ರಾಜ್ಯ ಇಂಧನ ಇಲಾಖೆಯಲ್ಲಿ ‘ರಾಮನ ಲೆಕ್ಕ ಕೃಷ್ಣನ ಲೆಕ್ಕ’ ತೋರಿಸಿ ಟ್ರಾನ್ಸ್‌ಫಾರ್ಮರ್ ಹಂಚಿಕೆ ವೇಳೆ ಸುಮಾರು 80 ರಿಂದ 90 ಕೋಟಿ ರು. ಮೊತ್ತದ ಅಕ್ರಮ ನಡೆಸಿರುವುದು ಅಪರಾಧ ತನಿಖಾ ಇಲಾಖೆಯ (ಸಿಐಡಿ) ತನಿಖೆಯಲ್ಲಿ ಪತ್ತೆಯಾಗಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ರಾಜ್ಯ ಇಂಧನ ಇಲಾಖೆಯಲ್ಲಿ ‘ರಾಮನ ಲೆಕ್ಕ ಕೃಷ್ಣನ ಲೆಕ್ಕ’ ತೋರಿಸಿ ಟ್ರಾನ್ಸ್‌ಫಾರ್ಮರ್ ಹಂಚಿಕೆ ವೇಳೆ ಸುಮಾರು 80 ರಿಂದ 90 ಕೋಟಿ ರು. ಮೊತ್ತದ ಅಕ್ರಮ ನಡೆಸಿರುವುದು ಅಪರಾಧ ತನಿಖಾ ಇಲಾಖೆಯ (ಸಿಐಡಿ) ತನಿಖೆಯಲ್ಲಿ ಪತ್ತೆಯಾಗಿದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯಲ್ಲಿ ಈ ಹಗರಣ ನಡೆದಿದ್ದು, 9ಕ್ಕೂ ಹೆಚ್ಚಿನ ಖಾಸಗಿ ಕಂಪನಿಗಳ ಜತೆ ಹೆಸ್ಕಾಂನ ದಾಸ್ತಾನು ವಿಭಾಗದ ಮೇಲ್ವಿಚಾರಕ ಸೇರಿ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿತ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆಗೆ ಸಿಐಡಿ ಯೋಜಿಸಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

1500 ಟ್ರಾನ್ಸ್‌ಫಾರ್ಮರ್‌ ಹೋಗಿದ್ದು ಎಲ್ಲಿ?:

ಹೆಸ್ಕಾಂ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಕೃಷಿಕರು ಸೇರಿ ಜನರ ಬೇಡಿಕೆಗೆ ಅನುಗುಣವಾಗಿ ಪೂರೈಕೆಗೆ 1500 ಟ್ರಾನ್ಸ್‌ಫಾರ್ಮರ್‌ಗಳ ಖರೀದಿಗೆ ಇಂಧನ ಇಲಾಖೆ ಸಮ್ಮತಿಸಿತ್ತು. ಆದರೆ ಈ ಟ್ರಾನ್ಸ್‌ಫಾರ್ಮರ್‌ಗಳನ್ನು ಜನರಿಗೆ ವಿತರಿಸಿದಂತೆ ದಾಖಲೆ ಸೃಷ್ಟಿಸಿ ಕೆಲ ಅಧಿಕಾರಿಗಳು ಹಣ ನುಂಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಹೆಸ್ಕಾಂ ವ್ಯಾಪ್ತಿಯ ಟ್ರಾನ್ಸ್‌ಫಾರ್ಮರ್‌ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು. ಅಂತೆಯೇ ಸಿಐಡಿ ಅಧಿಕಾರಿಗಳು ಈ ಹಗರಣದ ನುಂಗಣ್ಣರ ಶೋಧನೆಗಿಳಿಯುತ್ತಿದ್ದಂತೆ ಒಂದೊಂದಾಗಿ ಅಚ್ಚರಿಯ ಸಂಗತಿ ಬಯಲಾಗಿವೆ.

ಹೇಗೆ ರಾಮ-ಕೃಷ್ಣರ ಲೆಕ್ಕ?:

ಟ್ರಾನ್ಸ್‌ಫಾರ್ಮರ್ ವಿತರಣೆಯಲ್ಲಿ ಕೆಲ ಹೆಸ್ಕಾಂ ಅಧಿಕಾರಿಗಳು ಭಾರೀ ಕೈ ಚಳಕ ತೋರಿಸಿದ್ದಾರೆ. ನಗರ ಭಾಗದ ಲೆಕ್ಕ ಕೇಳಿದರೆ ಗ್ರಾಮೀಣ ಭಾಗದ ಕಡೆಗೆ, ಕೃಷಿಕರಿಗೆ ವಿತರಿಸಿದ ಟ್ರಾನ್ಸ್‌ಫಾರ್ಮರ್‌ಗಳ ವಿವರಣೆ ಕೇಳಿದರೆ ನಗರದ ಲೆಕ್ಕ ಕೊಟ್ಟು ಇಲಾಖೆಗೆ ಅಧಿಕಾರಿಗಳು ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಟ್ರಾನ್ಸ್‌ಫಾರ್ಮರ್‌ ವಿತರಣೆ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದಾಗ ದಾಸ್ತಾನು ವಿಭಾಗದ ಮೇಲ್ವಿಚಾರಕ ಸೇರಿ ಕೆಲ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟಿರುವುದು ಸ್ಪಷ್ಟವಾಗಿದೆ. ಹೀಗಾಗಿ ಹೆಸ್ಕಾಂ ವ್ಯಾಪ್ತಿಯಲ್ಲಿ 1500 ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಸುಮಾರು 80-90 ಕೋಟಿ ರು.ನಷ್ಟು ಅಕ್ರಮ ನಡೆದಿದೆ ಎಂಬ ಅಂದಾಜು ಈವರೆಗೆ ಸಿಕ್ಕಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಅಕ್ರಮದ ಮೊತ್ತ ಹೆಚ್ಚಾಗಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹೆಸ್ಕಾಂ ದಾಖಲೆ ಕೋರಿದ ಸಿಐಡಿ

ಟ್ರಾನ್ಸ್‌ಫಾರ್ಮರ್‌ ಹಗರಣದ ಕುರಿತು ಮತ್ತಷ್ಟು ದಾಖಲೆ ಸಲ್ಲಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸಿಐಡಿ ಸೂಚಿಸಿದೆ. ಪ್ರಕರಣ ಸಂಬಂಧ ಕೆಲ ದಾಖಲೆಗಳು ಸಲ್ಲಿಕೆಯಾಗಿವೆ. ಆದರೆ ಹಗರಣದ ಆಳ ಹೆಚ್ಚಾಗಿರುವ ಕಾರಣ ಮತ್ತಷ್ಟು ವಿವರಣೆಯನ್ನು ಹೆಸ್ಕಾಂ ಅಧಿಕಾರಿಗಳಿಂದ ಕೇಳಿದ್ದೇವೆ. ಈ ದಾಖಲೆಗಳ ಸಲ್ಲಿಕೆ ಬಳಿಕ ನೋಟಿಸ್ ಜಾರಿಗೊಳಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

9 ಖಾಸಗಿ ಕಂಪನಿಗಳ ಮೇಲೆ ದಾಳಿ

ಈ ಹಗರಣ ಸಂಬಂಧ ಹೆಸ್ಕಾಂಗೆ ಟ್ರಾನ್ಸ್‌ ಫಾರ್ಮರ್ ಪೂರೈಸಿದ್ದ 9 ಖಾಸಗಿ ಕಂಪನಿಗಳಿಗೆ ಸಿಐಡಿ ತನಿಖೆ ಬಿಸಿ ತಟ್ಟಿದೆ. ಕಳೆದ ವಾರ ಖಾಸಗಿ ಕಂಪನಿಗಳ ಕಚೇರಿಗಳು, ಅಧಿಕಾರಿಗಳ ಮನೆಗಳ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕಾರಿಗಳಿಗೆ ಕಿಕ್‌ ಬ್ಯಾಕ್‌

ಈ ಹಗರಣ ಸಂಬಂಧ ಹಳೇ ಹುಬ್ಬಳ್ಳಿ ಹಾಗೂ ಸಿಐಡಿ ಠಾಣೆಯಲ್ಲಿ ವಂಚನೆ ಹಾಗೂ ವಿಶ್ವಾಸ ದ್ರೋಹ ಸೇರಿದಂತೆ ಇತರೆ ಆರೋಪಗಳಡಿ ಎಫ್‌ಐಆರ್ ದಾಖಲಾಗಿದೆ. ಆದರೆ ಅಕ್ರಮದಲ್ಲಿ ಅಧಿಕಾರಿಗಳು ‘ಕಿಕ್‌ ಬ್ಯಾಕ್‌’ ಪಡೆದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಲು ಯೋಜಿಸಲಾಗಿದೆ ಎಂದು ಸಿಐಡಿ ಉನ್ನತ ಮೂಲಗಳು ತಿಳಿಸಿವೆ.