Asianet Suvarna News Asianet Suvarna News

ಶಬರಿಮಲೆಗೆ ರಾಜ್ಯದ 9 ಸ್ತ್ರೀಯರ ಬುಕ್ಕಿಂಗ್‌!

ಅಯ್ಯಪ್ಪ ದರ್ಶನಕ್ಕೆ ರಾಜ್ಯದ 9 ಸ್ತ್ರೀಯರ ಬುಕ್ಕಿಂಗ್‌!| ವಿವಿಧ ರಾಜ್ಯಗಳ 319 ಮಹಿಳೆಯರಿಂದ ಆನ್‌ಲೈನ್‌ ನೋಂದಣಿ| ಎಲ್ಲರೂ 15ರಿಂದ 45 ವಯಸ್ಸಿನವರು| ನಿನ್ನೆ 12ರ ಬಾಲಕಿಗೆ ತಡೆ

9 Ladies From karnataka Books Online Ticket To sabarimala
Author
Bangalore, First Published Nov 20, 2019, 10:21 AM IST

ತಿರುವನಂತಪುರಂ[ನ.20]: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ವಿವಾದವಿದ್ದರೂ, ಈ ವಯಸ್ಸಿನ 319 ಮಹಿಳೆಯರು ದರ್ಶನಕ್ಕೆ ಆನ್‌ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್‌ ಮಾಡಿದ್ದಾರೆ. ಈ ಪೈಕಿ 9 ಮಹಿಳೆಯರು ಕರ್ನಾಟಕದವರು ಎಂಬ ವಿಷಯ ಬೆಳಕಿಗೆ ಬಂದಿದೆ.

ಋುತುಮತಿ ವಯಸ್ಸಿನವರು ಅಯ್ಯಪ್ಪನ ದರ್ಶನ ಪಡೆಯಕೂಡದು ಎಂಬ ಸಾಂಪ್ರದಾಯಿಕ ನಿರ್ಬಂಧ ಶತಮಾನಗಳಿಂದ ಶಬರಿಮಲೆಯಲ್ಲಿ ಜಾರಿಯಲ್ಲಿದೆ. ಆದರೆ ಕಳೆದ ವರ್ಷ ಸುಪ್ರೀಂಕೋರ್ಟ್‌ ಈ ನಿರ್ಬಂಧ ತೆಗೆದುಹಾಕಿತ್ತು. ಸುಪ್ರೀಂಕೋರ್ಟ್‌ ಆದೇಶದ ಹೊರತಾಗಿಯೂ, ದೇವರ ದರ್ಶನಕ್ಕೆ ಆಗಮಿಸಿದ್ದ ಹಲವು ಮಹಿಳೆಯರಿಗೆ ಸ್ಥಳೀಯ ಭಕ್ತಾದಿಗಳು ಅಡ್ಡಿ ಮಾಡಿದ್ದರು. ಈ ಬಗ್ಗೆ ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಅದರ ಹೊರತಾಗಿಯೂ ಕೆಲವೇ ಕೆಲವು ಮಹಿಳೆಯರು ಪೊಲೀಸ್‌ ಭದ್ರತೆಯಲ್ಲಿ ರಹಸ್ಯವಾಗಿ ದೇವರ ದರ್ಶನ ಮಾಡಿಕೊಂಡು ಬಂದಿದ್ದರು.

ಶಬರಿಮಲೆಗೆ ಭಾರೀ ಭಕ್ತರ ಆಗಮನ: ಮೊದಲ ದಿನ 3 ಕೋಟಿ ರೂ. ಆದಾಯ!

ಹೀಗಾಗಿ ಈ ವರ್ಷ ಋುತುಮತಿ ವಯಸ್ಸಿನ ಮಹಿಳೆಯರ ಭೇಟಿ ಬಗ್ಗೆ ಕುತೂಹಲವಿತ್ತು. ಅದರ ಬೆನ್ನಲ್ಲೇ ಇದೀಗ 15-45ರ ವಯಸ್ಸಿನ 319 ಮಹಿಳೆಯರು ಆನ್‌ಲೈನ್‌ ಮೂಲಕ ಅಯ್ಯಪ್ಪ ದರ್ಶನಕ್ಕೆ ನೋಂದಣಿ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಇವರಲ್ಲಿ ಆಂಧ್ರಪ್ರದೇಶದ 160, ತಮಿಳುನಾಡಿನ 139, ಕರ್ನಾಟಕದ 9, ತೆಲಂಗಾಣದ 8 ಹಾಗೂ ಒಡಿಶಾದ 3 ಮಹಿಳೆಯರು ಸೇರಿದ್ದಾರೆ. ವಿಶೇಷವೆಂದರೆ ಈ 319 ಮಹಿಳೆಯರಲ್ಲಿ ಕೇರಳದ ಒಬ್ಬರೂ ಇಲ್ಲ.

ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಶ್ವಾನ

ತಡೆ:

ಕಳೆದ ವರ್ಷದಂತೆ ಈ ವರ್ಷವೂ ಸಂಪ್ರದಾಯವಾದಿಗಳ ವಿರೋಧದ ಕಾರಣ 10ರಿಂದ 50 ವಯಸ್ಸಿನ ನಡುವಿನ 13 ಮಹಿಳೆಯರನ್ನು ದೇವಾಲಯ ಪ್ರವೇಶದಿಂದ ತಡೆಹಿಡಿಯಲಾಗಿದೆ. ಇವರನ್ನೆಲ್ಲಾ ದೇಗುಲಕ್ಕೆ ಹೋಗದಂತೆ ಪೊಲೀಸರು ನೇರವಾಗಿ ತಡೆಯದೇ ಹೋದರೂ, ಪ್ರಸಕ್ತ ಪರಿಸ್ಥಿತಿಯ ಕುರಿತು ಅವರಿಗೆ ಮಾಹಿತಿ ನೀಡಿದ ಬಳಿಕ ಅವರೇ ದೇವರ ದರ್ಶನದಿಂದ ಹಿಂದೆ ಸರಿದಿದ್ದಾರೆ.

ಈ ವರ್ಷ ಒಟ್ಟಾರೆ 8 ಲಕ್ಷ ಭಕ್ತಾದಿಗಳು (ಪುರುಷರೂ ಸೇರಿ) ಆನ್‌ಲೈನ್‌ನಲ್ಲಿ ದರ್ಶನಕ್ಕೆ ನೋಂದಣಿ ಮಾಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

12 ವರ್ಷದ ಬಾಲಕಿ ವಾಪಸ್‌:

ಈ ನಡುವೆ ತಂದೆಯೊಂದಿಗೆ ಬಂದ 12 ವರ್ಷ ವಯಸ್ಸಿನ ಬಾಲಕಿಯೊಬ್ಬಳು, ಕಡೆಯ ಹಂತದಲ್ಲಿ ದೇವರ ದರ್ಶನದಿಂದ ಹಿಂದಕ್ಕೆ ಸರಿದ ಘಟನೆ ಮಂಗಳವಾರ ನಡೆದಿದೆ. ತಂದೆಯೊಂದಿಗೆ ಇರುಮುಡಿ ಹೊತ್ತು ಈ ಬಾಲಕಿ ಆಗಮಿಸಿದ್ದಳು. ಬುಕ್ಕಿಂಗ್‌ನಲ್ಲಿ ಆಕೆಯ ವಯಸ್ಸನ್ನು 10 ಎಂದು ನಮೂದಿಸಲಾಗಿತ್ತು. ಆದರೆ ಮಹಿಳಾ ಪೊಲೀಸರು ಆಕೆಯ ಆಧಾರ್‌ ಕಾರ್ಡ್‌ ಪರಿಶೀಲಿಸಿದಾಗ ವಯಸ್ಸು 12 ಎಂದು ತಿಳಿದುಬಂತು. ಈ ವೇಳೆ ದೇಗುಲದಲ್ಲಿ ಪ್ರಸಕ್ತ ಇರುವ ಸನ್ನಿವೇಶವನ್ನು ಪೊಲೀಸರು ಪೋಷಕರಿಗೆ ವಿವರಿಸಿದರು. ಬಳಿಕ ಬಾಲಕಿಯನ್ನು ಪೊಲೀಸರ ವಶದಲ್ಲೇ ಬಿಟ್ಟು, ಪೋಷಕರು ತಮ್ಮ ಯಾತ್ರೆ ಮುಂದುವರೆಸಿದರು.

ಶಬರಿಮಲೆ ದರ್ಶನಕ್ಕೆ ಇಂದಿನಿಂದ ಅವಕಾಶ, ವಾಪಸ್ ಹೋದ್ರು ಆಂಧ್ರ ಮಹಿಳೆಯರು

Follow Us:
Download App:
  • android
  • ios