ಕೋಮುಗಲಭೆಯಲ್ಲಿ ಮೃತ ಮುಸ್ಲಿಮರ ಕುಟುಂಬಕ್ಕೆ ಲಕ್ಷಾಂತರ ರು. ನೆರವು

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಅ.19):  ಇತ್ತೀಚಿಗೆ ನಿಷೇಧಕ್ಕೊಳಗಾದ ಪ್ಯಾಫ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ರಾಜ್ಯ ಘಟಕವು ಮುಸ್ಲಿಂ ಸಮುದಾಯಕ್ಕೆ ಸಂಕಷ್ಟದಲ್ಲಿ ಆರ್ಥಿಕ ಸಹಾಯ ಕಲ್ಪಿಸುವುದಾಗಿ ಹೇಳಿ ಕಳೆದ ಒಂದು ದಶಕದ ಅವಧಿಯಲ್ಲಿ 9 ಕೋಟಿ ರು. ದೇಣಿಗೆಯನ್ನು ಸಂಗ್ರಹಿಸಿತ್ತು ಎಂಬ ಮಹತ್ವದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದಲ್ಲದೆ ರಾಜ್ಯದಲ್ಲಿ ಕೋಮು ಗಲಭೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರು ಸೇರಿದಂತೆ 200ಕ್ಕೂ ಹೆಚ್ಚಿನ ಮುಸ್ಲಿಂ ಸಮುದಾಯದವರಿಗೆ ಪಿಎಫ್‌ಐ ನೇರವಾಗಿ ಹಣಕಾಸು ನೆರವು ಕೂಡ ನೀಡಿದೆ. ಈ ಆರ್ಥಿಕ ವಹಿವಾಟಿನ ಕುರಿತ ದಾಖಲೆಗಳನ್ನು ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ತನ್ನ ಸಂಘಟನೆಯ ಹೆಸರಿನಲ್ಲಿ ಪಿಎಫ್‌ಐ ಬ್ಯಾಂಕ್‌ ಖಾತೆ ಹೊಂದಿತ್ತು. ಈ ಖಾತೆಗೆ 2012ರಿಂದ 2022 ವರೆಗೆ 9 ಕೋಟಿ ರು. ಹಣ ದೇಣಿಗೆ ಸಂಗ್ರಹವಾಗಿದೆ. ತಮ್ಮ ಖಾತೆಗೆ ಜಮೆಯಾದ ಮರು ದಿನವೇ ಹಣವನ್ನು ಡ್ರಾ ಮಾಡಿಕೊಂಡು ರಾಷ್ಟ್ರೀಯ ಘಟಕದ ಖಾತೆಗೆ ರಾಜ್ಯದ ಮುಖಂಡರು ವರ್ಗಾಯಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಷೇಧಿತ PFI ಸಂಘಟನೆ ವ್ಯಾಟ್ಸ್ಆ್ಯಪ್ ಗ್ರೂಪ್ ಆಡ್ಮಿನ್ ಪಾಕಿಸ್ತಾನಿ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ATS!

ಸಮಾಜದಲ್ಲಿ ಎರಡು ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕಲು ಹಾಗೂ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪದ ಮೇರೆಗೆ ಬೆಂಗಳೂರು ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಸೆ.23 ರಂದು ದಾಳಿ ನಡೆಸಿ ಪ್ಯಾಫುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಪ್ರಮುಖ 15 ಮಂದಿ ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರ್ಥಿಕ ವ್ಯವಹಾರವನ್ನು ಪರಿಶೀಲಿಸಿದಾಗ ದೇಣಿಗೆ ಸಂಗ್ರಹ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಸ್ಲಾಂ ಅಪಾಯದಲ್ಲಿದೆ ಹಣ ಸಂಗ್ರಹ

ದೇಶದಲ್ಲಿ ಇಸ್ಲಾಂ ಧರ್ಮ ಅಪಾಯಕ್ಕೆ ಸಿಲುಕಿದೆ. ಮುಸ್ಲಿಂ ಧರ್ಮೀಯರಿಗೆ ಬದುಕಿಗೆ ಸಂಚಕಾರ ಎದುರಾಗಿದೆ ಎಂದು ದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯದ ವ್ಯಾಪಾರಿಗಳು, ಐಟಿ-ಬಿಟಿ ಉದ್ಯೋಗಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಹಣವಂತರಿಗೆ ಅನುಕಂಪ ತೋರಿಸಿ ದೇಣಿಗೆ ಸಂಗ್ರಹಿಸುತ್ತಿದ್ದರು. ಪಿಎಫ್‌ಐ ಅಧಿಕೃತ ಬ್ಯಾಂಕ್‌ ಖಾತೆಗೆ ದಾನಿಗಳು 30 ಸಾವಿರದಿಂದ 1 ಲಕ್ಷ ರು.ವರೆಗೆ ಹಣ ವರ್ಗಾಯಿಸಿದ್ದಾರೆ. ಈ ದೇಣಿಗೆ ಹಣವನ್ನು ಕೂಡಲೇ ಎಟಿಎಂನಲ್ಲಿ ಡ್ರಾ ಮಾಡಿಕೊಂಡು ಪಿಎಫ್‌ಐ ಮುಖಂಡರು ಬಳಿಕ ದೆಹಲಿಯಲ್ಲಿದ್ದ ಪಿಎಫ್‌ಐ ರಾಷ್ಟ್ರೀಯ ಸಂಘಟನೆಯ ಖಾತೆಗೆ ಜಮೆ ಮಾಡುತ್ತಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ಪಿಎಫ್‌ಐ ವಿರುದ್ಧ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುತ್ತಿದೆ. ರಾಜ್ಯದ ಪಿಎಫ್‌ಐ ಸಂಗ್ರಹಿಸಿದ್ದ 9 ಕೋಟಿ ಹಣದ ಬಗ್ಗೆ ಇಡಿ ಕೂಡಾ ಮಾಹಿತಿ ಕೆದಕಿದೆ. ಕೆ.ಜಿ.ಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಸಂಚು ಹಾಗೂ ಶಾಂತಿ ಭಂಗ ಆರೋಪದಡಿ ಪ್ರಕರಣದಲ್ಲಿ ಪಿಎಫ್‌ಐ ಆರ್ಥಿಕ ವಹಿವಾಟಿನ ಬಗ್ಗೆ ಬ್ಯಾಂಕ್‌ನಿಂದ ಲೆಕ್ಕ ಕೇಳಿದಾಗ ದೇಣಿಗೆ ವಿಚಾರ ಗೊತ್ತಾಯಿತು. ಈಗಾಗಲೇ ಎನ್‌ಐಎ ಸಹ ಪಿಎಫ್‌ಐ ಆರ್ಥಿಕ ವಹಿವಾಟಿನ ಬಗ್ಗೆ ತನಿಖೆ ಮುಗಿಸಿದೆ. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಗಳ ನೆರವು ಪಡೆದು ಪಿಎಫ್‌ಐ ಮುಖಂಡರ ಮೇಲೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಎಸ್‌ಎಫ್‌ಐ ಕಾಂಗ್ರೆಸ್‌ನ ಒಂದು ಅಂಗ ಸಂಸ್ಥೆ'

ಸಂತ್ರಸ್ತರಿಗೆ ಪಿಎಫ್‌ಐ ನೆರವು:

ರಾಷ್ಟ್ರೀಯ ಸಂಘಟನೆಗೆ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದ ಪಿಎಫ್‌ಐ ಮುಖಂಡರು, ರಾಜ್ಯದಲ್ಲಿ ನಡೆದ ಕೋಮು ಗಲಭೆ ವೇಳೆ ಮೃತಪಟ್ಟಹಾಗೂ ಗಾಯಗೊಂಡ ಸಂತ್ರಸ್ತ ಮುಸ್ಲಿಂ ಕುಟುಂಬಗಳಿಗೆ 5ರಿಂದ 10 ಲಕ್ಷ ರು.ವರೆಗೆ ಆರ್ಥಿಕ ನೆರವು ಕೊಟ್ಟಿದ್ದರು. ಇದು ಪಿಎಫ್‌ಐ ಬಗ್ಗೆ ಸದಭಿಪ್ರಾಯ ಮೂಡಲು ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೈಯಕ್ತಿಕ ಹಣ ಬಳಕೆ ಇಲ್ಲ:

ಈಗ ಬಂಧಿತರಾಗಿರುವ 15 ಮಂದಿ ಪ್ರಮುಖ ಪಿಎಫ್‌ಐ ಮುಖಂಡರ ವೈಯಕ್ತಿಕ ಬ್ಯಾಂಕ್‌ ಖಾತೆಗಳಲ್ಲಿ ಹಣಕಾಸು ವಹಿವಾಟಿನ ಪರಿಶೀಲನೆ ನಡೆಸಲಾಗಿದೆ. ಆದರೆ ಇದುವರೆಗೆ ದೊಡ್ಡ ಮೊತ್ತದ ಹಣ ಬದಲಾವಣೆ ಬಗ್ಗೆ ಮಾಹಿತಿ ಪತ್ತೆಯಾಗಿಲ್ಲ. ಸಂಘಟನೆಗೆ ಪ್ರತ್ಯೇಕವಾಗಿ ಅವರು ಹಣಕಾಸು ನಿರ್ವಹಿಸಿ ಅಧಿಕೃತ ದಾಖಲೆಗಳನ್ನು ಸಹ ಇಟ್ಟುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.