85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿ: ಯಾವಾಗ..?
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ನಡೆಯಲಿದ್ದು, ಇದಕ್ಕೆ ಮುಹೂರ್ತವನ್ನು ಸಹ ನಿಗದಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಸಮ್ಮೇಳನದಲ್ಲಿ ಅಭಿವೃದ್ಧಿಪರ ಬೆಳಕು ಚೆಲ್ಲುವಂತಹ ಗೋಷ್ಠಿಗಳು ಸಹ ಇರಲಿವೆ. ಹಾಗಾದ್ರೆ ಸಮ್ಮೇಳನ ನಡೆಯುವುದ್ಯಾವಾಗ...? ಅಭಿವೃದ್ಧಿಪರ ಗೋಷ್ಠಿಗಳಾವುವು..? ಫುಲ್ ಡಿಟೇಲ್ಸ್ ಈ ಕೆಳಗಿನಂತಿದೆ..
ಕಲಬುರಗಿ, [ನ.12]: ಕನ್ನಡಕ್ಕೆ 'ಕವಿರಾಜ ಮಾರ್ಗ' ಲಾಕ್ಷಣಿಕ ಗ್ರಂಥ ಕೊಡುಗೆ ನೀಡಿರುವ ನೃಪತುಂಗನ ನೆಲ, ಬಿಸಿಲ ನಾಡು, ತೊಗರಿ ಖಣಜ ಕಲಬುರಗಿಯಲ್ಲಿ 2020ರ ಫೆಬ್ರುವರಿ 5, 6 ಮತ್ತು 7, ಬುಧವಾರ, ಗುರುವಾರ ಹಾಗೂ ಶುಕ್ರವಾರ 3 ದಿನಗಳ ಕಾಲ ಅಖಿಲ ಭಾರತ 85 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಸಮ್ಮೇಳನದ ಕುರಿತಂತೆ ಪೂರ್ವ ಸಿದ್ಧತೆಗಾಗಿ ಕಲಬುರಗಿಯಲ್ಲಿ ಇಂದು [ಮಂಗಳವಾರ] ಚೊಚ್ಚಲ ಸಭೆ ನಡೆಸಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಗಾರ್, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಜೊತೆ ಮಾತುಕತೆ ನಡೆಸಿದ ನಂತರ ಸಮ್ಮೇಳನದ ದಿನಾಂಕ ಹಾಗೂ ಸ್ಥಳ ಪ್ರಕಟಿಸಿದರು.
ರಾಷ್ಟ್ರಪತಿ ಕೈಗೆ ಮಹಾ ರೂಲ್, ಮತ್ತೆ ಬರ್ತಾರ ಸ್ಯಾಂಡಲ್ವುಡ್ ಕ್ಲೀನ್; ನ.12ರ ಟಾಪ್ 10 ಸುದ್ದಿ!
ಇನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ ಮನು ಬಳಗಾರ್, ಸಂಪೂರ್ಣ ಮಾಹಿತಿ ನೀಡಿದ ಸಮ್ಮೇಳನ ನಡೆಸಲು ಇಲ್ಲಿನ ಸೇಡಂ ರಸ್ತೆಯಲ್ಲಿರುವ ಗುಲ್ಬರ್ಗ ವಿವಿ ಅಂಗಳ ಪ್ರಶಸ್ತವಾಗಿದೆ. ಅಲ್ಲಿನ ಹೊರಾಂಗಣ ಕ್ರೀಡಾಂಗಣದ ವಿಶಾಲ ಪ್ರದೇಶದಲ್ಲಿ ಸಮ್ಮೇಳನದ ಪ್ರಧಾನ ವೇದಿಕೆ ಇರುತ್ತದೆ. ಅಂಬೇಡ್ಕರ್ ಹಾಲ್ (1, 100 ಆಸನ ಸಾಮರ್ಥ್ಯ) ಹಾಗೂ ಮಹಾತ್ಮಾಗಾಂಧಿ ಹಾಲ್ (700 ಆಸನ ಸಾಮರ್ಥ್ಯ) ಇಲ್ಲಿ 2 ಸಮಾನಾಂತರ ವೇದಿಕೆಗಳನ್ನು ಮಾಡಲು ಸಾಕಷ್ಟು ಅನುಕೂಲವಿದೆ.
ಊಟೋಪಚಾರ, ಅತಿಥಿಗಳಿಗೆ ತಂಗಲು, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳನ್ನು ಹಾಕಲಿಕ್ಕೆ ಇಲ್ಲಿ ಸ್ಥಳಾವಕಾಶ ಸಾಕಷ್ಟಿದೆ. ಸಾರ್ವಜನಿಕರಿಗೆ ಬಂದು ಹೋಗಲಿಕ್ಕೂ ತುಂಬ ಸವಲತ್ತಿರುವುದರಿಂದ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಗುವಿವಿ ಮುಂಭಾಗದಲ್ಲಿಯೂ ವಿಶಾಲ ಮೈದಾನವಿದ್ದು ಇಲ್ಲಿ ಊಟೋಪಚಾರದ ಸವಲತ್ತು ಮಾಡುವ ಚಿಂತನೆ ಇದೆ. ಸ್ಥಳೀಯ ಆಡಳಿತ, ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಸೇರಿದಂತೆ ಅವರೆಲ್ಲರು ಸಭೆ ನಡೆಸಿ ಎಲ್ಲಿ ಏನೆಲ್ಲಾ ಸವಲತ್ತು ಮಾಡಬಹುದು ಎಂಬುದನ್ನು ನಿರ್ಧರಿಸಲಿದ್ದಾರೆಂದರು.
ಗುವಿವಿ 800 ಎಕರೆ ವಿಶಾಲ ಭೂಪ್ರದೇಶ ಹೊಂದಿದೆ. ಇಲ್ಲಿ ಸಾಕಷ್ಟು ಖುಲ್ಲಾ ಜಾಗವಿದೆ. ಹೀಗಾಗಿ ಸಮ್ಮೇಳನದಲ್ಲಿ ಬರುವ ಪುಸ್ತಕ ಹಾಗೂ ಇತರೆ ವಾಣಿಜ್ಯ ಸೇರಿದಂತೆ 750 ಮಳಿಗೆ ಹಾಕಲು ಸಾಕಷ್ಟು ಅವಕಾಶವಿದೆ. ಊಟಕ್ಕಾಗಿ 150 ಕೌಂಟರ್ ಮಾಡಲಿಕ್ಕೂ ಅವಕಾಶವಿರುವ ಮೈದಾನ ಇಲ್ಲಿದೆ. ಹೀಗಾಗಿ ಗುವಿವಿ ಜ್ಞಾನಗಂಗೆ ಮೈದಾನ ಸಮ್ಮೇಳನ ನಡೆಸಲು ತುಂಬ ಅನುಕೂಲವಾಗಿರುವ ಸ್ಥಳವಾಗಿದೆ. ಸಾಹಿತಿಗಳು ಸಹ ಇದೇ ಜಾಗ ಸೂಕ್ತವೆಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ನೈಸರ್ಗಿಕ ವಿಕೋಪ ಪರಿಹಾರ ಗೋಷ್ಠಿ
ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ವಿಗತಿಗಳ ವಿಚಾರದ ಮೇಲೆ ಬೆಳಕು ಚೆಲ್ಲುವಂತಹ ಅಭಿವೃದ್ಧಿಪರ ಗೋಷ್ಠಿ, ನಮ್ಮನ್ನು ಕಾಡುತ್ತಿರುವ ಬರ, ನೆರೆಯಂತಹ ನೈಸರ್ಗಿಕ ವಿಕೋಪಗಳ ಮೇಲೆ ಪರಿಹಾರ ಕಂಡುಕೊಳ್ಳುವ ಯತ್ನವಾಗಿ ನೈಸರ್ಗಿಕ ವಿಕೋಪದ 2 ಗೋಷ್ಠಿಗಳು ಇರಲಿವೆ.
ಇದರೊಂದಿಗೆ ದಲಿತ- ಬಂಡಾಯ ಸಾಹಿತ್ಯಗೋಷ್ಠಿ, ತತ್ವಪದ, ದಾಸರು, ಸಂತರ ಗೋಷ್ಠಿಗಳು, ಜನಪದ, ರಂಗಭೂಮಿ, ಸಾಹಿತ್ಯ, ಚಿತ್ರಕಲೆ, ಲಲಿತಕಲೆ, ರಂಗಕಲೆ ಸೇರಿದಂತೆ ನಾನಾ ವಿಷಯಗಳು ಗೋಷ್ಠಿಯಲ್ಲಿರಲಿವೆ ಎಂದು ಡಾ. ಬಳಗಾರ್ ಹೇಳಿದರು.
ಸಮ್ಮೇಳನದ ಅಧ್ಯಕ್ಷರ ಆಯ್ಕೆಯಾಗಾಗಿ ಡಿಸೆಂಬರ್ ತಿಂಗಳಲ್ಲಿ ಕಾರ್ಯಕಾರಿಣಿ ಸಭೆ ಕರೆದು ಚರ್ಚಿಸುವೆ. ಇಲ್ಲಿನವರೇ ಅಧ್ಯಕ್ಷರಾಗಿರಬೇಕು ಎಂಬ ಆಗ್ರಹವಿದೆ. ಇದು ಸಹಜ. ಕಾರ್ಯಕಾರಿ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ಹೆಚ್ಚುವರಿ ಬಸ್ ಸೇವೆ
ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಗರದ ವಿವಿದೆಡೆಗಳಿಂದ ಗುಲ್ಬರ್ಗಾ ವಿವಿ ಆವರಣಕ್ಕೆ ಬಂದು ಹೋಗಲು ಜನರಿಗೆ ಅನುಕೂಲ ವಾಗುವಂತೆ ಹೆಚ್ಚಿನ ಬಸ್ ಸೇವೆ ಒದಗಿಸಲಾಗುತ್ತದೆ. ಈ ವಿಚಾರವಾಗಿ ಬರುವ ದಿನಗಳಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಬಿ. ಶರತ್, ಜಿಪಂ ಸಿಇಓ ಡಾ. ರಾಜಾ, ಎಡಿಸಿ ಡಾ. ಶಂಕರ ವಣಿಕ್ಯಾಳ, ಕಸಾಪದ ನಾರಾಯಣಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಬೀದರ್ ಜಿಲ್ಲಾಧ್ಯಕ್ಷ ಸುರೇಶ ಜಮಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.