Haveri: ಧ್ವಜಾರೋಹಣದ ಮೂಲಕ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಹಾವೇರಿ (ಜ.06): ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ರಾಷ್ಟ್ರ ಧ್ವಜಾರೋಹಣ ಮಾಡಿದರೆ, ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಕ.ಸಾ.ಪ ಅಧ್ಯಕ್ಷ ಮಹೇಶ ಜೋಶಿ ಹಾಗೂ ಕನ್ನಡ ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ನೆರವೇರಿಸಿದರು. ಮೂರು ಧ್ವಜಾರೋಹಣವನ್ನು ಏಕಕಾಲಕ್ಕೆ ಮಾಡಲಾಯಿತು.ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಶಾಸಕ ಓಲೇಕಾರ, ಸಂಸದ ಉದಾಸಿ ಭಾಗಿಯಾಗಿದ್ದಾರೆ.
ಹಾವೇರಿಯಲ್ಲಿ ನುಡಿಜಾತ್ರೆಗೆ ಕ್ಷಣಗಣನೆಗೆ ಪ್ರಾರಂಭವಾಗಿದ್ದು, ಪುರಸಿದ್ದೇಶ್ವರ ಗುಡಿಯಿಂದ ಮೆರವಣಿಗೆ ಆರಂಭವಾಗಿದೆ. ಮೊದಲ ಸಲ ಅಧ್ಯಕ್ಷರಿಗೆ ಸಿದ್ದವಾಗಿರುವ ರಥದಲ್ಲಿ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡರು ಆಸನರಾಗಿದ್ದು, ಅರಮನೆ ದರ್ಬಾರ್ ಮಾದರಿಯಲ್ಲಿ ರಥ ಸಿದ್ದವಾಗಿದೆ.
300 ಪುಸ್ತಕ ಮಳಿಗೆ: ಪ್ರಧಾನ ವೇದಿಕೆಯ ಎಡ-ಬಲದಲ್ಲಿ ಎರಡು ಸಮಾನಾಂತರ ವೇದಿಕೆ ಸಿದ್ಧವಾಗಿದೆ. 300 ಪುಸ್ತಕ ಮಳಿಗೆ ಹಾಗೂ 300 ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿದೆ. ಮೊದಲ ದಿನ ಒಂದೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಶೇಂಗಾ ಹೋಳಿಗೆ, ರವೆ ಉಂಡೆ, ಮೈಸೂರು ಪಾಕ್, ಮೋತಿಚೂರು ಲಾಡು ಸೇರಿ ಸಿಹಿ ತಿನಿಸುಗಳು ಸಿದ್ಧವಾಗಿವೆ. 200 ಕೌಂಟರ್‌ಗಳಲ್ಲಿ ಊಟ ಬಡಿಸುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 3000 ಸ್ವಯಂ ಸೇವಕರು, 350 ಅಧಿಕಾರಿಗಳನ್ನು ಊಟೋಪಹಾರಕ್ಕಾಗಿ ನಿಯೋಜಿಸಲಾಗಿದೆ. 2 ಸಾವಿರ ಬಾಣಸಿಗರು ಭೋಜನ ಶಾಲೆಯಲ್ಲಿ ರುಚಿಯಾದ ಅಡುಗೆ ತಯಾರಿಕೆಯಲ್ಲಿ ತೊಡಗಿದ್ದಾರೆ.
ಹಾವೇರಿ ಪುಣ್ಯಭೂಮಿ, ತಫೋಭೂಮಿ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ
ಬೆಳಗ್ಗೆ 11ಕ್ಕೆ ಗಂಟೆಗೆ ಸಿಎಂ ಉದ್ಘಾಟನೆ: ಶುಕ್ರವಾರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮೇಳನ ಉದ್ಘಾಟಿಸಲಿದ್ದು, ಸಾಹಿತಿ ದೊಡ್ಡರಂಗೇಗೌಡ ಅವರು ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ, ನಾಡೋಜ ಮಹೇಶ ಜೋಶಿ ಆಶಯ ನುಡಿಯಾಡಲಿದ್ದಾರೆ. ಬಳಿಕ ಮೂರು ವೇದಿಕೆಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ, ಸಂಜೆ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.