Asianet Suvarna News Asianet Suvarna News

ಇಂದಿನಿಂದ ಹಾವೇರಿ ನುಡಿ ಸಡಗರ: ಚೊಚ್ಚಲ ಸಾಹಿತ್ಯ ಸಮ್ಮೇಳನಕ್ಕೆ ಏಲಕ್ಕಿ ಕಂಪಿನ ನಗರಿ ಸಜ್ಜು..!

ಜ.6, 7 ಮತ್ತು 8ರಂದು ನಡೆಯುವ ಈ ಮೂರು ದಿನಗಳ ‘ನುಡಿ ಜಾತ್ರೆ’ಗೆ ಮದುವಣಗಿತ್ತಿಯಂತೆ ಶೃಂಗಾರಗೊಂಡ ಹಾವೇರಿ ನಗರ. ಈಗಾಗಲೇ ಸಮ್ಮೇಳನದ ಸಿದ್ಧತೆಗಳು ಪೂರ್ಣಗೊಂಡಿವೆ.

86th Kannada Sahitya Sammelana Will be Held on January 6th in Haveri grg
Author
First Published Jan 6, 2023, 1:30 AM IST

ನಾರಾಯಣ ಹೆಗಡೆ

ಹಾವೇರಿ(ಜ.06): 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಏಲಕ್ಕಿ ಕಂಪಿನ ನಗರಿ ಸಜ್ಜಾಗಿದೆ. ಜ.6, 7 ಮತ್ತು 8ರಂದು ನಡೆಯುವ ಈ ಮೂರು ದಿನಗಳ ‘ನುಡಿ ಜಾತ್ರೆ’ಗೆ ಹಾವೇರಿ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಈಗಾಗಲೇ ಸಮ್ಮೇಳನದ ಸಿದ್ಧತೆಗಳು ಪೂರ್ಣಗೊಂಡಿವೆ. ಹಾವೇರಿ ಹೊರವಲಯದ ಹಳೆ ಪಿ.ಬಿ. ರಸ್ತೆಯ ಅಜ್ಜಯ್ಯನ ಗುಡಿ ಎದುರಿನ 128 ಎಕರೆ ವಿಶಾಲ ಜಾಗದಲ್ಲಿ ಸಮ್ಮೇಳನದ ವೇದಿಕೆಗಳು ತಲೆ ಎತ್ತಿವೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿದ್ದು, ಅದ್ಧೂರಿ ಹಾಗೂ ಅಚ್ಚುಕಟ್ಟಿನ ಅಕ್ಷರ ಜಾತ್ರೆಗೆ ಎಲ್ಲ ಪೂರ್ವ ತಯಾರಿ ನಡೆಸಲಾಗಿದೆ.

ಸಮ್ಮೇಳನ ಹಿನ್ನೆಲೆಯಲ್ಲಿ ಇಡೀ ನಗರ ಕನ್ನಡಮಯವಾಗಿದ್ದು, ಎಲ್ಲಿ ನೋಡಿದರೂ ಕೆಂಪು-ಹಳದಿ ಬಾವುಟ ರಾರಾಜಿಸುತ್ತಿದೆ. ನಗರದೆಲ್ಲೆಡೆ ಸಮ್ಮೇಳನಕ್ಕೆ ಸ್ವಾಗತ ಕೋರಿ ಕಮಾನುಗಳು, ದ್ವಾರಗಳು, ಬ್ಯಾನರ್‌ಗಳು ಕಣ್ಣಿಗೆ ಬೀಳುತ್ತಿವೆ. ಝಗಮಗಿಸುವ ದೀಪಾಲಂಕಾರ ಹಾವೇರಿಗೆ ಹೊಸ ಕಳೆ ತಂದಿತ್ತಿದೆ. 30 ಸಾವಿರ ಜನ ಕುಳಿತುಕೊಳ್ಳಬಹುದಾದ ಪ್ರಧಾನ ವೇದಿಕೆ, ಅಕ್ಕಪಕ್ಕದಲ್ಲೇ ಎರಡು ಸಮಾನಾಂತರ ವೇದಿಕೆಗಳು ಪ್ರಧಾನ ಆಕರ್ಷಣೆಯಾಗಿವೆ. ಒಂದೇ ಆವರಣದಲ್ಲಿ ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ಪ್ರದರ್ಶನ ಮಳಿಗೆ ಸಾಹಿತ್ಯಾಸಕ್ತರನ್ನು ಕೈಬೀಸಿ ಸೆಳೆಯಲು ಕಾಯುತ್ತಿವೆ. ನಿತ್ಯ 1 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.

ನಾನು ಎಡಪಂಥೀಯನೂ ಅಲ್ಲ, ಬಲ ಪಂಥೀಯನೂ ಅಲ್ಲ, ನಾನು ಕನ್ನಡ ಪಂಥೀಯ: ದೊಡ್ಡರಂಗೇಗೌಡ

ಇಂದು ಮೆರವಣಿಗೆ:

ಶುಕ್ರವಾರ ಬೆಳಗ್ಗೆ 7.30ಕ್ಕೆ ನಗರದ ಪುರಸಿದ್ದೇಶ್ವರ ಗುಡಿಯಿಂದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಆರಂಭವಾಗಲಿದ್ದು, 101 ಕಲಾ ತಂಡಗಳಿಂದ 1,200 ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಎಂ.ಜಿ. ರಸ್ತೆ, ನಗರಸಭೆ, ಮೈಲಾರ ಮಹದೇವಪ್ಪ ವೃತ್ತ, ಸಿದ್ದಪ್ಪ ವೃತ್ತಕ್ಕೆ ಬಂದು ಹಳೆ ಪಿ.ಬಿ. ರಸ್ತೆ ಮೂಲಕ ಸಾಗಿ ವೇದಿಕೆವರೆಗೆ ಸುಮಾರು ನಾಲ್ಕು ಕಿ.ಮೀ.ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.

ದರ್ಬಾರ್‌ ಮಾದರಿ ರಥ:

ಇದೇ ಮೊದಲ ಬಾರಿ ಸಾರೋಟಿನ ಬದಲು ಅರಮನೆ ದರ್ಬಾರ್‌ ಮಾದರಿಯಲ್ಲಿ ಸರ್ವಾಧ್ಯಕ್ಷರ ಮೆರವಣಿಗೆ ರಥ ಸಿದ್ಧಪಡಿಸಲಾಗಿದೆ. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಂಗೋಲಿಯ ಚಿತ್ತಾರ ಕಂಗೊಳಿಸುತ್ತಿದೆ. ಗೋಡೆಗಳ ಮೇಲೆ ವರ್ಲಿ ಕಲೆಯಲ್ಲಿ ಚಿತ್ತಾಕರ್ಷಕ ಚಿತ್ರಗಳು ನೋಡುಗರ ಮನ ಸೆಳೆಯುತ್ತಿವೆ. ಎಲ್ಲೆಡೆ ಕನ್ನಡ ಧ್ವಜ ಹಾರಾಡುತ್ತಿದ್ದು, ಏಲಕ್ಕಿ ನೆಲದಲ್ಲಿ ಕನ್ನಡದ ಕಂಪು ಮೂಡಿಸುತ್ತಿದೆ.

ನಗರ ಪ್ರವೇಶ ಮಾಡುವಲ್ಲಿ ಸ್ವಾಗತ ಕೋರುವ ಮಹನೀಯರ ಹೆಸರಿನ ಬೃಹತ್‌ ದ್ವಾರ ಬಾಗಿಲು ನಿರ್ಮಿಸಲಾಗಿದೆ. ಕನಕದಾಸರ ಅರಮನೆಯ ಕೋಟೆ ಮಾದರಿಯಲ್ಲಿ ಪ್ರಧಾನ ವೇದಿಕೆಯ ದ್ವಾರ ಬಾಗಿಲು ಆಕರ್ಷಕವಾಗಿದೆ. ಕನಕ, ಶರೀಫ, ಸರ್ವಜ್ಞನ ಹೆಸರಿನ ಪ್ರಧಾನ ವೇದಿಕೆಯನ್ನು ಅರಮನೆ ಶೈಲಿಯಲ್ಲಿ ಸಜ್ಜುಗೊಳಿಸಲಾಗಿದೆ. 30 ಸಾವಿರ ಜನ ಕಾರ್ಯಕ್ರಮ ವೀಕ್ಷಣೆಗೆ ಆಸನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

300 ಪುಸ್ತಕ ಮಳಿಗೆ:

ಪ್ರಧಾನ ವೇದಿಕೆಯ ಎಡ-ಬಲದಲ್ಲಿ ಎರಡು ಸಮಾನಾಂತರ ವೇದಿಕೆ ಸಿದ್ಧವಾಗಿದೆ. 300 ಪುಸ್ತಕ ಮಳಿಗೆ ಹಾಗೂ 300 ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿದೆ. ಮೊದಲ ದಿನ ಒಂದೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಶೇಂಗಾ ಹೋಳಿಗೆ, ರವೆ ಉಂಡೆ, ಮೈಸೂರು ಪಾಕ್‌, ಮೋತಿಚೂರು ಲಾಡು ಸೇರಿ ಸಿಹಿ ತಿನಿಸುಗಳು ಸಿದ್ಧವಾಗಿವೆ. 200 ಕೌಂಟರ್‌ಗಳÜಲ್ಲಿ ಊಟ ಬಡಿಸುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 3000 ಸ್ವಯಂ ಸೇವಕರು, 350 ಅಧಿಕಾರಿಗಳನ್ನು ಊಟೋಪಹಾರಕ್ಕಾಗಿ ನಿಯೋಜಿಸಲಾಗಿದೆ. 2 ಸಾವಿರ ಬಾಣಸಿಗರು ಭೋಜನ ಶಾಲೆಯಲ್ಲಿ ರುಚಿಯಾದ ಅಡುಗೆ ತಯಾರಿಕೆಯಲ್ಲಿ ತೊಡಗಿದ್ದಾರೆ.

ಬೆಳಗ್ಗೆ 11ಕ್ಕೆ ಗಂಟೆಗೆ ಸಿಎಂ ಉದ್ಘಾಟನೆ

ಶುಕ್ರವಾರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮೇಳನ ಉದ್ಘಾಟಿಸಲಿದ್ದು, ಸಾಹಿತಿ ದೊಡ್ಡರಂಗೇಗೌಡ ಅವರು ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ, ನಾಡೋಜ ಮಹೇಶ ಜೋಶಿ ಆಶಯ ನುಡಿಯಾಡಲಿದ್ದಾರೆ. ಬಳಿಕ ಮೂರು ವೇದಿಕೆಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ, ಸಂಜೆ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

Kannada Sahitya Sammelana: 3 ದಿನಗಳ ಹಾವೇರಿ ಅಕ್ಷರ ಜಾತ್ರೆಗೆ ನಾಳೆ ಚಾಲನೆ

ಹೆಚ್ಚುವರಿ ರೈಲು ಸಂಚಾರ

ನುಡಿಜಾತ್ರೆಗೆ ಆಗಮಿಸುವವರಿಗಾಗಿ ಹುಬ್ಬಳ್ಳಿ, ಹಾವೇರಿ, ಹುಬ್ಬಳ್ಳಿ​-ಹರಿಹರ ನಡುವೆ ಹೆಚ್ಚುವರಿ ರೈಲುಗಳನ್ನು ಬಿಡಲಾಗಿದ್ದು, ಹೆಚ್ಚುವರಿಯಾಗಿ ಬಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಾವೇರಿ, ದಾವಣಗೆರೆ, ಹುಬ್ಬಳ್ಳಿಯಲ್ಲಿ ವಸತಿ ವ್ಯವಸ್ಥೆ ಇದ್ದು, 50 ಎಕರೆ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಸೌಲಭ್ಯ ಕಲ್ಪಿಸಲಾಗಿದೆ. ಹುಬ್ಬಳ್ಳಿ-ಹಾವೇರಿ, ಹಾವೇರಿ-ದಾವಣಗೆರೆ ನಡುವೆ ಸಂಚರಿಸಲು ನಗರದಲ್ಲಿ ಮಾರ್ಗಗಳ ಬದಲಾವಣೆ ಮಾಡಲಾಗಿದೆ. 2,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಕನ್ನಡ ಜಾತ್ರೆ

ಬೆಳಗ್ಗೆ 7.30ರಿಂದ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರ ಭವ್ಯ ಮೆರವಣಿಗೆ
3 ವೇದಿಕೆ: 1 ಪ್ರಧಾನ ವೇದಿಕೆ, ಅಕ್ಕಪಕ್ಕ 2 ಸಮನಾಂತರ ವೇದಿಕೆ
30 ಸಾವಿರ: ಪ್ರಧಾನ ವೇದಿಕೆಯಲ್ಲಿರುವ ಒಟ್ಟು ಆಸನಗಳ ಸಂಖ್ಯೆ
1 ಲಕ್ಷ: ನಿತ್ಯ ಸಮ್ಮೇಳನಕ್ಕೆ ಭೇಟಿ ನೀಡುವವರ ನಿರೀಕ್ಷಿತ ಸಂಖ್ಯೆ
300 ಮಳಿಗೆ: ಪುಸ್ತಕ ವ್ಯಾಪಾರಕ್ಕೆ ಸ್ಥಾಪಿಸಲಾಗಿರುವ ಮಳಿಗೆ ಸಂಖ್ಯೆ
200 ಕೌಂಟರ್‌: ಸಾಹಿತ್ಯಾಸಕ್ತರಿಗೆ ರಸದೌತಣ ಬಡಿಸಲು ಊಟದ ಕೌಂಟರ್‌
2000 ಬಾಣಸಿಗರು: ಅಡುಗೆ ತಯಾರಿಕೆಯಲ್ಲಿ ತೊಡಗಿರುವ ಸಿಬ್ಬಂದಿ

Follow Us:
Download App:
  • android
  • ios