ಚಂದ್ರನ ಮೇಲೆ ಓಡಾಡಿದ ರೋವರ್: ಐತಿಹಾಸಿಕ ಹೆಜ್ಜೆ!
2 ದಿನ ಹಿಂದಷ್ಟೇ ಚಂದಿರನ ಅಂಗಳಕ್ಕೆ ಇಳಿದು ಅನೇಕ ದಾಖಲೆಗಳನ್ನು ಬರೆದಿದ್ದ ಭಾರತ, ಇದೀಗ ಅದರ ಮತ್ತಷ್ಟು ಸಾಕ್ಷ್ಯವನ್ನು ವಿಶ್ವದ ಮುಂದೆ ಅನಾವರಣಗೊಳಿಸಿದೆ. ಶುಕ್ರವಾರ ಇದಕ್ಕೆ ಸಂಬಂಧಿಸಿದ 2 ವಿಡಿಯೋಗಳನ್ನು ಇಸ್ರೋ ಪ್ರಕಟಿಸಿದೆ.
ಬೆಂಗಳೂರು (ಆ.26): 2 ದಿನ ಹಿಂದಷ್ಟೇ ಚಂದಿರನ ಅಂಗಳಕ್ಕೆ ಇಳಿದು ಅನೇಕ ದಾಖಲೆಗಳನ್ನು ಬರೆದಿದ್ದ ಭಾರತ, ಇದೀಗ ಅದರ ಮತ್ತಷ್ಟು ಸಾಕ್ಷ್ಯವನ್ನು ವಿಶ್ವದ ಮುಂದೆ ಅನಾವರಣಗೊಳಿಸಿದೆ. ಶುಕ್ರವಾರ ಇದಕ್ಕೆ ಸಂಬಂಧಿಸಿದ 2 ವಿಡಿಯೋಗಳನ್ನು ಇಸ್ರೋ ಪ್ರಕಟಿಸಿದೆ. ವಿಕ್ರಂ ಲ್ಯಾಂಡರ್‌ನ ಪ್ರಜ್ಞಾನ್ ರೋವರ್ ಕೆಳಕ್ಕಿಳಿಯಲು ಬೇಕಾದ ರಾರಯಂಪ್ ತೆರೆಯುವುದು ಹಾಗೂ ರೋವರ್‌ನ ಸೌರಫಲಕ ಬಿಡಿಸಿಕೊಳ್ಳುವ ವಿಡಿಯೋ ಮತ್ತು ರಾರಯಂಪ್‌ನಿಂದ ನಿಧಾನವಾಗಿ ಜಾರಿ ಚಂದಿರನ ಅಂಗಳಕ್ಕೆ ಮೊದಲ ಬಾರಿ ಇಳಿಯುವ ‘ಐತಿಹಾಸಿಕ ಹೆಜ್ಜೆ’ಯ ವಿಡಿಯೋಗಳು ಬಿಡುಗಡೆಯಾಗಿವೆ. ರೋವರ್‌ನ ಚಕ್ರದ ಪಟ್ಟಿಗಳಲ್ಲಿ ಭಾರತದ ಹಾಗೂ ಇಸ್ರೋ ಲಾಂಛನಗಳ ಉಬ್ಬು ಚಿತ್ರಗಳಿದ್ದು, ಇವು ಚಂದಿರನ ಮೇಲ್ಮೈಯಲ್ಲಿ ಶಾಶ್ವತವಾಗಿ ಮೂಡಿವೆ ಎಂಬುದು ಗಮನಾರ್ಹ.
ಚಂದ್ರನ ಮೇಲೆ ಭಾರತದ ಮೊದಲ ಹೆಜ್ಜೆ: ಬುಧವಾರ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಸಾಫ್ಟ್‌ಲ್ಯಾಂಡಿಂಗ್ ಮಾಡಿದ್ದ ಇಸ್ರೋದ ಲ್ಯಾಂಡರ್‌ನ ಒಳಗಿದ್ದ ರೋವರ್, ಯಶಸ್ವಿಯಾಗಿ ಲ್ಯಾಂಡರ್‌ನಿಂದ ಹೊರಬಂದು ಚಂದ್ರನ ನೆಲದ ಮೇಲೆ ತನ್ನ ಮೊದಲ ಸಂಚಾರ ನಡೆಸಿದೆ. ಈ ಮೂಲಕ ಚಂದ್ರನ ಮೇಲೆ ಭಾರತದ ಮೊದಲ ಹೆಜ್ಜೆ ಗುರುತು ಮೂಡಿದೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳನ್ನು ಇಸ್ರೋ ಶುಕ್ರವಾರ ಬಿಡುಗಡೆ ಮಾಡಿದೆ. ಚಂದ್ರಯಾನ-3 ಯೋಜನೆಯಲ್ಲಿದ್ದ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್‌ಗಳಲ್ಲಿದ್ದ ಪೇ ಲೋಡ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ಇವುಗಳೆಲ್ಲವೂ ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿವೆ ಎಂದು ಇಸ್ರೋ ಹೇಳಿದೆ.
ಚಂದ್ರನ ಮೇಲೆ ಭಾರತದ ನಡಿಗೆ ಆರಂಭ: ರೋವರ್ ಅಧ್ಯಯನ ಶುರು
‘ಯೋಜಿಸಿದ್ದಂತೆಯೇ ಚಂದ್ರ ಮೇಲೆ ರೋವರ್ ಓಡಾಟ ನಡೆಸಿದೆ. ಯಶಸ್ವಿಯಾಗಿ 8 ಮೀ.ನಷ್ಟುದೂರ ರೋವರ್ ಚಲಿಸಿದ್ದು, ಎಲ್ಲಾ ಚಲನೆಗಳು ಸಮಂಜಸವಾಗಿವೆ. ಚಂದ್ರನ ನೆಲದಲ್ಲಿರುವ ರಾಸಾಯನಿಕ ಸಂಯೋಜನೆ ಮತ್ತು ಖನಿಜ ಸಂಯೋಜನೆಯನ್ನು ಅಧ್ಯಯನ ನಡೆಸುವ ‘ಎಪಿಎಕ್ಸ್‌ಎಸ್’ ಮತ್ತು ಮೆಗ್ನಿಷಿಯಂ, ಅಲ್ಯುಮಿನಿಯಂ, ಸಿಲಿಕಾನ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಟೈಟಾನಿಯಂ ಮತ್ತು ಕಬ್ಬಿಣದ ಅಧ್ಯಯನ ನಡೆಸುವ ‘ಎಲ್‌ಐಬಿಎಸ್’ ಪೇಲೋಡ್‌ಗಳನ್ನು ಸಕ್ರಿಯಗೊಳಿಸಲಾಗಿದೆ’ ಎಂದು ಇಸ್ರೋ ಹೇಳಿದೆ. ಗುರುವಾರ ಲ್ಯಾಂಡರ್‌ನಲ್ಲಿದ್ದ 3 ಪೇಲೋಡ್‌ಗಳನ್ನು ಸಕ್ರಿಯಗೊಳಿಸಲಾಗಿತ್ತು. ಈ ಎಲ್ಲಾ ಪೇಲೋಡ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಅಗತ್ಯ ಮಾಹಿತಿಗಳು ಭೂಮಿಗೆ ಲಭ್ಯವಾಗಬಹುದು ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ ಯಶಸ್ಸಿನ ಹಿಂದೆ ಪ್ರಧಾನಿ ಮೋದಿ ಪ್ರಬಲ ಸ್ಫೂರ್ತಿ: ಸಂಸದ ರಾಘವೆಂದ್ರ
ಚಂದ್ರನ ಮೇಲೆ ಲಾಂಛನ, ಇಸ್ರೋ ಗುರುತು: ರೋವರ್ ಯಶಸ್ವಿಯಾಗಿ ಚಂದ್ರನ ಮೈಮೇಲೆ ಓಡಾಡಿರುವುದರಿಂದ ಅದರ ಹಿಂಬದಿ ಚಕ್ರದಲ್ಲಿ ಅಳವಡಿಸಲಾಗಿರುವ ಇಸ್ರೋ ಹಾಗೂ ರಾಷ್ಟ್ರಲಾಂಛನದ ಚಿತ್ರಗಳು ಚಂದ್ರನ ಮೇಲ್ಮೈನಲ್ಲಿ ಮೂಡಿವೆ. ಚಂದ್ರನ ವಾತಾವರಣದಲ್ಲಿ ಮಾರುತಗಳು ಬೀಸದಿರುವ ಕಾರಣ ಚಂದ್ರನ ಮೇಲೆ ಮೂಡಿರುವ ರಾಷ್ಟ್ರ ಲಾಂಛನ ಹಾಗೂ ಇಸ್ರೋದ ಗುರುತುಗಳು ಶಾಶ್ವತವಾಗಿ ಇರಲಿವೆ ಎನ್ನಲಾಗಿದೆ.