ಸ್ವಾತಂತ್ರ್ಯ ಅಮೃತ ಮಹೋತ್ಸವ-ಕಾಂಗ್ರೆಸ್ ವರ್ಷವಿಡೀ ಕಾರ‍್ಯಕ್ರಮ: ಡಿಕೆಶಿ
- ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ
- ಕೇವಲ ಪಕ್ಷವಷ್ಟೇ ಅಲ್ಲದೆ ಜನರನ್ನೂ ಒಳಗೂಡಿಸಿಕೊಂಡು ಒಂದೊಂದು ತಿಂಗಳು ಒಂದೊಂದು ವಿಶೇಷ ಕಾರ್ಯಕ್ರಮ
ರಾಯಚೂರು (ಆ.18): ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಕೇವಲ ಪಕ್ಷವಷ್ಟೇ ಅಲ್ಲದೆ ಜನರನ್ನೂ ಒಳಗೂಡಿಸಿಕೊಂಡು ಒಂದೊಂದು ತಿಂಗಳು ಒಂದೊಂದು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ್ಯ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ವಿಭಾಗೀಯ ಮಟ್ಟದ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಸ್ವಾತಂತ್ರ್ಯೋತ್ಸವದ ನೆನಪಲ್ಲಿ ಆಗಸ್ಟ್‌ನಲ್ಲಿ ಹೋರಾಟಗಾರರ ಕುಟುಂಬಗಳನ್ನು ಭೇಟಿ ಮಾಡುವುದು, ಅ.2ರಂದು ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗ್ರಾಪಂ ಹಾಗೂ ಸಹಕಾರ ಕ್ಷೇತ್ರವನ್ನು ಆಯ್ದುಕೊಂಡು ಎಲ್ಲ ಗ್ರಾಪಂಗಳಲ್ಲಿ ಪಕ್ಷದ ಸಮಿತಿಗಳನ್ನು ರಚಿಸಿ ಸಭೆಗಳನ್ನು ನಡೆಸುವುದು, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಬರುತ್ತಿರುವ ನೆಹರು, ಇಂದಿರಾ ಗಾಂಧಿ ಜನ್ಮದಿನ, ಪಕ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಪ್ರಜಾಪ್ರಭುತ್ವ ವ್ಯವಸ್ಥೆ, ಕೇಂದ್ರ ಸರ್ಕಾರದಿಂದ ಸಂವಿಧಾನಕ್ಕೆ ಬಂದಿರುವ ಬಿಕ್ಕಟ್ಟಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿ ವಿದ್ಯಾರ್ಥಿ, ಯುವಜನರು ಹಾಗೂ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವಿವರಿಸಿದರು.
ಸ್ವತಂತ್ರೋತ್ಸವ ಭಾಷಣದಲ್ಲಿ 11 ಅಮೃತ ಮಹೋತ್ಸವ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ
ಬಿಜೆಪಿ ಜನಾಶೀರ್ವಾದ ಕಾರ‍್ಯಕ್ರಮಕ್ಕೆ ಟೀಕೆ
ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜನಾಶೀರ್ವಾದ ಸಮಾರಂಭ ನಡೆಸುತ್ತಿದ್ದು, ಇದಕ್ಕೂ ಪೂರ್ವದಲ್ಲಿ ಸಾರ್ವಜನಿಕರಿಗೆ ಏನನ್ನು ನೀಡಿ ಆಶೀರ್ವಾದ ಪಡೆಯಲು ಮುಂದಾಗಿರುವ ಬಗ್ಗೆ ಬಿಜೆಪಿಗರು ತಿಳಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೊರೋನಾ ಸಮಯದಲ್ಲಿ ಜನರಿಗೆ ಔಷಧಿ, ಆಸ್ಪತ್ರೆಗಳಿಗೆ ಬೆಡ್, ಆಂಬ್ಯುಲೆನ್ಸ್ ನೀಡಿದ್ದಕ್ಕೆ ಆಶೀರ್ವಾದ ಕೇಳುತ್ತಾರೆಯೇ? ಹಿಂದಿನ ಸಿಎಂರನ್ನು ಯಾಕೆ ತೆಗೆದರು, ಕೇಂದ್ರ ಆರೋಗ್ಯ ಸಚಿವರನ್ನು ಯಾಕೆ ಬದಲಾವಣೆ ಮಾಡಿದರು ಎಂದು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.