ದಿನಕ್ಕೆ ಸರಾಸರಿ 25,432 ಮಂದಿ ಪರೀಕ್ಷೆ| ಮಂಗಳವಾರ ಮತ್ತೆ 2,967 ಮಂದಿ ಸೋಂಕಿತರು ಪತ್ತೆ|ಬೆಂಗಳೂರಿನಲ್ಲಿ ಕೊರೊನಾ ಪರಿಸ್ಥಿತಿ ಸುಧಾರಣೆ| ಕೊರೋನಾ ಸೋಂಕು ದೃಢಪಡುವ ಪ್ರಮಾಣವೂ ಇಳಿಕೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌| 

ಬೆಂಗಳೂರು(ಸೆ.02): ರಾಜಧಾನಿಯಲ್ಲಿ ಕಳೆದ ಮೂರು ದಿನಗಳಲ್ಲಿ (ಆ.29ರಿಂದ ಆ.31) ಒಟ್ಟು 76,297 ಮಂದಿಗೆ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ದಿನಕ್ಕೆ ಸರಾಸರಿ 25,432 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆರ್‌ಎಟಿ ಹಾಗೂ ಆರ್‌ಟಿಪಿಸಿಆರ್‌ ಈ ಎರಡೂ ರೀತಿಯ ಪರೀಕ್ಷೆ ಮಾಡಲಾಗಿದೆ. ದಿನಕ್ಕೆ 25,400 ಮಂದಿಗೆ ಪರೀಕ್ಷೆ ಮಾಡುವ ಗುರಿ ನಿಗದಿಪಡಿಸಿದ್ದು, ಈ ಪೈಕಿ 25,432 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

2000 ಗಡಿ ದಾಟಿದ ಸಾವು:

ನಗರದಲ್ಲಿ ಮಂಗಳವಾರ 2,967 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,32,092ಕ್ಕೆ ಏರಿಕೆಯಾಗಿದೆ. ಇನ್ನು 40 ಮಂದಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 2,005ಕ್ಕೆ ಏರಿಕೆಯಾಗಿದೆ. 1,137 ಮಂದಿ ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 91,180ಕ್ಕೆ ಏರಿಕೆಯಾಗಿದೆ. ಇನ್ನೂ 38,906 ಮಂದಿ ಸೋಂಕಿತರು ವಿವಿಧ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳು, ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 284 ಮಂದಿಗೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕು, ಸಾವಿನ ಪ್ರಮಾಣ ಇಳಿಮುಖ

ಕೋವಿಡ್‌ ಪರೀಕ್ಷೆ ಹೆಚ್ಚಳ, ಬಗೆಹರಿದ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೊರತೆ ಸಮಸ್ಯೆ, ಸೂಕ್ತ ಚಿಕಿತ್ಸೆ ಈ ಎಲ್ಲಾ ಕಾರಣಗಳಿಂದ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಮರಣ ಪ್ರಮಾಣ ಕಳೆದ 15 ದಿನಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದ್ದು, ಶೇ.0.9ಗೆ ಇಳಿದಿದೆ. ಮತ್ತೊಂದೆಡೆ ಪಾಸಿಟಿವಿಟಿ ದರ ಕೂಡ ಶೇ.10.2ಕ್ಕೆ ಇಳಿದಿದೆ.

ಹೀಗೇ ಮುಂದುವರೆದ್ರೆ ಜನವರಿಗೆ ದೇಶದಲ್ಲಿ 1.3 ಕೋಟಿ ಕೊರೋನಾ ಕೇಸ್‌!

ಮೇ ತಿಂಗಳಲ್ಲಿ ಶೇ.3.11, ಜುಲೈನಲ್ಲಿ 2.77ರಷ್ಟಿದ್ದ ಸೋಂಕಿತರ ಮರಣ ಪ್ರಮಾಣ ಕಳೆದ 15 ದಿನಗಳಲ್ಲಿ ಶೇ.0.9 ಕ್ಕೆ ಇಳಿಕೆಯಾಗಿದೆ. ಅದೇ ರೀತಿ ಮೇ ತಿಂಗಳಲ್ಲಿ ಶೇ.23ರಷ್ಟಿದ್ದ ಪಾಸಿಟಿವಿಟಿ ದರ ಈಗ ಶೇ.10.2ಕ್ಕೆ ಇಳಿದಿದೆ. ಅಂದರೆ ನೂರು ಜನರಿಗೆ ಪರೀಕ್ಷೆ ನಡೆಸಿದರೆ ಅದರಲ್ಲಿ 10.2 ಜನರಿಗೆ ಮಾತ್ರ ಈಗ ಸೋಂಕು ದೃಢಪಡುತ್ತಿದೆ. ಒಟ್ಟಿನಲ್ಲಿ ನಗರದಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಕಡಿಮೆಯಾಗುತ್ತಿರುವುದು ನಗರದ ಜನರು ನಿಟ್ಟುಸಿರುಬಿಡಬೇಕಾದ ವಿಚಾರವಾಗಿದೆ.

15 ದಿನದಲ್ಲಿ 482 ಬಲಿ:

ಕಳೆದ 15 ದಿನಗಳಲ್ಲಿ ನಗರದಲ್ಲಿ 52,009 ಮಂದಿಗೆ ಸೋಂಕು ದೃಢಪಟ್ಟಿದ್ದು, 482 ಜನ ಮೃತಪಟ್ಟಿದ್ದಾರೆ. ನಗರದಲ್ಲಿ ಪ್ರತಿದಿನ 25 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಲಾಗುತ್ತಿದೆ. ಜುಲೈನಲ್ಲಿ ನಿತ್ಯ 4000 ಸಾವಿರ ಪರೀಕ್ಷೆ ನಡೆಸಲಾಗುತ್ತಿತ್ತು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಜನಸಾಂದ್ರತೆ ಹೆಚ್ಚು. ಹಾಗಾಗಿಯೇ ನಗರದಲ್ಲಿ ವೇಗವಾಗಿ ಕೋವಿಡ್‌ ಹರಡಿತು. ಅದೇ ರೀತಿ ಸೋಂಕಿನ ಪ್ರಮಾಣ ಇಳಿಮುಖ ಆಗುವುದ ಸಹ ಬೆಂಗಳೂರಿನಿಂದಲೇ ಆರಂಭವಾಗುತ್ತದೆ ಎನ್ನುತ್ತಾರೆ ತಜ್ಞರು.

ಕೇಂದ್ರದ ಟಾರ್ಗೆಟ್‌ ರೀಚ್‌

ಬೆಂಗಳೂರಿನಲ್ಲಿ ಕೊರೊನಾ ಪರಿಸ್ಥಿತಿ ಸುಧಾರಿಸಿದೆ. ಮರಣ ಪ್ರಮಾಣ ಶೇ.1ರ ಒಳಗೆ ಇರಬೇಕು ಎಂಬ ಕೇಂದ್ರ ಸರಕಾರದ ಟಾರ್ಗೆಟ್‌ ತಲುಪುವಲ್ಲಿ ಯಶ ಸಾಧಿಸಲಾಗಿದೆ. ಇದೇ ವೇಳೆ ಕೊರೋನಾ ಸೋಂಕು ದೃಢಪಡುವ ಪ್ರಮಾಣವೂ ಇಳಿಕೆಯಾಗಿದೆ. ಟೆಸ್ಟ್‌ಗಳ ಸಂಖ್ಯೆ ದಿನಕ್ಕೆ 4 ಸಾವಿರ ಇದ್ದದ್ದು ಇದೀಗ 25 ಸಾವಿರಕ್ಕೆ ಏರಿಕೆಯಾಗಿದೆ. ಸೋಂಕು ದೃಢ ಪಡುವ ಪ್ರಮಾಣ ಶೇ.23ರಷ್ಟುಇದ್ದದ್ದು, ಈಗ ಶೇ 10.02 ರಷ್ಟು ಇಳಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.