ಏರೋ ಇಂಡಿಯಾ 2023 ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದರು. ಎಚ್‌ಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದ ಪ್ರಧಾನಿಯವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು.
ಬೆಂಗಳೂರು (ಫೆ.12): ಏರೋ ಇಂಡಿಯಾ 2023 ವೈಮಾನಿಕ ಶೋ ಕಾರ್ಯಕ್ರಮದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಬೆಂಗಳೂರುಗೆ ಆಗಮಿಸಿದರು. ಸೋಮವಾರ ಬೆಳಗ್ಗೆ 9.30ಕ್ಕೆ ಅವರು 14ನೇ ಆವೃತ್ತಿಯ ಏರ್ ಶೋಅನ್ನು ಉದ್ಘಾನೆ ಮಾಡಲಿದ್ದಾರೆ. ಯಲಹಂಕ ವಾಯುನನೆಲೆಯಲ್ಲಿ ಏರ್‌ಶೋ ಕಾರ್ಯಕ್ರಮ ನಡೆಯಲಿದೆ. ಎಚ್‌ಎಚ್‌ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗ್ಲೆಹೊಟ್ ಬರಮಾಡಿಕೊಂಡರು. ಭಾನುವಾರ ರಾತ್ರಿ ಅವರು ರಾಜಭವನದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅದಕ್ಕಾಗಿ ರಾಜಭವನದ ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲೆಡೆ ಸಿಸಿಟಿವಿಯಲ್ಲಿ ಕಣ್ಗಾವಲು ಇಡಲಾಗಿದೆ. ಸೋಮವಾರ ಬೆಳಗ್ಗೆ ಏರ್‌ಶೋ ಉದ್ಘಾಟನೆ ಮಾಡಿದ ಬಳಿಕ 11.30ರವರೆಗೆ ಯುದ್ಧ ವಿಮಾನಗಳ ಹಾರಾಟವನ್ನು ವೀಕ್ಷಿಸಲಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ರಸ್ತೆ ಮಾರ್ಗದ ಮೂಲಕ ರಾಜಭವನಕ್ಕೆ ತೆರಳಿದ್ದಾರೆ. ನಾಳೆ ಪ್ರಧಾನಿ ಮೋದಿ ರಾಜಭವನದಿಂದ ರಸ್ತೆ ಮಾರ್ಗವಾಗಿ ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ಗೆ ತೆರಳಲಿದ್ದಾರೆ.
ಮೋದಿ ಜೊತೆ ಔತಣಕೂಟ: ರಾಜಭವನದಲ್ಲಿ ಮೋದಿ ವಿವಿಧ ವಿಭಾಗಗಳ ಗಣ್ಯರೊಂದಿಗೆ ಔತಣಕೂಟ ನಡೆಸಿದರು. ಚಿತ್ರರಂಗದಿಂದ ನಟ ಯಶ್. ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಶ್ರದ್ಧಾ ಜೈನ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಪ್ರಶಾಂತ್ ನೀಲ್, ಕ್ರೀಡಾ ಕ್ಷೇತ್ರದಿಮದ ಅನಿಲ್ ಕುಂಬ್ಳೆ ದಂಪತಿ, ವೆಂಕಟೇಶ್ ಪ್ರಸಾದ್ ಜಾವಗಲ್ ಶ್ರೀನಾಥ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಉದ್ಯಮ ಕ್ಷೇತ್ರದಿಂದ ಜೀರೋಧಾದ ನಿತಿನ್ ಕಾಮತ್, ತರುಣ್ ಮೆಹ್ತಾ ಔತಣ ಕೂಟಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
