ಮಂಗಳೂರು ವಿದ್ಯುತ್‌ ಸರಬರಾಜು ಸಂಸ್ಥೆ (ಮೆಸ್ಕಾಂ)ಯಿಂದ ನಡೆದ ಯಾವುದೇ ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದರೆ ಅದರ ಕುರಿತು ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾಹಿತಿ ನೀಡಿದರು. 

ವಿಧಾನಸಭೆ (ಮಾ.06): ಮಂಗಳೂರು ವಿದ್ಯುತ್‌ ಸರಬರಾಜು ಸಂಸ್ಥೆ (ಮೆಸ್ಕಾಂ)ಯಿಂದ ನಡೆದ ಯಾವುದೇ ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದರೆ ಅದರ ಕುರಿತು ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾಹಿತಿ ನೀಡಿದರು. ಬಿಜೆಪಿಯ ಆರಗ ಜ್ಞಾನೇಂದ್ರ ಅವರು ಮೆಸ್ಕಾಂನಿಂದ ಕಾಂಕ್ರಿಟ್‌ ವಿದ್ಯುತ್‌ ಕಂಬ, ರ್‍ಯಾಬಿಟ್‌ ವೈರ್‌ ಖರೀದಿ, ಅಳವಡಿಕೆ ಸೇರಿದಂತೆ ಇನ್ನಿತರ ಟೆಂಡರ್‌ನಲ್ಲಿ ಅಕ್ಮ ನಡೆದಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಬಿಡ್‌ ಮಾಡಿದ ಸಂಸ್ಥೆಗೆ ಟೆಂಡರ್‌ ನೀಡಲಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಗಮನ ಸೆಳೆದರು.

ಅದಕ್ಕುತ್ತರಿಸಿದ ಕೆ.ಜೆ.ಜಾರ್ಜ್‌, ಮೆಸ್ಕಾಂ ಸೇರಿದಂತೆ ಎಲ್ಲ ಎಸ್ಕಾಂಗಳಲ್ಲೂ ಈಗಿರುವ ಮಾರ್ಗಸೂಚಿ ದರವೂ ತೀರಾ ಕಡಿಮೆಯಿದೆ. ಹೀಗಾಗಿ ಅವುಗಳನ್ನು ಪ್ರಸ್ತುತ ಮಾರುಕಟ್ಟೆಯ ದರಕ್ಕೆ ತಕ್ಕಂತೆ ಪರಿಷ್ಕರಿಸುವಂತೆ ಸೂಚಿಸಿದ್ದೇನೆ. ಅಲ್ಲದೆ, ಮೆಸ್ಕಾಂನಿಂದ ಕರೆಯಲಾಗಿರುವ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ನೀವು ಆರೋಪಿಸುತ್ತಿದ್ದೀರಿ. ಈ ಕುರಿತು ಪರಿಶೀಲಿಸುತ್ತೇನೆ. ಅವ್ಯವಹಾರವಾಗಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಕೃಷಿಗೆ 7 ಗಂಟೆಗಿಂತ ಹೆಚ್ಚು ಕಾಲ ವಿದ್ಯುತ್: ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈತರಿಗೆ ಈಗಿರುವ 7 ಗಂಟೆಗಿಂತ ಹೆಚ್ಚು ವಿದ್ಯುತ್ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕುಸುಮ್ ಸಿ ಯೋಜನೆ ಮೂಲಕ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೈತರಿಗೆ 7 ಗಂಟೆಗಿಂತ ಹೆಚ್ಚು ಕಾಲ ವಿದ್ಯುತ್ ಪೂರೈಕೆ ಕಲ್ಪಿಸಲಾಗುವುದು ಎಂದರು. ಅದೇ ರೀತಿ ರೈತರು ಹೊಲಗಳಲ್ಲಿ ನಿರ್ಮಿಸಿರುವ ಮನೆಗಳಿಗೂ ನಿರಂತರ ಜ್ಯೋತಿ ಮೂಲಕ ಸಿಂಗಲ್ ಫೇಸ್ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮೋಟಾರ್‌ಗೆ ವಿದ್ಯುತ್‌ ಬಳಸಬಾರದು. 

ಯಾವುದೇ ಕಾರಣಕ್ಕೂ ಬೇಸಿಗೆಗೆ ಲೋಡ್ ಶೆಡ್ಡಿಂಗ್ ಇಲ್ಲ: ಸಚಿವ ಕೆ.ಜೆ.ಜಾರ್ಜ್

ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ 4 ಲಕ್ಷಕ್ಕೂ ಅಧಿಕ ಸಂಪರ್ಕಗಳನ್ನು ಶೀಘ್ರದಲ್ಲೇ ಸಕ್ರಮಗೊಳಿಸಲಾಗುವುದು ಎಂದರು. ಪಾವಗಡ ಬಳಿ ಈಗಾಗಲೇ 10 ಸಾವಿರ ಎಕರೆಯಲ್ಲಿ ಸೋಲಾರ್ ಸಿಸ್ಟಮ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇನ್ನು 10 ಸಾವಿರ ಎಕರೆಯಲ್ಲಿ ವಿದ್ಯುತ್‌ ಉತ್ಪಾದನೆಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ರೈತರು ಸಹ ಮುಂದೆ ಬಂದಿದ್ದಾರೆ. ಅವರು ರೈತರಾಗಲೀ, ಸಾರ್ವಜನಿಕರಾಗಲೀ ಅಕ್ರಮ ವಿದ್ಯುತ್ ಬಳಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು. ನಾನು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ, ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷದಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದೇನೆ. ಕಾಂಗ್ರೆಸ್ ಆಡಳಿತದಲ್ಲಿ ಸಚಿವನಾಗಿ ಅನೇಕ ಖಾತೆಗಳ ಜವಾಬ್ದಾರಿ ಹೊತ್ತಿದ್ದೇನೆ. ಕಾಂಗ್ರೆಸ್ ಇತಿಹಾಸವೆಂದರೆ ದೇಶದ ಇತಿಹಾಸವಾಗಿದೆ. ಪಕ್ಷನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.