2 ತಿಂಗಳಲ್ಲಿ ಮಳೆ ಅನಾಹುತಕ್ಕೆ 96 ಬಲಿ, 7,548 ಕೋಟಿ ನಷ್ಟ
- 2 ತಿಂಗಳಲ್ಲಿ ಮಳೆ ಅನಾಹುತಕ್ಕೆ 96 ಬಲಿ, .7548 ಕೋಟಿ ನಷ್ಟ
- 22734 ಕಿ.ಮೀ. ರಸ್ತೆ, 1471 ಸೇತುವೆ, 199 ಸಣ್ಣ ಕೆರೆಗಳಿಗೆ ಹಾನಿ
- 1012 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಮೊರೆ: ಸಚಿವ ಅಶೋಕ್
ಬೆಂಗಳೂರು (ಆ.31) : ರಾಜ್ಯದಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ಸುರಿದ ಮಳೆ, ಪ್ರವಾಹದಿಂದ ಅಂದಾಜು 7,548.13 ಕೋಟಿ ರು. ನಷ್ಟವಾಗಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಅನ್ವಯ 1012.50 ಕೋಟಿ ರು. ನಷ್ಟಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
Karnataka Rain: ಮುಂದಿನ 24 ಘಂಟೆ ರಾಜ್ಯಾದ್ಯಂತ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಎರಡು ತಿಂಗಳ ಅವಧಿಯಲ್ಲಿ ಸುರಿದ ಮಳೆಯಿಂದ 96 ಮಂದಿ ಮೃತಪಟ್ಟಿದ್ದಾರೆ, 5.51 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ, 17 ಸಾವಿರ ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಹಾಗೂ 12 ಸಾವಿರ ಪ್ರದೇಶದಲ್ಲಿ ಬಹುವಾರ್ಷಿಕ ಬೆಳೆ ಹಾನಿಯಾಗಿದೆ. ಒಟ್ಟು 5.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸುಮಾರು 22,734 ಕಿ.ಮೀ. ಉದ್ದದ ರಸ್ತೆ, 1471 ಸೇತುವೆ, 199 ಸಣ್ಣ ನೀರಾವರಿ ಕೆರೆಗಳು, 6998 ಶಾಲಾ ಕೊಠಡಿ, 236 ಪ್ರಾಥಮಿಕ ಆರೋಗ್ಯ ಕೇಂದ್ರ, 3,189 ಅಂಗನವಾಡಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಆಸ್ತಿಗಳಿಗೆ ಹಾನಿಯಾಗಿದೆ. ಅದೇ ರೀತಿ ಸುಮಾರು 24,052 ವಿದ್ಯುತ್ ಕಂಬಗಳು, 2,221 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ. 497 ಕಿ.ಮೀ. ಉದ್ದದ ವಿದ್ಯುತ್ ಮಾರ್ಗ ಕಡಿತಗೊಂಡಿದೆ ಎಂದು ವಿವರಿಸಿದರು.
8,217 ಜನರ ಸ್ಥಳಾಂತರ:
ಈವರೆಗೆ ಸುಮಾರು 8,217 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರರಿಸಲಾಗಿದೆ, ಈಗಾಗಲೇ 82 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 7959 ಜನ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಮಗ್ರವಾಗಿ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ನೆರೆ ಪರಿಹಾರಕ್ಕೆ ರಾಜ್ಯ ಸರ್ಕಾರ ಈಗಾಗಲೇ 250 ಕೋಟಿ ರು. ಬಿಡುಗಡೆ ಮಾಡಿದೆ. ಸಂತ್ರಸ್ತರಿಗೆ ನೇರವಾಗಿ ಅವರ ಖಾತೆಗೆ ಪರಿಹಾರ ಜಮೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವಿಶೇಷವಾಗಿ ಬೇರೆ ರಾಜ್ಯಗಳಿಗಿಂತ ಹೆಚ್ಚು ಮೊತ್ತದ ಪರಿಹಾರ ನೀಡುತ್ತಿದ್ದೇವೆ. ಹೊಸದಾಗಿ ಏಳು ಕಡೆ ಪರಿಹಾರ ಕೇಂದ್ರ ಆರಂಭಿಸಲಾಗಿದೆ. ಸಂತ್ರಸ್ತರ ರಕ್ಷಣೆಗಾಗಿ ಐದು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.
1012.50 ಕೋಟಿ ರು. ಪರಿಹಾರಕ್ಕೆ ಮನವಿ:
ಮಳೆ, ಪ್ರವಾಹದಿಂದ ಒಟ್ಟು 7,648.13 ಕೋಟಿ ರು. ನಷ್ಟವಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 1.012.50 ಕೋಟಿ ರು. ನಷ್ಟಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರದಿಂದ ಹಣ ಬರುವವರೆಗೆ ಕಂದಾಯ ಇಲಾಖೆಯೇ ಪರಿಹಾರ ನೀಡಲಿದೆ ಎಂದರು.
ಮುಂಜಾಗ್ರತಾ ಕ್ರಮ:
ಮುಂದಿನ ಮೂರ್ನಾಲ್ಕು ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Bengaluru Rains: ಮಳೆಯಿಂದ ಜಲಾವೃತಗೊಂಡ ರೈನ್‌ಬೊ ಲೇಔಟ್; ತಲೆಕೆಡಿಸಿಕೊಳ್ಳದ ಬಿಬಿಎಂಪಿ!
ಮೈಸೂರು ಹೆದ್ದಾರಿಯಲ್ಲಿ ವೈಜ್ಞಾನಿಕ ಕಾಮಗಾರಿ: ಸಚಿವ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಳೆಯಿಂದ ನೀರು ನಿಂತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಶೋಕ್ ಅವರು, ಈಗಾಗಲೇ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ. ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಕೆರೆಯ ನೀರು ಹರಿದು ಬಂದಿರುವುದರಿಂದ ನೀರು ನಿಂತಿದೆ. ಮಳೆಯ ಪ್ರಮಾಣ ಹೆಚ್ಚಾಗಿ ನೀರು ಇಂಗದೇ ಇರುವುದು ಸಹ ನೀರು ನಿಲ್ಲಲು ಕಾರಣವಾಗಿದೆ ಎಂದು ಸಮರ್ಥಿಸಿಕೊಂಡರು.