ರಾಜ್ಯದಲ್ಲಿ ಐದು ತಿಂಗಳ ಬಳಿಕ ಕೋವಿಡ್‌ ದೈನಂದಿನ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ.  ಭಾನುವಾರ 8 ಮಂದಿ ಮೃತರಾಗಿದ್ದಾರೆ. 1,117 ಮಂದಿಯಲ್ಲಿ ಹೊಸದಾಗಿ ಸೋಂಕು 

 ಬೆಂಗಳೂರು (ಸೆ.06):  ರಾಜ್ಯದಲ್ಲಿ ಐದು ತಿಂಗಳ ಬಳಿಕ ಕೋವಿಡ್‌ ದೈನಂದಿನ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ. ಭಾನುವಾರ 8 ಮಂದಿ ಮೃತರಾಗಿದ್ದಾರೆ. 1,117 ಮಂದಿಯಲ್ಲಿ ಹೊಸದಾಗಿ ಸೋಂಕು ಧೃಢ ಪಟ್ಟಿದೆ. 1,354 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಎರಡನೇ ಅಲೆಯ ಅಬ್ಬರ ಪ್ರಾರಂಭಗೊಂಡ ಬಳಿಕ ಕಳೆದ ಏಪ್ರಿಲ್‌ 2ರಂದು ಒಂದಂಕಿಯಲ್ಲಿ ದೈನಂದಿನ ಕೋವಿಡ್‌ ಸಾವು ವರದಿಯಾಗಿತ್ತು. ಅಂದು 6 ಮಂದಿ ಮೃತರಾಗಿದ್ದರು. ಇದಾಗಿ 156 ದಿನಗಳ ಬಳಿಕ ಕೋವಿಡ್‌ ದೈನಂದಿನ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ. ಭಾನುವಾರದ ಮರಣ ದರ ಕೂಡ ಶೇ.0.71ಕ್ಕೆ ಇಳಿದಿದೆ.

ಬೆಂಗಳೂರು ನಗರದಲ್ಲಿ 5, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. 26 ಜಿಲ್ಲೆಯಲ್ಲಿ ಕೋವಿಡ್‌ ಸಾವು ದಾಖಲಾಗಿಲ್ಲ.

ಕೋವಿಡ್‌ 3ನೇ ಅಲೆ ಮಕ್ಕಳಿಗೆ ಭೀಕರ: 2ನೇ ಅಲೆಗಿಂತ 7 ಪಟ್ಟು ಹೆಚ್ಚು ಸೋಂಕು!

ರಾಜ್ಯದಲ್ಲಿ ಸದ್ಯ 17,501 ಸಕ್ರಿಯ ಪ್ರಕರಣಗಳಿವೆ. ಈವರೆಗೆ 29.55 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಗುಣಮುಖರ ಸಂಖ್ಯೆ 29 ಲಕ್ಷ ದಾಟಿದೆ. 37,409 ಮಂದಿ ಮರಣವನ್ನಪ್ಪಿದ್ದಾರೆ. 4.43 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

ಲಸಿಕೆ ಅಭಿಯಾನ: ಭಾನುವಾರ ರಾಜ್ಯದಲ್ಲಿ 1.61 ಲಕ್ಷ ಕೋವಿಡ್‌ ಲಸಿಕೆ ನೀಡಲಾಗಿದೆ. 86,072 ಮಂದಿ ಮೊದಲ ಡೋಸ್‌ ಮತ್ತು 75,684 ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ.

ಈವರೆಗೆ ಆರೋಗ್ಯ ಕಾರ್ಯಕರ್ತರು 7.62 ಲಕ್ಷ, ಮುಂಚೂಣಿ ಕಾರ್ಯಕರ್ತರು 9.37 ಲಕ್ಷ, 18 ರಿಂದ 44 ವರ್ಷದೊಳಗಿನ 1.75 ಕೋಟಿ, 45 ವರ್ಷ ಮೇಲ್ಪಟ್ಟ1.44 ಕೋಟಿ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ.

ಆರೋಗ್ಯ ಕಾರ್ಯಕರ್ತರು 6.13 ಲಕ್ಷ, ಮುಂಚೂಣಿ ಕಾರ್ಯಕರ್ತರು 5.52 ಲಕ್ಷ, 18 ರಿಂದ 44 ವರ್ಷದೊಳಗಿನ 26.86 ಲಕ್ಷ, 45 ವರ್ಷ ಮೇಲ್ಪಟ್ಟ73.83 ಲಕ್ಷ ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

ಇದೇ ವೇಳೆ ಯಾದಗಿರಿ, ವಿಜಯಪುರ, ರಾಯಚೂರು, ರಾಮನಗರ, ಹಾವೇರಿ, ಗದಗ, ಬೀದರ್‌ ಮತ್ತು ಬಾಗಲಕೋಟೆಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲಾಗಿಲ್ಲ. 8 ಜಿಲ್ಲೆಯಲ್ಲಿ ಹತ್ತರೊಳಗೆ ಪ್ರಕರಣ ಬಂದಿದೆ. ಬೆಂಗಳೂರು 358, ದಕ್ಷಿಣ ಕನ್ನಡ 183 ಮತ್ತು ಉಡುಪಿಯಲ್ಲಿ 130 ಹೊಸ ಪ್ರಕರಣ ವರದಿಯಾಗಿದೆ.