ಕೊಪ್ಪಳದ ಆನೆಗೊಂದಿ ತೂಗು ಸೇತುವೆ ಕಾಮಗಾರಿ ಪರಿಹಾರ ವಿಚಾರದಲ್ಲಿ ಕಾನೂನು ಸಂಘರ್ಷ ಉಲ್ಬಣಗೊಂಡಿದ್ದು, ರಾಜ್ಯ ಸರ್ಕಾರಕ್ಕೆ ₹5,219 ಕೋಟಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಗುತ್ತಿಗೆದಾರರು ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿದ್ದು, ಮುಖ್ಯ ಕಾರ್ಯದರ್ಶಿಗಳಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಬೆಂಗಳೂರು (ಫೆ.6): ಅರಮನೆ ಮೈದಾನದ TDR ಪರಿಹಾರಕ್ಕಿಂತಲೂ ದೊಡ್ಡ ಕೇಸ್ ರಾಜ್ಯ ಸರ್ಕಾರಕ್ಕೆ ಸುತ್ತಿಕೊಂಡಿದೆ. ಕೊಪ್ಪಳದ ಆನೆಗೊಂದಿ ತೂಗು ಸೇತುವೆಯ ಕಾಮಗಾರಿ ನಷ್ಟ ಪರಿಹಾರ ವಿಚಾರದಲ್ಲಿ ಕಾನೂನು ಸಂಘರ್ಷ ದೊಡ್ಡ ಮಟ್ಟಕ್ಕೇರಿದೆ. ಇದರೊಂದಿಗೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ದೊಡ್ಡ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೊರ ರಾಜ್ಯದ ಗುತ್ತಿಗೆದಾರ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. 5,219 ಕೋಟಿ ಪರಿಹಾರಕ್ಕೆ ಕೋರ್ಟ್‌ಗೆ ಗುತ್ತಿಗೆದಾರ ಅರ್ಜಿ ಹಾಕಿದ್ದಾನೆ. ಗುತ್ತಿಗೆದಾರನ ವರಸೆ ಕಂಡು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೂಡ ಕಂಗಾಲಾಗಿದೆ. ಸಮಿತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಲು ಶಿಫಾರಸು ಮಾಡಿದ್ದು, ಸಮಸ್ಯೆ ಬಗೆಹರಿಸುವಂತೆ ತಿಳಿಸಿದೆ.
ಏನಿದು ಪರಿಹಾರ ಪ್ರಕರಣ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ತೂಗು ಸೇತುವೆ ನಿರ್ಮಾಣ ಕಾಮಗಾರಿಯ ಟೆಂಡರ್ ವಿವಾದ ಇದಾಗಿದೆ. ತುಂಗಭದ್ರ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಕಾಮಗಾರಿಗೆ 1993ರ ನವೆಂಬರ್‌ನಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. 4.12 ಕೋಟಿ ಮೊತ್ತದಲ್ಲಿ ಇದಕ್ಕೆ ಹೈದ್ರಾಬಾದ್ ಮೂಲದ ಬಿ.ವಿ.ಸುಬ್ಬಾರೆಡ್ಡಿ ಅಂಡ್ ಸನ್ಸ್‌ಗೆ ಟೆಂಡರ್ ನೀಡಲಾಗಿತ್ತು.
ಈ ಕಾಮಗಾರಿ 1997ರಲ್ಲಿ ಆರಂಭವಾಗಿತ್ತು. 1999ರಲ್ಲೇ ಯುನೆಸ್ಕೋ ಘೋಷಣೆಯಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. 2005ರಲ್ಲಿ ಯುನೆಸ್ಕೊ ತಂಡದಿಂದ ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿತ್ತು. 2009ರ ಜನವರಿ 22 ರಂದು ಕಾಂಕ್ರೀಟ್ ಹಾಕುವ ಸಮಯದಲ್ಲಿ ಸೇತುವೆ ಕುಸಿತ ಕಂಡಿತ್ತು. ಈ ದುರ್ಘಟನೆಯಲ್ಲಿ 8 ಕಾರ್ಮಿಕರು ಸಾವು ಕಂಡಿದ್ದರೆ 41 ಜನರಿಗೆ ಗಾಯವಾಗಿತ್ತು. ಗುತ್ತಿಗೆದಾರರ ಬೇಜವಾಬ್ದಾರಿಯಿಂದ 5.95 ಕೋಟಿ ನಷ್ಟವಾಗಿತ್ತು.
Bengaluru: ಅರಮನೆ ಮೈದಾನದ ಜಾಗಕ್ಕಾಗಿ ಮೈಸೂರು ರಾಜಮನೆತನಕ್ಕೆ 3 ಸಾವಿರ ಕೋಟಿ ನೀಡಲಿರುವ ರಾಜ್ಯ ಸರ್ಕಾರ!
2012ರಂದು 7 ಕೋಟಿ ಪರಿಹಾರ ಕೋರಿ ಗುತ್ತಿಗೆದಾರ ಕೇಸ್ ದಾಖಲು ಮಾಡಿದ್ದ. ಈ ವೇಳೆ ಕೋರ್ಟ್ ಗುತ್ತಿಗೆದಾರರಿಗೆ 5.64 ಕೋಟಿ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಬಳಿಕ ಸರ್ಕಾರದಿಂದ ಹೈಕೋರ್ಟ್ ಧಾರವಾಡ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. 7 ಕೋಟಿ ಪರಿಹಾರದ ಜೊತೆ 24% ಬಡ್ಡಿ ನೀಡಬೇಕು ಎಂದು ಮತ್ತೊಮ್ಮೆ ಆದೇಶ ಬಂದಿತ್ತು. ಈಗ ಒಟ್ಟು ಪರಿಹಾರದ ಮೊತ್ತ 4645.59 ಕೋಟಿ ಕೊಡಬೇಕು ಎಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ನಾನು ಬಿಎಸ್ಸಿ ಪದವೀಧರ, ಕನ್ನಡ ಬರೆಯಲು ಬರದಷ್ಟು ದಡ್ಡನಲ್ಲ ಎಂದ 'ಶಬವಾಗಲಿ' ಸಚಿವ ಶಿವರಾಜ್ ತಂಗಡಗಿ
ಈಗ ಪರಿಹಾರ ಮೊತ್ತಕ್ಕೆ ಸಂಬಂಧ ಕೋರ್ಟ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪರಿಹಾರ ಪಾವತಿಸದ ಕಾರಣ ಸಿವಿಲ್ ಬಂಧನಕ್ಕೆ ಆದೇಶ ಹೊರಡಿಸಲಾಗಿದೆ. ಆದ್ದರಿಂದಾಗಿ ಪ್ರಕರಣ ಸರ್ಕಾರದ ಲೆಕ್ಕಪತ್ರ ಸಮಿತಿ ಎದುರಿಗೆ ಬಂದಿದೆ. ಗುತ್ತಿಗೆದಾರನ ವಿರುದ್ಧ ಪೊಲೀಸ್ ಇಲಾಖೆ ಕೂಡ ಕ್ರಮಕೈಗೊಂಡಿಲ್ಲ. ನಷ್ಟ ಪರಿಹಾರ ಕೂಡ ಸರ್ಕಾರದಿಂದ ವಸೂಲಿ ಮಾಡಲು ಸಾಧ್ಯವಾಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಸಮಿತಿ ಕಿಡಿಕಾರಿದೆ. ಮುಖ್ಯಮಂತ್ರಿ ಮಧ್ಯಸ್ಥಿಕೆಯಲ್ಲಿ ಸಭೆಗೆ ಶಿಫಾರಸು ಮಾಡಿದ್ದು, ಸಿಎಂ ಕಚೇರಿಗೆ ಸಮಿತಿ ಕಡತ ಮಂಡಿಸಿದೆ.
