Asianet Suvarna News Asianet Suvarna News

ಬೆಂಗಳೂರಲ್ಲಿ ಆಫ್ರಿಕನ್ನರ ಡ್ರಗ್‌ ಮಾಫಿಯಾ!

* ಬೆಂಗಳೂರಲ್ಲಿ ಆಫ್ರಿಕನ್ನರ ಡ್ರಗ್‌ ಮಾಫಿಯಾ!

* ಉದ್ಯೋಗ, ಶಿಕ್ಷಣದ ನೆಪದಲ್ಲಿ ಕರ್ನಾಟಕಕ್ಕೆ ಬಂದು ಮಾದಕ ದ್ರವ್ಯ ದಂಧೆ

* 2.5 ವರ್ಷದಲ್ಲಿ 3 ಪಟ್ಟು ಹೆಚ್ಚಳ

* 200ಕ್ಕೂ ಹೆಚ್ಚು ವಿದೇಶಿಗರ ಸೆರೆ: ಇವರಲ್ಲಿ ಆಫ್ರಿಕನ್ನರೇ 95%

95pc of Africans In Bengaluru Imvolved In Drugs Mafia pod
Author
Bangalore, First Published Aug 4, 2021, 7:35 AM IST
  • Facebook
  • Twitter
  • Whatsapp

ಎನ್‌.ಲಕ್ಷ್ಮಣ್‌

ಬೆಂಗಳೂರು(ಆ.04): ಶಿಕ್ಷಣ, ಉದ್ಯೋಗ ಇನ್ನಿತರ ಕಾರಣ ಕೊಟ್ಟು ಬೆಂಗಳೂರಿಗೆ ಬರುವ ವಿದೇಶಿಗರು ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗುವ ಪ್ರಮಾಣ ಕಳೆದ ಎರಡೂವರೆ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ಡ್ರಗ್ಸ್‌ ದಂಧೆಯಲ್ಲಿ ಆಫ್ರಿಕಾ ಪ್ರಜೆಗಳೇ ಹೆಚ್ಚಿರುವುದು ಕಂಡುಬಂದಿದೆ.

ಎರಡು ವರ್ಷದಲ್ಲಿ 200ಕ್ಕೂ ಹೆಚ್ಚು ಮಂದಿ ವಿದೇಶಿಗರನ್ನು ಬೆಂಗಳೂರು ಪೊಲೀಸರು ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಬಂಧಿಸಿ, ಜೈಲಿಗಟ್ಟಿದ್ದಾರೆ. ಡ್ರಗ್ಸ್‌ ದಂಧೆಯಲ್ಲಿ ಜೈಲು ಸೇರಿರುವ ವಿದೇಶಿಗರ ಪೈಕಿ ಶೇ.95ಕ್ಕೂ ಹೆಚ್ಚು ಮಂದಿ ಆಫ್ರಿಕಾ ಪ್ರಜೆಗಳೇ ಇದ್ದಾರೆ. ಅಲ್ಲದೆ, ನೈಜೀರಿಯಾ ದೇಶದ ಪ್ರಜೆಗಳು 127 ಮಂದಿ ಜೈಲು ಸೇರಿದ್ದಾರೆ ಎಂದು ಪೊಲೀಸ್‌ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಮೊನ್ನೆಯಷ್ಟೇ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದ ಕಾಂಗೋ ಪ್ರಜೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರಿಂದ ಆತನ ಆಫ್ರಿಕನ್‌ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಎಲ್ಲೆಡೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಂಗತಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ವಿದೇಶಿಗರನ್ನು ಹೊರದಬ್ಬಲು ಪೊಲೀಸರು ಮುಂದಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಹೆಚ್ಚಳ:

2019ರಲ್ಲಿ ಒಟ್ಟು 33 ಡ್ರಗ್ಸ್‌ ಪ್ರಕರಣ ದಾಖಲಿಸಿ 38 ಮಂದಿಯನ್ನು ಜೈಲಿಗೆ ಅಟ್ಟಲಾಗಿತ್ತು. ಕಳೆದ ವರ್ಷ ಅಂದರೆ 2020ರಲ್ಲಿ 66 ಪ್ರಕರಣಗಳಲ್ಲಿ 84 ಮಂದಿ ಸಿಕ್ಕಿಬಿದ್ದಿದ್ದಾರೆ. 2021ರ ಜು.31ರ ಅಂತ್ಯಕ್ಕೆ ಏಳು ತಿಂಗಳಲ್ಲಿ ಬರೋಬ್ಬರಿ 100 ವಿದೇಶಿಗರು ಜೈಲು ಸೇರಿದ್ದಾರೆ. ಬಂಧಿತರ ಪೈಕಿ ನೈಜೀರಿಯಾ ಪ್ರಜೆಗಳೇ ಅತಿಹೆಚ್ಚು ಇದ್ದಾರೆ. ಎರಡೂವರೆ ವರ್ಷದಲ್ಲಿ 127 ಮಂದಿ ಡ್ರಗ್ಸ್‌ ಪ್ರಕರಣದಲ್ಲಿ ಸೆರೆಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಕಾಂಗೋ ದೇಶದ ಪ್ರಜೆಗಳಿದ್ದು, ಮೂರು ವರ್ಷದಲ್ಲಿ 22 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಉಳಿದಂತೆ ಪ್ರಸಕ್ತ ವರ್ಷದಲ್ಲಿ ಉಂಗಾಡ-2, ಘಾನಾ-3, ಸುಡಾನ್‌-4, ತಾಂಜೇನಿಯಾ-2, ದಕ್ಷಿಣ ಆಫ್ರಿಕಾ-2, ಗುನಿನೇಯಾ-3, ಕೀನ್ಯಾ-1, ಐವರಿ ಕೋಸ್ಟಾ-6, ಯೆಮೆನ್‌-1, ನೇಪಾಳ-2, ಕೋಟ್‌ ಡಿ ಐವರಿಯ ಓರ್ವ ಆರೋಪಿ ಸೇರಿ 100 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ 70 ಪ್ರಕರಣ ದಾಖಲಿಸಲಾಗಿದೆ.

24 ಮಂದಿ ‘ಪ್ರತಿಬಂಧನ’ ಗೃಹದಲ್ಲಿ:

ವಿದೇಶಿ ಪ್ರಜೆಗಳು ತಾವು ಬಂದ ಉದ್ದೇಶವನ್ನು ಮರೆತು ಅಕ್ರಮ ಚಟುವಟಿಕೆಯಲ್ಲಿ ತೊಡಗುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಿ ಪರಿಣಮಿಸಿದ್ದಾರೆ. ಹೀಗೆ ಅಕ್ರಮವಾಗಿ ನೆಲೆಸಿರುವ 24 ಪ್ರಜೆಗಳನ್ನು ಬೆಂಗಳೂರು ಹೊರವಲಯದ ಸೊಂಡೆಕೊಪ್ಪದಲ್ಲಿ ನಿರ್ಮಿಸಿರುವ ವಿದೇಶೀಯರ ‘ಪ್ರತಿಬಂಧನ ಗೃಹ’ದಲ್ಲಿ ಇರಿಸಲಾಗಿದ್ದು, ಗಡೀಪಾರು ಮಾಡಲು ಎಫ್‌ಆರ್‌ಆರ್‌ಓಗೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ನೌಕರಿ, ಉದ್ಯೋಗದ ನೆಪ:

ವಿದ್ಯಾರ್ಥಿ, ಉದ್ಯೋಗ ಸೇರಿದಂತೆ ಹತ್ತಾರು ಕಾರಣಗಳನ್ನು ನೀಡಿ ಆಫ್ರಿಕಾ ಜನರು ಭಾರತಕ್ಕೆ ಬರುತ್ತಿದ್ದಾರೆ. ಹೀಗೆ ಬಂದವರು ವಿದ್ಯಾಭ್ಯಾಸ ಹಾಗೂ ಉದ್ಯೋಗ ಬಿಟ್ಟು ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಪೂರ್ವ ಹಾಗೂ ಈಶಾನ್ಯ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಆಫ್ರಿಕಾ ಪ್ರಜೆಗಳು ತಮ್ಮದೇ ಆದ ಮಾದಕ ವಸ್ತು ಜಾಲವನ್ನು ರಚಿಸಿಕೊಂಡಿದ್ದಾರೆ. ಡಾರ್ಕ್ನೆಟ್‌ ಹಾಗೂ ಇನ್ನಿತರ ಕಳ್ಳ ಮಾರ್ಗಗಳಲ್ಲಿ ಡ್ರಗ್ಸ್‌ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಸುಲಭವಾಗಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳ ಸೋಗಿನಲ್ಲಿ ಕಾಲೇಜು ಆವರಣಕ್ಕೆ ಡ್ರಗ್ಸ್‌ ತಲುಪಿಸುತ್ತಿದ್ದಾರೆ. ವಿದೇಶಿ ಪ್ರಜೆಗಳು ಹೆಚ್ಚಿನ ಬಾಡಿಗೆ ಕೊಡುತ್ತಾರೆ ಎಂಬ ಕಾರಣಕ್ಕೆ ಮನೆ ಮಾಲಿಕರು ಇವರ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನೇ ನೀಡುವುದಿಲ್ಲ. ಈ ಬಗ್ಗೆ ಜನರು ಕೂಡ ಜವಾಬ್ದಾರಿಯಿಂದ ಇರಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವೀಸಾ ಮುಗಿದರೂ 729 ಮಂದಿ ಇಲ್ಲೇ ವಾಸ

ಸ್ವತಃ ವಿದೇಶಿ ಪ್ರಜೆಗಳ ಪ್ರಾದೇಶಿಕ ನೋಂದಣಿ ಕೇಂದ್ರವು (ಎಫ್‌ಆರ್‌ಆರ್‌ಒ) ಈ ಅಕ್ರಮ ವಲಸಿಗರ ಅಧಿಕೃತ ಮಾಹಿತಿ ಹಾಗೂ ಅವರು ರಾಜ್ಯದಲ್ಲಿ ಎಲ್ಲೆಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಂಡಿದೆ. ಎಫ್‌ಆರ್‌ಆರ್‌ಒ ಬಳಿ ಇರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 729 ಮಂದಿ ಮಂದಿ ವಿದೇಶಿಗರು ತಮ್ಮ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದಾರೆ. ರಾಜಧಾನಿ ಬೆಂಗಳೂರು ಒಂದರಲ್ಲೇ 690 ಮಂದಿ ಇದ್ದಾರೆ. ಇನ್ನುಳಿದ ಜಿಲ್ಲೆಗಳಲ್ಲಿ 39 ಮಂದಿಯಿದ್ದಾರೆ.

ವಿದೇಶಿಗರ ಡ್ರಗ್ಸ್‌ ದಂಧೆ ಏರಿಕೆ 

2019- 38 ಮಂದಿ ಬಂಧನ

2020- 84 ಮಂದಿ ಬಂಧನ

2021- 100 ಬಂಧನ (ಈವರೆಗೆ)ಬಾಕ್ಸ್‌

ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪಟ್ಟಿ(ಮೇ.31ರವರೆಗೆ)

ವಲಯವಾರು-

ಪೂರ್ವ- 285

ಈಶಾನ್ಯ- 172

ಉತ್ತರ- 65

ಆಗ್ನೇಯ- 64

ವೈಟ್‌ಫೀಲ್ಡ್‌- 47

ದಕ್ಷಿಣ- 30

ಪಶ್ಚಿಮ- 17

ಕೇಂದ್ರ- 10

ಒಟ್ಟು- 690

ಡ್ರಗ್ಸ್‌ ಪ್ರಕರಣದಲ್ಲಿ ವಿದೇಶಿಗರು ಸೇರಿದಂತೆ ಯಾರೇ ಇದ್ದರೂ ಬಂಧಿಸಿ ಕ್ರಮಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಯಲಿದೆ. ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗುವವರನ್ನು ಸುಮ್ಮನೆ ಬಿಡುವುದಿಲ್ಲ. ಇತ್ತೀಚೆಗೆ 50 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ವಿದೇಶಿ ಪ್ರಜೆಗಳ ವಿರುದ್ಧವೂ ನಮ್ಮ ಕ್ರಮ ಮುಂದುವರೆಯಲಿದೆ.

ಕಮಲ್‌ಪಂತ್‌, ನಗರ ಪೊಲೀಸ್‌ ಆಯುಕ್ತ

Follow Us:
Download App:
  • android
  • ios