ಬೆಂಗಳೂರು[ಡಿ.29]: ವರನಟ ಡಾ.ರಾಜಕುಮಾರ್‌ ಕುಟುಂಬಕ್ಕೆ ಸೇರಿದ, ಬೆಂಗಳೂರು ನಗರದಲ್ಲಿರುವ ಡಾ.ರಾಜಕುಮಾರ್‌ ಟ್ರಸ್ಟ್‌ ಫಾರ್‌ ಸಿವಿಲ್‌ ಸವೀರ್‍ಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದ 71 ಮಂದಿ 2015ನೇ ಸಾಲಿನ ಕೆಎಎಸ್‌ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ಅಕಾಡೆಮಿಯ ಮೊದಲ ಬ್ಯಾಚ್‌ನಲ್ಲೇ ಅಭೂತಪೂರ್ವ ಸಾಧನೆ ಮೂಡಿ ಬಂದಿರುವುದು ಅತೀವ ಸಂತಸ ತಂದಿದೆ. ಯಶಸ್ಸು ಸಾಧಿಸಿರುವ ಈ 71 ಮಂದಿ ಪೈಕಿ 41 ಮಂದಿ ಅಣಕು ಸಂದರ್ಶನ ಹಾಗೂ 30 ಮಂದಿ ಯುಪಿಎಸ್ಸಿ, ಕೆಪಿಎಸ್ಸಿ, ಟೆಸ್ಟ್‌ ಸಿರೀಸ್‌ನ ತರಬೇತಿ ಪಡೆದಿದ್ದರು. ವಿಶೇಷವೆಂದರೆ, ಅಕಾಡೆಮಿಯಲ್ಲಿ ತರಬೇತಿ ಪಡೆದ ದೃಷ್ಟಿವಿಕಲಚೇತನರಾದ ಮೇಘನಾ ತಮ್ಮ ಮೊದಲ ಪ್ರಯತ್ನದಲ್ಲೇ ಕೆಎಎಸ್‌ನಲ್ಲಿ ಯಶಸ್ಸು ಗಳಿಸಿರುವುದು ಹೆಮ್ಮೆ ವಿಚಾರವಾಗಿದೆ. ಈ ಮೂಲಕ ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಕನಸು ಕಾಣುವ ಅನೇಕರಿಗೆ ಮೇಘನಾ ಸ್ಫೂರ್ತಿದಾಯಕ ಹಾಗೂ ಪ್ರೇರಣಾದಾಯಕರಾಗಿದ್ದಾರೆ ಎಂದು ಅಕಾಡೆಮಿಯ ಮುಖ್ಯಸ್ಥ ಯುವ ರಾಜಕುಮಾರ್‌ ತಿಳಿಸಿದ್ದಾರೆ.

ಅಕಾಡೆಮಿಯ ಗುಣಮಟ್ಟದ ಮಾರ್ಗದರ್ಶನ ಹಾಗೂ ನುರಿತ ಬೋಧಕರಲ್ಲಿ ವಿಶ್ವಾಸ ಇರಿಸಿದ್ದರ ಫಲವಾಗಿ ಈ ಪ್ರಮಾಣದ ಯಶಸ್ಸು ಸಾಧ್ಯವಾಗಿದೆ. ಇದು ನಮ್ಮ ಜವಾಬ್ದಾರಿ ಮತ್ತು ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಸಾಧಕರ ಈ ಯಶಸ್ಸು ನಾಡಿನ ಜನರ ಏಳಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಭವಿಷ್ಯದಲ್ಲಿ ದೇಶ ಕಟ್ಟುವ ಕಾರ್ಯದಲ್ಲಿ ಹೆಚ್ಚಿನ ಶಕ್ತಿ ಸಿಗಲಿ ಎಂದು ಆಶಿಸಿದ್ದಾರೆ.

2017ರಲ್ಲಿ ಅಕಾಡೆಮಿ ಪಾರಂಭವಾಗಿದ್ದು, ಯುಪಿಎಸ್ಸಿ, ಕೆಪಿಎಸ್‌ಸಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಅಕಾಡೆಮಿ ಆರಂಭವಾದ ಬಳಿಕ ಕೆಎಎಸ್‌ ಮೊದಲ ಬ್ಯಾಚ್‌ನಲ್ಲೇ ಅದ್ಭುತ ಯಶಸ್ಸು ಸಿಕ್ಕಿದೆ. ಈ ಸಾಧಕರ ಎಲ್ಲ ಸಲಹೆ ಸೂಚನೆಗಳಿಗೆ ಅಕಾಡೆಮಿ ಮುಕ್ತವಾಗಿದೆ. ಮುಂದಿನ ಬ್ಯಾಚ್‌ಗಳ ತರಬೇತಿಗೆ ಈ ಸಾಧಕರ ಮಾರ್ಗದರ್ಶನ ಬಳಸಿಕೊಳ್ಳುವುದಾಗಿ ಅಕಾಡೆಮಿಯ ಸದಸ್ಯೆ ರೇಖಾ ತಿಳಿಸಿದ್ದಾರೆ.