ಕೋವಿಡ್‌ ತಡೆಯಲು ರಾಜ್ಯದಲ್ಲಿ ಜಾರಿಗೊಳಿಸಿರುವ ಕರ್ಫ್ಯೂ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಿಎಂ ಸೂಚನೆ| ಕರ್ಫ್ಯೂ ನಿರ್ಬಂಧಗಳನ್ನು ಅನುಷ್ಠಾನ ಮೇಲುಸ್ತುವಾರಿಗೆ ಐವರು ಎಡಿಜಿಪಿ ಅಧಿಕಾರಿಗಳ ನಿಯೋಜನೆ| ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣ| ರಾಜ್ಯದ ಎಲ್ಲಾ ಕಾರಾಗೃಹದಲ್ಲಿನ ಪರಿಸ್ಥಿತಿ ಪರಿಶೀಲನೆ ನಡೆಸಲಾಗುತ್ತಿದೆ: ಸಚಿವ ಬೊಮ್ಮಾಯಿ| 

ಬೆಂಗಳೂರು(ಏ.30): ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಪೊಲೀಸ್‌ ಇಲಾಖೆಯು ಅವಿರತವಾಗಿ ಶ್ರಮಿಸುತ್ತಿದ್ದು, ಕೋವಿಡ್‌ ಕೆಲಸಕ್ಕಾಗಿ 8500 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಿವಿಧ ಜಿಲ್ಲಾಡಳಿತಗಳ ವಿಡಿಯೋ ಸಂವಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್‌ ಕೆಲಸಕ್ಕಾಗಿ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತ್ತಷ್ಟು ಅಗತ್ಯ ಇರುವ ಕಾರಣ 8500 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಸಿಬ್ಬಂದಿಯನ್ನು ಒದಗಿಸಲಾಗುವುದು ಎಂದರು.

ಕೋವಿಡ್‌ ತಡೆಯಲು ರಾಜ್ಯದಲ್ಲಿ ಜಾರಿಗೊಳಿಸಿರುವ ಕರ್ಫ್ಯೂ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕರ್ಫ್ಯೂ ನಿರ್ಬಂಧಗಳನ್ನು ಅನುಷ್ಠಾನ ಮೇಲುಸ್ತುವಾರಿಗೆ ಐವರು ಎಡಿಜಿಪಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ರಾಜ್ಯದ ಎಲ್ಲಾ ಕಾರಾಗೃಹಗಳನ್ನು ಸ್ಯಾನಿಟೈಸ್‌ ಮಾಡುವಂತೆ ಸೂಚಿಸಲಾಗಿದೆ. ಜೈಲುಗಳಲ್ಲಿನ ಪಾಸಿಟಿವ್‌ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸೋಂಕಿತ ಕೈದಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಾಜ್ಯದ ಎಲ್ಲಾ ಕಾರಾಗೃಹದಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವೀಕೆಂಡ್​​​ ಕರ್ಫ್ಯೂ ಮುಂದುವರಿಯುತ್ತಾ? ಇಲ್ಲಾ? ಬೊಮ್ಮಾಯಿ ಹೇಳಿದ್ದು ಹೀಗೆ

ಬೆಂಗಳೂರು ನಗರದಲ್ಲಿ 1500 ಮಂದಿ ಸಿವಿಲ್‌ ಡಿಫೆನ್ಸ್‌ ತರಬೇತಿ ಹೊಂದಿರುವವರು ಇದ್ದಾರೆ. ಅವರನ್ನು ಪ್ರತಿ ವಾರ್ಡ್‌ನಲ್ಲಿ ಕೋವಿಡ್‌ ಸೋಂಕಿತರನ್ನು ಪತ್ತೆ ಹಚ್ಚಲು ಮತ್ತು ಐಸೋಲೇಷನ್‌ ಕೆಲಸಕ್ಕೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ, ಬೆಂಗಳೂರು ನಗರದಲ್ಲಿ ಶುಚಿತ್ವ ಕಾಪಾಡಲು ಕಳೆದ ಬಾರಿಯಂತೆ ಕೆಲಸ ಮಾಡಲು ಅಗ್ನಿಶಾಮಕ ದಳ ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.

ಮೇಡ್‌ ಇನ್‌ ಬಾಂಗ್ಲಾದೇಶ ಎಂದು ಹೆಸರಿರುವ ರೆಮ್‌ಡೆಸಿವಿರ್‌ ಮಾರಾಟ ಪ್ರಕರಣವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ. ಈ ಔಷಧ ಬೆಂಗಳೂರಿಗೆ ಹೇಗೆ ಬಂತು? ಯಾವ ಆಸ್ಪತ್ರೆಯಿಂದ ಬಂತು? ಇದನ್ನು ಇಲ್ಲಿಗೆ ತಂದ ವ್ಯಕ್ತಿ ಯಾರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona