ, ಜಲ, ಪ್ರಾಣಿ, ಮನುಷ್ಯ ಸಂಕುಲಕ್ಕೆ ಹಿಂದೆಂದೂ ಇಲ್ಲದಷ್ಟುಹಾನಿ ಸಂಭವಿಸಿತ್ತು. ಸಣ್ಣಪುಟ್ಟನದಿ, ತೊರೆಗಳು ಪಥ ಬದಲಿಸಿದ್ದವು. ನೀರ ಸೆಲೆಗಳೆಲ್ಲ ಬಂದ್‌ ಆಗಿದ್ದವು. ಈ ವೈಪರೀತ್ಯದ ಬೆನ್ನಲ್ಲೇ ಘಟ್ಟಸೇರಿದಂತೆ ಆಸುಪಾಸಿನ ಜಿಲ್ಲೆಗಳಲ್ಲಿ ಭೀಕರ ಬಿಸಿಲಿನ ತಾಂಡವ. ಪ್ರವಾಹ ರೂಪಿಗಳಾಗಿದ್ದ ಪ್ರಮುಖ ನದಿಗಳೆಲ್ಲ ಒಂದೇ ತಿಂಗಳಲ್ಲಿ ಬರಿದಾಗಿದ್ದವು. ಮಳೆಗಾಲದ ಅವಧಿಯಲ್ಲೇ ಎರಡು ಬಗೆಯ ಹವಾಮಾನ ವೈಪರೀತ್ಯಕ್ಕೆ ಪ್ರಕೃತಿ ತುತ್ತಾಗಿರುವುದರಿಂದ ಮರಗಳೂ ಅದಕ್ಕೆ ತಕ್ಕುದಾಗಿ ಅನಿವಾರ್ಯವಾಗಿ ಅವಧಿಪೂರ್ವ ಪ್ರಸವದ ಬಲಿಪಶುವಾಗಿವೆ.

ಮರಗಳ ಹಾರ್ಮೋನು ಬದಲಾವಣೆ:

‘‘ಮರಗಳು ಹೂ ಬಿಡುವುದು ಹಾರ್ಮೋನುಗಳ ಕಾರಣದಿಂದ. ಈ ಹಾರ್ಮೋನುಗಳ ಸ್ರವಿಸುವಿಕೆ ಹವಾಮಾನದ ಉಷ್ಣಾಂಶ ಮತ್ತು ಮಣ್ಣಿನ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಬಾರಿ ಭಾರಿ ಮಳೆ ಬಂದು ಒಮ್ಮೆಗೇ ನಿಂತುಬಿಟ್ಟಿತು. ಕೂಡಲೇ ಬಿಸಿಲಿನ ತಾಪ 32 ಡಿಗ್ರಿ ಸೆಲ್ಸಿಯಸ್‌ ತಲುಪಿತು. ಇಂತಹ ಅಸಹಜ ಪರಿಸ್ಥಿತಿಯಿಂದಾಗಿ 2 ತಿಂಗಳ ಮೊದಲೇ ಪಶ್ಚಿಮ ಘಟ್ಟದ ಸಸ್ಯ ಪ್ರಭೇದಗಳು ಹೂಬಿಡತೊಡಗಿವೆ. ಮಣ್ಣಿನಡಿಯ ಮತ್ತು ನೆಲದ ಮೇಲಿನ ಪ್ರಾಣಿ ಸಂಕುಲಕ್ಕೆ ಇದು ಅಪಾಯದ ಮುನ್ನೆಚ್ಚರಿಕೆ’’ ಎಂದು ಪಿಲಿಕುಳ ಸಸ್ಯಶಾಸ್ತ್ರ ವಿಭಾಗದ ಪ್ರಧಾನ ವಿಜ್ಞಾನಿ ಸೂರ್ಯಪ್ರಕಾಶ್‌ ಶೆಣೈ ಹೇಳುತ್ತಾರೆ.

ಪ್ರಾಣಿಗಳಿಗೆ ಆಹಾರ ಸಿಗಲ್ಲ:

ಹೀಗೆ ಅಸಹಜ ಹೂಬಿಡುವಿಕೆಯಿಂದ ಬಹುತೇಕ ಹೂವುಗಳು ಕಾಯಿ ಕಟ್ಟಲಾಗದು. ಇದರಿಂದ ಸಸ್ಯ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಕಾಡಿನ ಹಣ್ಣುಗಳನ್ನೇ ನಂಬಿಕೊಂಡಿರುವ ಅನೇಕ ಜಾತಿಯ ಕಾಡು ಪ್ರಾಣಿಗಳಿವೆ. ಆಯಾ ಋುತುಮಾನದ ಹಣ್ಣುಗಳಿಗಾಗಿ ಅವು ಕಾಯುತ್ತಿರುತ್ತವೆ. ಆ ಕಾಲದಲ್ಲೇ ಹಣ್ಣು ಸಿಗದೆ ಕಂಗಾಲಾಗುತ್ತವೆ. ಕಾಡು ಬಿಟ್ಟು ನಾಡಿಗೆ ಲಗ್ಗೆಯಿಡುವ ಸಾಧ್ಯತೆಯಿಂದ ಮಾನವ- ಪ್ರಾಣಿ ಸಂಘರ್ಷ ಹೆಚ್ಚಲಿದೆ. ಹಕ್ಕಿ, ಚಿಟ್ಟೆಗಳಂತೂ ಋುತುಮಾನಕ್ಕೆ ತಕ್ಕುದಾಗಿ ಹೂಗಳ ಮಕರಂದ ಸಿಗದೆ ಅವುಗಳ ಅಸ್ತಿತ್ವಕ್ಕೇ ಸಂಚಕಾರ ಬಂದೀತು. ಹೀಗಾದಲ್ಲಿ ಇಡೀ ವನ್ಯಜೀವಿ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಲಿದೆ ಎನ್ನುತ್ತಾರೆ ಸೂರ್ಯಪ್ರಕಾಶ್‌ ಶೆಣೈ.

ಮರಗಳು ಅವಧಿಗೆ ಮೊದಲೇ ಹೂ ಬಿಡುವುದನ್ನು ಈಗ ತಡೆಯಲು ಮಾನವನಿಂದ ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಾದರೂ ಇಂಥ ವೈಪರೀತ್ಯವನ್ನು ತಪ್ಪಿಸಬಹುದು. ಆದಷ್ಟುಹೆಚ್ಚು ಸಸ್ಯಗಳನ್ನು ನೆಡಬೇಕು. ಪಶ್ಚಿಮ ಘಟ್ಟದಲ್ಲಿ ಮಾನವ ಹಸ್ತಕ್ಷೇಪವನ್ನು ತಡೆಗಟ್ಟಬೇಕು. ಸಸ್ಯಗಳನ್ನು ನೆಡುವಾಗ ಸ್ಥಳೀಯ ಪ್ರಭೇದಗಳಿಗೆ ಹೆಚ್ಚು ಆದ್ಯತೆ ನೀಡಬೇಕು.

- ಸೂರ್ಯ ಪ್ರಕಾಶ್‌ ಶೆಣೈ, ಪಿಲಿಕುಳ ಸಸ್ಯಶಾಸ್ತ್ರ ವಿಭಾಗದ ಪ್ರಧಾನ ವಿಜ್ಞಾನಿ.

ಸಂದೀಪ್‌ ವಾಗ್ಲೆ

Follow Us:
Download App:
  • android
  • ios