ಬೆಂಗಳೂರು(ಆ.09): ರಾಜ್ಯದಲ್ಲಿ ಇದೇ ಮೊದಲ ಬಾರಿ ಏಕದಿನದ ಕೊರೋನಾ ಸೋಂಕಿತರ ಸಂಖ್ಯೆ ಏಳು ಸಾವಿರ ದಾಟಿದ್ದು, ಶನಿವಾರ ಒಂದೇ ದಿನ ದಾಖಲೆಯ 7,178 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, ಚಿಕಿತ್ಸೆ ಫಲಕಾರಿಯಾಗದೆ 93 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಕಳೆದ ಜೂ.23ರಿಂದ ಜು.7ರವರೆಗಿನ 16 ದಿನಗಳ ಪೈಕಿ ಹನ್ನೊಂದು ದಿನಗಳ ಕಾಲ ನಿತ್ಯ ಐದು ಸಾವಿರಕ್ಕೂ ಹೆಚ್ಚು, ನಾಲ್ಕು ದಿನ ನಿತ್ಯ ಆರು ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಟ್ಟಿತ್ತು. ಜು.3ರ ಒಂದು ದಿನ ಮಾತ್ರ ಐದು ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸೋಂಕು ದೃಢಪಟ್ಟಿತ್ತು. ಜು.6ರಂದು 6,805 ಮಂದಿಗೆ ಸೋಂಕು ದೃಢಪಟ್ಟಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ ಶನಿವಾರ ಏಳು ಸಾವಿರ ದಾಟಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 1,72,102ಕ್ಕೆ ಏರಿಕೆಯಾಗಿದೆ.

ಡ್ಯೂಟಿಗಾಗಿ ಬಿಎಂಟಿಸಿ ಡ್ರೈವರ್‌, ಕಂಡಕ್ಟರ್‌ 'ಚಪ್ಪಲಿ ಕ್ಯೂ'..!

ಇನ್ನು, ಶನಿವಾರ ಮೃತಪಟ್ಟ93 ಮಂದಿ ಸೇರಿ ರಾಜ್ಯದಲ್ಲಿ ಈವರೆಗೆ ಮೃತಪಟ್ಟಒಟ್ಟು ಸೋಂಕಿತರ ಸಂಖ್ಯೆ ಮೂರು ಸಾವಿರ ದಾಟಿ 3,091ಕ್ಕೆ (ಎಂಟು ಅನ್ಯ ಕಾರಣದ ಸಾವು ಹೊರತುಪಡಿಸಿ) ಏರಿಕೆಯಾಗಿದೆ. ಅಲ್ಲದೆ, ಇದೇ ದಿನ ಸೋಂಕಿನಿಂದ ಗುಣಮುಖರಾದ 5006 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದ ಈವರೆಗೆ ಗುಣಮುಖರಾದವರ ಸಂಖ್ಯೆ 89,238ಕ್ಕೆ ಏರಿಕೆಯಾಗಿದೆ. ಉಳಿದ 79,765 ಮಂದಿ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 683 ಮಂದಿಯ ಆರೋಗ್ಯ ಗಂಭೀರವಾಗಿದ್ದು, ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ 2,665 ಪ್ರಕರಣ:

ರಾಜಧಾನಿ ಬೆಂಗಳೂರು ನಗರದಲ್ಲೇ ಶನಿವಾರ 2,665 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು, ಬಳ್ಳಾರಿ 607, ಉಡುಪಿ 313, ಬೆಳಗಾವಿ 302, ರಾಯಚೂರು 295, ಕಲಬುರಗಿ ಮತ್ತು ಧಾರವಾಡ 261, ಯಾದಗಿರಿ 200, ದಕ್ಷಿಣ ಕನ್ನಡ 194, ತುಮಕೂರು 177, ಕೊಪ್ಪಳ 163, ಬಾಗಲಕೋಟೆ 149, ವಿಜಯಪುರ 143, ಮೈಸೂರು 138, ಹಾಸನ 133, ದಾವಣಗೆರೆ 132, ಉತ್ತರ ಕನ್ನಡ 117, ಮಂಡ್ಯ 101, ಹಾವೇರಿ 95, ಗದಗ 94, ರಾಮನಗರ 93, ಚಿಕ್ಕಮಗಳೂರು 89, ಶಿವಮೊಗ್ಗ 73, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ತಲಾ 66, ಚಿತ್ರದುರ್ಗ 63, ಚಾಮರಾಜನಗರ 62, ಕೋಲಾರ 57, ಬೀದರ್‌ 47, ಕೊಡಗು ಜಿಲ್ಲೆಯಲ್ಲಿ 22 ಮಂದಿಗೆ ಹೊಸದಾಗಿ ಸೋಂಕು ಹರಡಿದೆ.

ಕೊರೋನಾ ಗುಣಮುಖರು ಹೆಚ್ಚು, ಆದ್ರೆ ಅಪಾಯ ಮುಗಿದಿಲ್ಲ, ಮಾಸ್ಕ್ ಹಾಕ್ಕೊಳಿ, ತಜ್ಞರ ವಾರ್ನಿಂಗ್

93 ಸಾವು ಎಲ್ಲೆಲ್ಲಿ:

ಶನಿವಾರ ಬೆಂಗಳೂರಿನಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರಿನಲ್ಲಿ 10, ಬಳ್ಳಾರಿ 9, ಕಲಬುರಗಿ 7, ಧಾರವಾಡ, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ತಲಾ 6, ಉಡುಪಿ 5, ಚಾಮರಾಜನಗರ 3, ರಾಯಚೂರು, ಯಾದಗಿರಿ, ತುಮಕೂರು, ದಾವಣಗೆರೆ, ಹಾವೇರಿ, ರಾಮನಗರ, ಚಿಕ್ಕಮಗಳೂರು ಮತ್ತು ಬೀದರ್‌ನಲ್ಲಿ ತಲಾ 2, ಬೆಳಗಾವಿ, ಕೊಪ್ಪಳ, ವಿಜಯಪುರ, ಮಂಡ್ಯ, ಗದಗ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಐಎಲ್‌ಐ, ಸಾರಿ ಮತ್ತು ಪೂರ್ವ ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದು ಇಲಾಖೆ ಹೇಳಿದೆ.