ಬೆಂಗಳೂರು(ಜ.08): ಚಲನಚಿತ್ರ ನಟಿ ರಾಧಿಕಾ ಕುಮಾರಸ್ವಾಮಿ ಜತೆ ಹಣಕಾಸು ವ್ಯವಹಾರ ಬಹಿರಂಗಗೊಂಡ ಬಳಿಕ ಈಗ ವಂಚಕ ಯುವರಾಜ್‌ ಸ್ನೇಹ ವಲಯದಲ್ಲಿ ಮತ್ತೆ ಎಂಟಕ್ಕೂ ಹೆಚ್ಚು ನಟಿಯರ ಹೆಸರು ಕೇಳಿಬಂದಿದ್ದು, ಆ ನಟಿಮಣಿಯರಿಗೆ ಕೂಡ ಸಿಸಿಬಿ ತನಿಖೆಯ ನಡುಕ ಹುಟ್ಟಿದೆ ಎಂದು ತಿಳಿದುಬಂದಿದೆ.

ಚಲನಚಿತ್ರಗಳಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ನಟಿಯರಿಗೆ ಗಾಳ ಹಾಕಿರುವ ಯುವರಾಜ್‌, ಆ ನಟಿಯರನ್ನು ಮುಂದಿಟ್ಟು ರಾಜಕಾರಣಿಗಳನ್ನು ಸೆಳೆದಿರಬಹುದು ಎಂಬ ಮಾತುಗಳು ಕೇಳಿಬಂದಿವೆ. ಅಲ್ಲದೆ, ನಟಿಯರ ಖಾತೆಗಳಿಗೆ ಆರೋಪಿಯಿಂದ ಲಕ್ಷ ಲಕ್ಷ ರು. ಹಣ ಸಂದಾಯವಾಗಿದೆ ಎಂಬ ಅನುಮಾನಗಳು ಮೂಡಿವೆ.

ಪ್ರಭಾವಿ ರಾಜಕಾರಣಿ ಜತೆ ರಾಧಿಕಾ ಕುಮಾರಸ್ವಾಮಿ ನಂಟು...?

ಜ್ಯೋತಿಷ್ಯ ಹಾಗೂ ರಾಜಕೀಯ ವಲಯದಲ್ಲಿ ಪ್ರಭಾವಿ ವ್ಯಕ್ತಿ ಎಂದೂ ಬಿಂಬಿಸಿಕೊಂಡಿದ್ದ ಆರೋಪಿಯು ಶಾಸ್ತ್ರ ಹೇಳುವ ನೆಪದಲ್ಲಿ ಚಿತ್ರರಂಗದವರ ಸ್ನೇಹ ಮಾಡಿದ್ದಾನೆ. ಬಳಿಕ ಕೆಲವು ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರಿಗೆ ಚಲನಚಿತ್ರ ನಿರ್ಮಿಸುವುದಾಗಿ ಹೇಳಿ ಅವರ ವಿಶ್ವಾಸ ಗಳಿಸಿದ್ದಾನೆ. ಹೀಗೆ ಚಿತ್ರರಂಗದ ನಂಟು ಬೆಳೆದ ಬಳಿಕ ಯುವರಾಜ್‌, ನಟಿಯರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದಾನೆ. ಕೆಲವರಿಗೆ ಪ್ರಭಾವ ಬೆಳೆಸಿ ಸಿನಿಮಾಗಳಲ್ಲಿ ನಟನೆಗೆ ಅವಕಾಶ ಸಹ ಕೊಡಿಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ಪ್ರಕರಣದ ತನಿಖೆ ವೇಳೆ ಆರೋಪಿಯ ಮೊಬೈಲ್‌ ಕರೆಗಳು ಹಾಗೂ ಬ್ಯಾಂಕ್‌ ದಾಖಲೆಗಳನ್ನು ಪರಿಶೀಲಿಸಿದಾಗ ರಾಜಕೀಯ ನಾಯಕರು, ಉದ್ಯಮಿಗಳು, ನಿವೃತ್ತ-ಹಾಲಿ ಸರ್ಕಾರಿ ಅಧಿಕಾರಿಗಳು, ಚಲನಚಿತ್ರ ನಟರು ಸೇರಿದಂತೆ ಗಣ್ಯ ವ್ಯಕ್ತಿಗಳ ಜತೆ ಹಣಕಾಸು ವ್ಯವಹಾರ ಬಯಲಾಗಿದೆ. ಈ ಮಾಹಿತಿ ಆಧರಿಸಿ ತನಿಖೆ ಮುಂದುವರೆಸಿದಾಗ ಚಲನಚಿತ್ರ ನಟಿಯರ ಖಾತೆಗಳಿಗೆ ಯುವರಾಜ್‌ ಹಣ ವರ್ಗಾಯಿಸಿರುವ ಮಾಹಿತಿ ಸಿಕ್ಕಿದೆ. ಇದರ ಮೊದಲ ಹಂತವಾಗಿ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸೋದರ ರವಿರಾಜ್‌ ಅವರಿಗೆ ಚುರುಕು ಮುಟ್ಟಿಸಿರುವ ಸಿಸಿಬಿ, ಮುಂದಿನ ಹಂತದಲ್ಲಿ ಇತರೆ ನಟಿಯರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.