ಬೆಂಗಳೂರು(ಏ.07): ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಕೊರೋನಾ ಸೋಂಕಿತರಾಗಿದ್ದಾರೆಯೇ ಎಂಬುದನ್ನು ತಿಳಿಯಲು ತಜ್ಞರ ವೈದ್ಯರ ತಂಡವನ್ನು ಕಳುಹಿಸಿ ಪರಿಶೀಲಿಸಿ ವರದಿ ಪಡೆಯಬೇಕು ಎಂದು ಆಗ್ರಹಿಸಿ ನಗರ ಪೊಲೀಸ್‌ ಆಯುಕ್ತರಿಗೆ ಯುವತಿ ಪರ ವಕೀಲರು ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ಅತ್ಯಾಚಾರ ಪ್ರಕರಣದ ಆರೋಪಿ ರಮೇಶ್‌ ಜಾರಕಿಹೊಳಿ ಪರವಾಗಿ ಸಚಿವ ಬೈರತಿ ಬಸವರಾಜ್‌ ಅವರು ಮಾಹಿತಿ ನೀಡುವ ಹಿಂದೆ ತನಿಖೆ ಮೇಲೆ ಒತ್ತಡ ತರುವುದೇ ಆಗಿದೆ ಎಂದು ಯುವತಿ ಪರ ವಕೀಲ ಕೆ.ಎನ್‌.ಜಗದೀಶ್‌ ಹಾಗೂ ಸೂರ್ಯ ಮುಕುಂದರಾಜ್‌ ದೂರಿದ್ದಾರೆ.

CD ಕೇಸ್: ರಮೇಶ್​ ಜಾರಕಿಹೊಳಿ ದಾಖಲಾಗಿರುವ ಆಸ್ಪತ್ರೆಗೆ SIT ಅಧಿಕಾರಿಗಳು ದೌಡು

‘ಸೋಂಕು ಪೀಡಿತರಾದ ಜಾರಕಿಹೊಳಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೋಕಾಕ್‌ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ರವೀಂದ್ರ ಹೇಳಿಕೆ ನೀಡಿದ್ದಾರೆ. ವೈದ್ಯಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಐಸಿಯುನಲ್ಲಿ ವೆಂಟಿಲೇಟರ್‌ನ ಆಕ್ಸಿಜನ್‌ ಮಾಸ್ಕ್‌ ಬದಲು ಬಟ್ಟೆ ಮಾಸ್ಕ್‌ ಹಾಕಿಸಿ ಚಿಕಿತ್ಸೆ ನೀಡುವ ಹೊಸ ವಿಧಾನವನ್ನು ಗೋಕಾಕ್‌ ಆಸ್ಪತ್ರೆ ವೈದ್ಯರು ಪರಿಚಯಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.