Asianet Suvarna News Asianet Suvarna News

ಅಪಘಾತ ಹೆಚ್ಚಳ ; ಹೆದ್ದಾರೀಲಿ ವಾಹನಗಳ ವೇಗ ನಿಯಂತ್ರಣಕ್ಕೆ ಡ್ರೋನ್‌!

ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಸೇರಿದಂತೆ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಡ್ರೋನ್‌ ಕ್ಯಾಮೆರಾಗಳನ್ನು ಬಳಸಿಕೊಂಡು ವಾಹನಗಳ ಶರವೇಗದ ಓಟಕ್ಕೆ ಬ್ರೇಕ್‌ ಹಾಕಲು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಪೊಲೀಸರು ನಿರ್ಧರಿಸಿದ್ದಾರೆ.

Accident increase issue Drone set for speed control of dangerous vehicles at bengaluru rav
Author
First Published Jun 28, 2023, 1:45 AM IST

ಬೆಂಗಳೂರು (ಜೂ.28) ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಸೇರಿದಂತೆ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಡ್ರೋನ್‌ ಕ್ಯಾಮೆರಾಗಳನ್ನು ಬಳಸಿಕೊಂಡು ವಾಹನಗಳ ಶರವೇಗದ ಓಟಕ್ಕೆ ಬ್ರೇಕ್‌ ಹಾಕಲು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಪೊಲೀಸರು ನಿರ್ಧರಿಸಿದ್ದಾರೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಸಂಚಾರ ನಿರ್ವಹಣೆಗೆ ಡ್ರೋನ್‌ ಕ್ಯಾಮೆರಾಗಳು ಬಳಕೆಯಾಗಿದ್ದು, ಇನ್ನು ರಾಜ್ಯದಲ್ಲಿರುವ ರಾಷ್ಟ್ರೀಯ (ಎನ್‌ಎಚ್‌) ಹಾಗೂ ರಾಜ್ಯ (ಸ್ಟೇಟ್‌ ಹೈವೇ) ಹೆದ್ದಾರಿಗಳಲ್ಲಿ ಕೂಡಾ ಡ್ರೋನ್‌ಗಳು ಕಾಣಿಸಿಕೊಳ್ಳಲಿವೆ. ಇನ್ಮುಂದೆ ಹೆದ್ದಾರಿಗಳಲ್ಲಿ ವಿಲಾಸದಿಂದ ಎರ್ರಾಬಿರ್ರಿ ವಾಹನ ಚಲಾಯಿಸಿದರೆ ದಂಡ ತೆರಬೇಕಾಗುತ್ತದೆ.

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು-ದಿಣ್ಣೆ : ವಾಹನ ಸವಾರರೇ ಎಚ್ಚರ

ಹೆದ್ದಾರಿಗಳಲ್ಲಿ ಡ್ರೋನ್‌ ಕ್ಯಾಮೆರಾ ಮೂಲಕ ನಿಗದಿತ ಮಿತಿ ಮೀರಿ ಅತಿವೇಗವಾಗಿ ಚಲಿಸುವ ವಾಹನವನ್ನು ಗುರುತಿಸಲಾಗುತ್ತದೆ. ಬಳಿಕ ಆ ವಾಹನವನ್ನು ಟೋಲ್‌ ಬಳಿ ತಡೆದು ದಂಡ ಹಾಕುವುದು ಪೊಲೀಸರ ಯೋಜನೆಯಾಗಿದೆ. ಈ ಸಂಬಂಧ ಡ್ರೋನ್‌ ಬಳಕೆ ಬಗ್ಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಪೂರ್ವಸಿದ್ಧತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಹೆದ್ದಾರಿಗಳಲ್ಲಿ ಡ್ರೋನ್‌ಗಳ ಹಾರಾಟ ಶುರುವಾಗಲಿದೆ. ಈಗಾಗಲೇ ಹೆದ್ದಾರಿಗಳ ವ್ಯಾಪ್ತಿಯ ಜಿಲ್ಲೆಗಳ ಪೊಲೀಸರಿಗೆ ಹೊಸದಾಗಿ .2 ಕೋಟಿ ಮೌಲ್ಯದ ಡ್ರೋನ್‌ ಕ್ಯಾಮೆರಾಗಳನ್ನು ಪೂರೈಸುವ ಸಂಬಂಧ ಇಲಾಖೆಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗ ಪ್ರಸ್ತಾವನೆ ಸಲ್ಲಿಸಿದೆ.

ಡ್ರೋನ್‌ ಕ್ಯಾಮೆರಾ ಬಳಕೆ ಯಾಕೆ?

ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ಅತಿವೇವಾಗಿ ಚಲಿಸುವುದರಿಂದ ಅಪಘಾತ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ 9 ತಿಂಗಳ ಅವಧಿಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ 590 ಅಪಘಾತಗಳು ಸಂಭವಿಸಿ ಸುಮಾರು 158ಕ್ಕೂ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತಗಳಿಗೆ ವಾಹನಗಳ ಅತಿವೇಗದ ಚಾಲನೆಯೂ ಪ್ರಮುಖ ಕಾರಣವಾಗಿದೆ. ವಾಹನಗಳ ಓಡಾಟ ವಿರಳ ಎಂಬ ಕಾರಣಕ್ಕೆ ಜನರು ಹಿಗ್ಗಾಮುಗ್ಗಾ ವಾಹನ ಚಾಲನೆ ಮಾಡುತ್ತಾರೆ ಎನ್ನುತ್ತಾರೆ ಅಧಿಕಾರಿಗಳು.

ಈ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆ ಸಲುವಾಗಿ ಹೆದ್ದಾರಿಗಳ ವಾಹನಗಳ ಅತಿವೇಗದ ಚಾಲನೆಯನ್ನು ನಿರ್ಬಂಧಿಸಲು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ನಿರ್ಧರಿಸಿದ್ದಾರೆ. ಇದಕ್ಕಾಗಿ ಡ್ರೋನ್‌ ಕ್ಯಾಮೆರಾ ಬಳಸಿಕೊಂಡು ಹೆದ್ದಾರಿಯಲ್ಲಿ ಅತಿವೇಗ ಸಾಗುವ ವಾಹನಗಳಿಗೆ ಬ್ರೇಕ್‌ ಹಾಕಲಿದ್ದಾರೆ.

ಡ್ರೋನ್‌ ಬಳಕೆ ಹೇಗೆ?

ಹೆದ್ದಾರಿಗಳ ಟೋಲ್‌ಗೇಟ್‌ ಅಥವಾ ಹೆದ್ದಾರಿ ನಡುವೆ ಡ್ರೋನ್‌ ಕ್ಯಾಮೆರಾಗಳನ್ನು ಹಾರಿಸಲಾಗುತ್ತದೆ. ಪೊಲೀಸ್‌ ವಾಹನಗಳನ್ನು ನಿಲ್ಲಿಸಿ ಅವುಗಳನ್ನು ನಿರ್ವಹಿಸಲಾಗುತ್ತದೆ. ಆ ಹೆದ್ದಾರಿಯಲ್ಲಿ ಅತಿವೇಗವಾಗಿ ಚಲಿಸುವ ವಾಹನ ಪತ್ತೆ ಹಚ್ಚಿ ಆ ಮಾಹಿತಿಯನ್ನು ಟೋಲ್‌ಗೇಟ್‌ ಬಳಿ ಇರುವ ಸಂಚಾರ ಪೊಲೀಸರಿಗೆ ರವಾನಿಸಲಾಗುತ್ತದೆ. ಆ ವಾಹನವನ್ನು ಟೋಲ್‌ ಬಳಿ ತಡೆದು ಅತಿವೇಗ ಹಾಗೂ ಅಜಾಗರೂಕ ಚಾಲನೆ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ತಪ್ಪಿಗೆ ದಂಡ ವಿಧಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಲ್ಲೆಲ್ಲಿ ಡ್ರೋನ್‌ ಕ್ಯಾಮೆರಾ ಬಳಕೆ?

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌(Bengaluru mysuru expressway), ತುಮಕೂರು-ಚಿತ್ರದುರ್ಗ, ಉಡುಪಿ-ಮಂಗಳೂರು ಹಾಗೂ ಧಾರವಾಡ-ಬೆಳಗಾವಿ ಹೆದ್ದಾರಿಗಳ ಬಳಿ ಡ್ರೋನ್‌ ಬಳಕೆಗೆ ಗುರುತಿಸಲಾಗಿದೆ.

ದತ್ತಪೀಠದ ರಸ್ತೆಯಲ್ಲಿ ಡ್ರೋನ್‌ ಯಶಸ್ಸಿ

ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿಗೆ ಸಾಗುವ ರಸ್ತೆಯಲ್ಲಿ ಸಂಚಾರ ನಿರ್ವಹಣೆಗೆ ಡ್ರೋನ್‌ ಬಳಕೆ ಯಶಸ್ವಿಯಾಗಿದೆ. ಮೊದಲಿನಿಂದಲೂ ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಗಿ ಜನರು ತೊಂದರೆಗೆ ಸಿಲುಕುತ್ತಿದ್ದರು. ಈ ಸಮಸ್ಯೆ ತಿಳಿದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿದ್ದಾಗ ಅಲೋಕ್‌ ಕುಮಾರ್‌ ಅವರು, ಡ್ರೋನ್‌ ಬಳಸಿ ಸಂಚಾರ ನಿರ್ವಹಣೆ ಆರಂಭಿಸಿದರು. ಇದಕ್ಕೆ ಒಳ್ಳೆಯ ಫಲಿತಾಂಶ ಸಿಕ್ಕಿತು. ಈಗ ದತ್ತಪೀಠದ ಹಾದಿಯಲ್ಲಿ ವಾಹನಗಳ ಓಡಾಟಕ್ಕೆ ಸುಗಮವಾಗಿದೆ.

Bengaluru-Mysuru Expressway ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿ.ಎಲ್ ಕ್ಯಾನ್ಸಲ್: ಎಡಿಜಿಪಿ ಅಲೋಕ್‌

ಹೆದ್ದಾರಿಗಳಲ್ಲಿ ಅಪಘಾತಗಳಿಗೆ ಅತಿವೇಗದ ಚಾಲನೆಯೂ ಪ್ರಮುಖ ಕಾರಣವಾಗಿದೆ. ಹೀಗಾಗಿ ಹೆದ್ದಾರಿಗಳಲ್ಲಿ ಜನರ ಸುರಕ್ಷತೆಗೆ ಡ್ರೋನ್‌ ಬಳಕೆಗೆ ಯೋಜಿಸಲಾಗಿದೆ.

-ಅಲೋಕ್‌ ಕುಮಾರ್‌, ಎಡಿಜಿಪಿ, ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗ

Follow Us:
Download App:
  • android
  • ios