ಹಿಟ್ಲರ್ ಕೂಡ ಮೋದಿ ರೀತಿಯೇ ವರ್ತಿಸ್ತಿದ್ದ: ಸಿದ್ದು| ನಾನು ಹುಟ್ಟಿದ ದಿನವೇ ಗೊತ್ತಿಲ್ಲ, ನಮ್ಮಪ್ಪಂದು ಹೇಗೆ ತರಲಿ?| ಮೋದಿ, ಶಾ ಇಬ್ಬರೂ ಕ್ರೂರಿಗಳು| ಹಿಟ್ಲರ್ ಥರದವರು ಮಾತ್ರ ಪೌರತ್ವ ತಿದ್ದುಪಡಿಯಂತಹ ಕಾಯ್ದೆ ತರಬಲ್ಲರು
ಬೆಂಗಳೂರು[ಜ.09]: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರೂರಿಗಳು. ಹಿಟ್ಲರ್‌ನಂತಹ ಕ್ರೂರಿ ಮಾತ್ರ ಪೌರತ್ವ ತಿದ್ದುಪಡಿಯಂತಹ ಕಾಯ್ದೆ ಮಾಡಬಲ್ಲ. ನರೇಂದ್ರ ಮೋದಿಯಂತೆ ಹಿಟ್ಲರ್ ಕೂಡ ತನ್ನ ಕೊನೆಯ ದಿನಗಳಲ್ಲಿ ಅತ್ಯಂತ ಕ್ರೂರಿಯಾಗಿ ವರ್ತಿಸುತ್ತಿದ್ದ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮೋದಿ ಹಾಗೂ ಶಾ ವಿರುದ್ಧ ಹರಿಹಾಯ್ದಿದ್ದಾರೆ.
ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ವಿಚಾರ ಸಂಕಿರಣದಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿಚಾರದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಒಂದೊಂದು ವೇದಿಕೆಯಲ್ಲಿ ಒಂದೊಂದು ಮಾಹಿತಿ ನೀಡಿ ಜನರನ್ನು ವಂಚಿಸುತ್ತಿದ್ದಾರೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ತದ್ವಿರುದ್ಧವಾದ ನಿಲುವು ಮಂಡಿಸುತ್ತಿದ್ದು, ಯಾರು ಸತ್ಯ ನುಡಿಯುತ್ತಿದ್ದಾರೆ ಎಂಬುದನ್ನು ಅವರೇ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ನನ್ನ ಜನ್ಮ ದಿನಾಂಕವೇ ಗೊತ್ತಿಲ್ಲ:
ಕೇಂದ್ರ ಸರ್ಕಾರವು ಪೌರತ್ವ ಸಾಬೀತಿಗೆ ತಂದೆ, ತಾಯಿಯರ ದಾಖಲೆ ಕೇಳುತ್ತದೆ. ನನಗೆ ನಾನು ಹುಟ್ಟಿದ ದಿನಾಂಕವೇ ಗೊತ್ತಿಲ್ಲ. ನಾನು ಹುಟ್ಟಿದ ದಿನಾಂಕವನ್ನು ನನ್ನ ಶಾಲೆಯ ಶಿಕ್ಷಕರು ಬರೆದಿದ್ದಾರೆ. ಇನ್ನು ನಮ್ಮ ತಂದೆ ಹಾಗೂ ತಾಯಿ ಹುಟ್ಟಿದ ದಿನಾಂಕವನ್ನು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ದೀಪಿಕಾ ಪಡುಕೋಣೆ ನಟನೆಯ ಛಪಾಕ್ ಚಿತ್ರ ಬಹಿಷ್ಕರಿಸುವಂತೆ ನಡೆಯುತ್ತಿರುವ ಅಭಿಯಾನದ ಬಗ್ಗೆ ಮಾತನಾಡಿದ ಅವರು, ಸಿಎಎ ವಿರೋಧಿಸುವವರ ಚಲನಚಿತ್ರ ನೋಡಬೇಡಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಜನರೇನೂ ಅಮಾಯಕರಲ್ಲ. ಅವರು ಕ್ರೂರಿಗಳ ಮಾತನ್ನು ಕೇಳುವುದಿಲ್ಲ ಎಂದು ಹೇಳಿದರು.
ಜೆಎನ್‌ಯು ದಾಳಿ ಸರ್ಕಾರಿ ಪ್ರಾಯೋಜಿತ:
ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕಾಗಿ ಜೆಎನ್‌ಯು ಮೇಲೆ ದಾಳಿ ಮಾಡಿದ್ದಾರೆ. ಜೆಎನ್‌ಯು ಮೇಲೆ ನಡೆದಿರುವ ದಾಳಿ ಕೇಂದ್ರ ಸರ್ಕಾರದ ಪ್ರಾಯೋಜಿತ ದಾಳಿ. ಇಲ್ಲಿ ಯಾರು ದಾಳಿಗೆ ಒಳಗಾಗಿದ್ದಾರೋ ಅವರ ಮೇಲೆಯೇ ಎಫ್‌ಐಆರ್ ದಾಖಲು ಮಾಡಲಾಗಿದೆ. ಸಿಎಎ ವಿರೋಧ ಮಾಡುತ್ತಿರುವವರು ಕೇವಲ ಮುಸ್ಲಿಂ ಸಮುದಾಯದವರಲ್ಲ. ಹಿಂದೂಗಳು ಹೋರಾಟ ಮಾಡಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
