ಬಿಬಿಎಂಪಿ ಹೊರತುಪಡಿಸಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಲ್ಲಿ ನೀರಿನ ಸಂಪರ್ಕ ಪಡೆಯಲು ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದ್ದು ಅದರ ಅನ್ವಯ ಕೇವಲ ಆಧಾರ್‌ ಕಾರ್ಡ್‌ ಇದ್ದರೆ ನೀರಿನ ಸಂಪರ್ಕ ಸಿಗಲಿದೆ. ಇತರ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. 

ಬೆಂಗಳೂರು (ಡಿ.2): ರಾಜ್ಯ ಜಲ ನೀತಿ ಅನ್ವಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ (ಬಿಬಿಎಂಪಿ ಹೊರತುಪಡಿಸಿ) ಎಲ್ಲ ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ ಪಡೆಯಲು ನಿಯಮಗಳಲ್ಲಿ ಸರಳೀಕರಣ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕುಡಿಯುವ ನೀರಿನ ನಳ ಸಂಪರ್ಕ ಪಡೆಯಲು ಸೂಕ್ತ ದಾಖಲೆಗಳು ಇಲ್ಲದಿದ್ದರೆ ಆಧಾರ್‌ ಕಾರ್ಡ್‌ ಮತ್ತು ನಷ್ಟಭರ್ತಿ ಮುಚ್ಚಳಿಕೆ ಪಡೆದು ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ. ಎಲ್ಲಾ ಕುಟುಂಬಗಳಿಗೆ ಶುದ್ದ ಕುಡಿಯುವ ನೀರನ್ನು ಕೈಗೆಟಕುವ ದರದಲ್ಲಿ ಕೊಳವೆ ಸಂಪರ್ಕದ ಮೂಲಕ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಸಂಪರ್ಕ ಕಲ್ಪಿಸಲು ಸರ್ಕಾರ ಸೂಚಿಸಿರುವ ದಾಖಲೆ ಒದಗಿಸಲು ಜಟಿಲವಾಗಿರುವುದರಿಂದ ನಿಯಮಗಳಲ್ಲಿ ಸರಳೀಕರಣ ಮಾಡಲಾಗಿದೆ. ನಷ್ಟಭರ್ತಿ ಮುಚ್ಚಳಿಕೆಯನ್ನು ನಿಗದಿತ ನಮೂನೆಯಲ್ಲಿ 50 ರು. ಸ್ಟಾಂಪ್‌ ಪೇಪರ್‌ನಲ್ಲಿ ವಿಳಾಸದ ಪುರಾವೆಯೊಂದಿಗೆ ಅರ್ಜಿ ಸಲ್ಲಿಸಬೇಕು. 

ಮಾಲೀಕತ್ವ ಹೊಂದಿಲ್ಲದವರು ನಗರ ಸ್ಥಳೀಯ ಸಂಸ್ಥೆಗೆ ಯಾವುದೇ ನಷ್ಟಉಂಟಾದರೆ ಅರ್ಜಿದಾರರೇ ಆ ನಷ್ಟವನ್ನು ಭರ್ತಿ ಮಾಡಲು ಜವಾಬ್ದಾರರಾಗಿರುತ್ತಾರೆ ಎಂದು ನಷ್ಟಭರ್ತಿ ಮುಚ್ಚಳಿಕೆಯನ್ನು ನೀಡಬೇಕು ಎಂದು ಸರ್ಕಾರ ಹೇಳಿದೆ.