ಪವಿತ್ರಾಗೌಡಗೆ ಜಾಮೀನು ಸಿಕ್ಕಿದರೂ ಜೈಲಿಂದ ಹೊರಗೆ ಬರೋದು ಡೌಟು!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾಗೌಡ ಸೇರಿದಂತೆ 6 ಜನರಿಗೆ ಜಾಮೀನು ಮಂಜೂರಾಗಿದೆ. ಆದರೆ, ಕೋರ್ಟ್ ರಜೆಯಿಂದಾಗಿ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಕಡಿಮೆಯಿದೆ.
ಬೆಂಗಳೂರು (ಡಿ.13): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಎ1 ಆರೋಪಿ ಆಗಿರುವ ನಟಿ ಪವಿತ್ರಾಗೌಡ, ಎ-2 ದರ್ಶನ್ ಸೇರಿದಂತೆ ಒಟ್ಟು 7 ಜನರಿಗೆ ಜಾಮೀನು ಮಂಜೂರು ಆಗಿದೆ. ಆದರೆ, ಈ ಪೈಕಿ ಈಗಾಗಲೇ ದರ್ಶನ್ ತೂಗುದೀಪ ಜೈಲಿನಿಂದ ಹೊರಗಿದ್ದಾರೆ. ಆದರೆ, ಉಳಿದಂತೆ ನಟಿ ಪವಿತ್ರಾಗೌಡ ಸೇರಿದಂತೆ 6 ಜನರು ಜೈಲಿನಲ್ಲಿದ್ದು, ಅವರಿಗೆ ಜಾಮೀನು ಸಿಕ್ಕಿದರೂ ಇನ್ನೂ ಎರಡು ದಿನಗಳ ಕಾಲ ಜೈಲಿನಿಂದ ಹೊರಗೆ ಬರುವುದು ಅನುಮಾನವಾಗಿದೆ.
ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಪವಿತ್ರಾಗೌಡ, ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್ ಹಾಗೂ ಪ್ರದೂಷ್ ಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದರೂ ಈ ಆರೋಪಿಗಳು ಇಂದು ರಿಲೀಸ್ ಆಗೋದು ಅನುಮಾನವಾಗಿದೆ. ಈ ಎಲ್ಲ ಆರೋಪಿಗಳ ಪರ ವಕೀಲರು ಇಂದೇ ಅಧಿಕೃತ ಆದೇಶ ಪ್ರತಿ ಪಡೆದುಕೊಳ್ಳಬೇಕು. ಆದರೆ, ಇಂದು ಕೋರ್ಟ್ ಆದೇಶ ಪ್ರತಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬ ಮಾಹಿತಿ ಲಭ್ಯವಾಗುತ್ತಿದೆ.
ಇದನ್ನೂ ಓದಿ: Breaking: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಪವಿತ್ರಾ ಸೇರಿ 7 ಮಂದಿಗೆ ಜಾಮೀನು!
ಇನ್ನು ನಾಳೆ ಎರಡನೇ ಶನಿವಾರ ಹಾಗೂ ನಾಳಿದ್ದು ಭಾನುವಾರ ಆಗಿರುವುದರಿಂದ ಕೋರ್ಟ್ ರಜೆ ಇರುತ್ತದೆ. ಮುಂದಿನ ಎರಡು ದಿನಗಳ ಕಾಲ ಕೋರ್ಟ್ ಆದೇಶ ಪ್ರತಿಯ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಸೋಮವಾರ ಆದೇಶ ಪ್ರತಿ ಸಿಗುವ ಸಾಧ್ಯತೆಯಿದೆ. ಬಳಿಕ ಕೆಳ ಹಂತದ ನ್ಯಾಯಾಲಯದಲ್ಲಿ ಶ್ಯೂರಿಟಿ ಪೂರೈಕೆ ಮಾಡಬೇಕು. ಎಲ್ಲಾ ಜಾಮೀನು ಷರತ್ತು ಪೂರೈಸಿದ ಬಳಿಕವಷ್ಟೇ ಪವಿತ್ರಾಗೌಡ ಸೇರಿ ಇತರ 5 ಆರೋಪಿಗಳು ರಿಲೀಸ್ ಆಗೋ ಸಾಧ್ಯತೆಯಿದೆ. ಹೀಗಾಗಿ, ಪವಿತ್ರಾ ಗೌಡ ಸೋಮವಾರವೇ ಪರಪ್ಪನ ಅಗ್ರಹಾರ ಜೈಲಿನಿಂದ ಆರೋಪಿಗಳು ಬಿಡುಗಡೆ ಸಾಧ್ಯತೆಯಿದೆ. ಉಳಿದ ಆರೋಪಿಗಳು ಬೇರೆ ಬೇರೆ ಜಿಲ್ಲೆಗಳ ಜೈಲಿನಲ್ಲಿದ್ದು, ಸೋಮವಾರದೇ ಜೈಲಿನಿಂದ ಬಿಡುಗಡೆ ಆಗಿವ ಸಾಧ್ಯತೆಯಿದೆ.