Asianet Suvarna News Asianet Suvarna News

ಅಯೋಧ್ಯೆಯಲ್ಲಿ ರಾಮಮಂದಿರ ಜೊತೆಗೆ ವಾಲ್ಮೀಕಿ ದೇಗುಲ ನಿರ್ಮಾಣ: ಪ್ರಧಾನಿಗೆ ಸಚಿವ ರಾಜಣ್ಣ ಪತ್ರ!

ದೇಶದಲ್ಲಿ ರಾಮನಿಗೆ ಗೌರವ ಸಲ್ಲಬೇಕಾದರೆ ಅಯೋಧ್ಯೆಯಲ್ಲಿ ವಾಲ್ಮೀಕಿ ದೇಗುಲ ನಿರ್ಮಾಣವಾಗಬೇಕಿದೆ. ಈಗ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವುದಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

A Valmiki temple should also be built in Ayodhya Minister KN Rajanna  letter to PM Modi at Tumakuru rav
Author
First Published Jan 8, 2024, 6:08 AM IST

ತುಮಕೂರು (ಜ.8) : ದೇಶದಲ್ಲಿ ರಾಮನಿಗೆ ಗೌರವ ಸಲ್ಲಬೇಕಾದರೆ ಅಯೋಧ್ಯೆಯಲ್ಲಿ ವಾಲ್ಮೀಕಿ ದೇಗುಲ ನಿರ್ಮಾಣವಾಗಬೇಕಿದೆ. ಈಗ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವುದಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ನಗರದ ಟಿಎಪಿಎಂಎಸ್‌ ಆವರಣದಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ, ಕಲ್ಯಾಣ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ವಾಲ್ಮೀಕಿಯನ್ನು ಮರೆತು ರಾಮನನ್ನು ಪೂಜಿಸುತ್ತಿದ್ದಾರೆ, ಮೆರೆಸುತ್ತಿದ್ದಾರೆ, ದೇಶಕ್ಕೆ ರಾಮನನ್ನು ಪರಿಚಯಿಸಿದ್ದೇ ವಾಲ್ಮೀಕಿ, ವಾಲ್ಮೀಕಿಯನ್ನು ಮರೆತಿರುವ ಬಡವರು, ಶೋಷಿತರು ಒಂದಾಗಬೇಕಿದೆ. ಆಗ ಅಂಬೇಡ್ಕರ್‌ ಆಶಯದ ಸಮಾನತೆಯ ಭಾರತ ನಿರ್ಮಾಣವಾಗಲಿದೆ ಎಂದರು.

ರಾಮಮಂದಿರ ಪ್ರವೇಶ ದ್ವಾರದಲ್ಲಿ ಹನುಮಂತ, ಗರುಡ, ಸಿಂಹದ ಪ್ರತಿಮೆಯ ಮೆರಗು

ಪ್ರಜಾಪ್ರಭುತ್ವದಲ್ಲಿ ಅಂಬೇಡ್ಕರ್ ಸಂವಿಧಾನದಿಂದ ಯಾರು ಏನು ಬೇಕಾದರೂ ಆಗಬಹುದು, ಅಂಬೇಡ್ಕರ್ ಅನುಯಾಯಿಗಳು ಹಿಂದೂತ್ವದ ಆಚರಣೆಯಲ್ಲಿ ತೊಡಗಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.

ಶೋಷಿತ ಸಮುದಾಯಗಳು ತಮ್ಮ ಇತಿಹಾಸವನ್ನು ತಿಳಿಯದೇ ಹೋದರೆ, ಮಕ್ಕಳಿಗೆ ಪರಿಚಯಿಸದೇ ಹೋದರೆ ಮುಚ್ಚಿಟ್ಟಿರುವ ಸಂಗತಿ ಮರೆಯಾಗುವುದರೊಂದಿಗೆ, ಕಲ್ಪಿತ ಇತಿಹಾಸಗಳೇ ಸತ್ಯವಾಗುತ್ತದೆ, ಅಂತಹ ಕಲ್ಪಿತ ಇತಿಹಾಸದಲ್ಲಿಯೇ ಇಂದಿನ ಯುವ ಸಮೂಹ ಮುಳುಗಿದೆ ಎಂದರು.

ಮುಂದುವರೆದ ಯುರೋಪ್ ರಾಷ್ಟ್ರಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಇತ್ತೀಚಿನ ದಶಕಗಳಲ್ಲಿ ಮತದಾನದ ಹಕ್ಕು ನೀಡಲಾಗಿದೆ, ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆಯೇ ಇರಲಿಲ್ಲ, ಅಂತಹ ಸಂದರ್ಭದಲ್ಲಿ ಸಾವಿತ್ರಿ ಬಾಯಿ ಫುಲೆ ಸೇವೆ ಅನನ್ಯವಾಗಿದೆ ಎಂದರು.

ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದಲ್ಲಿ ಅಸ್ಪೃಶ್ಯತೆ ಕಡಿಮೆ ಇದೆ, ಅಸಹಾಯಕ ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿ ನೀಡುವ ಕೆಲಸವನ್ನು ಸಂಘಟನೆಗಳು ಮಾಡಬೇಕು. ಆಗ ಮಾತ್ರ ಶೋಷಿತ, ತಳಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ಎಸ್ಸಿ, ಎಸ್ಟಿ ನೌಕರರ ಸಂಘಟನೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಮಾತನಾಡಿ, ತಳ ಸಮುದಾಯಗಳು ಒಳ ಜಾತಿಗಳಿಂದ ಹೊರಬರಬೇಕು, ಸಂವಿಧಾನದ ಅಡಿಯಲ್ಲಿ ಒಂದಾಗುವ ಮೂಲಕ ತಳ ಸಮುದಾಯಗಳು ಅಧಿಕಾರವನ್ನು ಕಸಿಯುವಂತಾಗಲು, ಅಂಬೇಡ್ಕರ್‌ ಅವರ ಸಂವಿಧಾನದಿಂದ ಸೌಲಭ್ಯ ಪಡೆದಿರುವವರು ಮುಂದಾಗಬೇಕು ಎಂದು ತಿಳಿಸಿದರು.

ನೌಕರರು ವ್ಯವಸ್ಥೆಯ ಸುಧಾರಿಸುವ ಕೆಲಸ ಮಾಡಬೇಕಿದೆ. ಅಂಬೇಡ್ಕರ್ ಮಾರ್ಗದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮೃಗತ್ವ ಮತ್ತು ಮಾನವತ್ವದ ನಡುವಿನ ಹೋರಾಟದಲ್ಲಿ ವೈಚಾರಿಕತೆಯಿಂದ ಭಾತೃತ್ವದ ಭಾರತ ನಿರ್ಮಾಣವಾಗಲಿದೆ. ಮಹಿಳೆಯರಿಗೆ ಸೂಕ್ತಸ್ಥಾನ ಮಾನ ಸಿಗಲಿಲ್ಲ ಎಂದು ದೇಶದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದ ಅಂಬೇಡ್ಕರ್‌ ರಾಜೀನಾಮೆ ನೀಡಿದರು. ಅವರು ಮಂಡಿಸಿದ್ದ ಹಿಂದೂ ಕೋಡ್ ಬಿಲ್‌ನ ಅಂಶಗಳು ಈಗ ಜಾರಿಯಾಗುತ್ತಿದ್ದು, ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತಿದೆ ಎಂದರು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, ಶಿಕ್ಷಣದಿಂದ ಜಾತಿ ನಿರ್ಮೂಲನೆಯಾಗಲಿದೆ, ಶಿಕ್ಷಣದಿಂದ ಆರ್ಥಿಕವಾಗಿ ಸಬಲರಾದರೆ ಯಾವ ಜಾತಿಯನ್ನು ಯಾರು ಕೇಳುವುದಿಲ್ಲ, ವಿದ್ವತ್ತು ಪಡೆಯುವುದಕ್ಕೆ ಶ್ರಮಿಸುವ ಮೂಲಕ ಸಮಾಜದಲ್ಲಿ ಶೋಷಿತ ಸಮುದಾಯಗಳು ಮುಂದೆ ಬರಬೇಕು ಎಂದು ಕರೆ ನೀಡಿದರು.

 

ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಒನ್-ಮ್ಯಾನ್ ಶೋ; ನನಗೆ ಆಹ್ವಾನ ನೀಡಿದ್ರೂ ಹೋಗೊಲ್ಲ: ಸತೀಶ್ ಜಾರಕಿಹೊಳಿ

ಸಮಿತಿಯ ಜಿಲ್ಲಾಧ್ಯಕ್ಷ ಡಾ.ವೈ.ಕೆ. ಬಾಲಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಸರ್ಕಾರಿ ಎಸ್ಸಿ, ಎಸ್ಟಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯಿಂದ ಸಮುದಾಯದ ಯುವ ಸಮೂಹ ಕೌಶಲ್ಯತರಬೇತಿ ನೀಡಲು ಅನುಕೂಲವಾಗುವಂತೆ ಸಂಘಟನೆಗೆ ಸರ್ಕಾರದಿಂದ ಭೂಮಿಯನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಕುರಿತು ತುಮಕೂರು ವಿವಿ ಉಪನ್ಯಾಸಕಿ ಡಾ. ಅಶ್ವಿನಿ ಬಿ ಜಾನೆ ಉಪನ್ಯಾಸ ನೀಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಕೆಂಪಸಿದ್ದಯ್ಯ, ಮೋಹನ್‌ಕುಮಾರ್, ರೇಷ್ಮೆ ಹೆಚ್ಚುವರಿ ನಿರ್ದೇಶಕ ವೈ.ಟಿ. ತಿಮ್ಮಯ್ಯ, ಜಿ.ಪಂ. ಸಿಎಒ ನರಸಿಂಹಮೂರ್ತಿ, ಬಿಇಒ ಅಶ್ವತ್ಥ ನಾರಾಯಣ್, ಹನುಮಂತರಾಯಪ್ಪ, ಆರ್‌ಎಫ್‌ಒ ಸುರೇಶ್, ಹನುಮಂತರಾಜು, ಮಂಜಣ್ಣ, ಪ್ರೊ. ಗಂಗಾಧರ್, ಕೋಟೆಕಲ್ಲಯ್ಯ, ಯುವರಾಜು, ಚಿಕ್ಕಣ್ಣ, ಶಿವರಾಮು, ಕಲ್ಯಾಣ ಫೌಂಡೇಶನ್‌ನ ಎಚ್.ಟಿ. ರವಿಕುಮಾರ್, ನಂಜರಾಜಮೂರ್ತಿ, ಬ್ಯಾಂಕ್‌ ಆಫ್ ಬರೋಡಾ ವ್ಯವಸ್ಥಾಪಕಿ ಅಸ್ಮಾ ಉಲ್ಲಾಖಾನ್ ಸೇರಿದಂತೆ ಇತರರಿದ್ದರು.

ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿದರೆ ಶಿಕ್ಷಕರೇ ಮಕ್ಕಳಿಗೆ ದೇವರಾಗುತ್ತಾರೆ. ಯಾವ ಮಗುವು ಶಿಕ್ಷಣದಿಂದ ವಂಚಿತವಾಗಬಾರದು, ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಆಗ ಮಾತ್ರ ಬಡತನ, ಜಾತಿ ದೂರವಾಗಲಿದೆ.

ಕೆ.ಎನ್‌. ರಾಜಣ್ಣ ಸಹಕಾರ ಸಚಿವ

Follow Us:
Download App:
  • android
  • ios