Asianet Suvarna News Asianet Suvarna News

ಭಾರಿ ಮಳೆಗೆ ಕರ್ನಾಟಕದ ಶೇ. 71 ಕೆರೆಗಳು ಭರ್ತಿ

ರಾಜ್ಯದಲ್ಲಿ 10500ಕ್ಕೂ ಹೆಚ್ಚು ಕೆರೆ, ಮಳೆಗಾಲ ಮುಗಿವ ಮುನ್ನವೇ ಕೋಡಿಬಿದ್ದ 7522 ಕೆರೆಗಳು

71 Percent Lakes Filled Due to Heavy Rainfall in Karnataka grg
Author
Bengaluru, First Published Aug 10, 2022, 6:43 AM IST

ಬೆಂಗಳೂರು(ಆ.10):  ರಾಜ್ಯದ ಕರಾವಳಿ, ಮಲೆನಾಡು ಮಾತ್ರವಲ್ಲದೆ ಬಯಲುಸೀಮೆಯಲ್ಲೂ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನದಿ, ಹಳ್ಳ-ತೊರೆಗಳು ತುಂಬಿ ಹರಿಯುತ್ತಿರುವುದರೊಂದಿಗೆ ಶೇ.71ಕ್ಕೂ ಹೆಚ್ಚು ಪ್ರಮುಖ ಕೆರೆ, ಸರೋವರಗಳು ತುಂಬಿದ್ದು ಅಂತರ್ಜಲ ಮಟ್ಟವೂ ಹೆಚ್ಚಾಗುವ ಲಕ್ಷಣಗಳು ಕಂಡುಬಂದಿವೆ. ಈ ಬಾರಿ ಉತ್ತಮ ವರ್ಷಧಾರೆಯಿಂದ ಎಲ್ಲ ಕೆರೆ- ಕಟ್ಟೆಗಳಲ್ಲೂ ನೀರು ನಳನಳಿಸುತ್ತಿದೆ. ಲಭ್ಯ ಮಾಹಿತಿಯ ಪ್ರಕಾರ, 25 ಜಿಲ್ಲೆಗಳಲ್ಲಿರುವ 10500ಕ್ಕೂ ಅಧಿಕ ದೊಡ್ಡ ಮತ್ತು ಸಣ್ಣ ಕೆರೆಗಳಲ್ಲಿ 7522 ಪ್ರಮುಖ ಕೆರೆಗಳು ಮಳೆಗಾಲ ಮುಗಿಯುವ ಮುನ್ನವೇ ಭರ್ತಿಯಾಗಿ ಕೋಡಿ ಹರಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ರಾಜ್ಯದಲ್ಲಿ ಕೋಲಾರ ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಕೆರೆಗಳಿದ್ದು ಬಹುತೇಕ ಎಲ್ಲವೂ ಭರ್ತಿಯಾಗಿವೆ. ಕಳೆದ ವರ್ಷವೇ ಇಲ್ಲಿ ಕೆಸಿ ವ್ಯಾಲಿ ನೀರು ಹರಿದು ಬಂದಿದ್ದರಿಂದ ನೀರಿನ ಪ್ರಮಾಣ ಹೆಚ್ಚಿತ್ತು. ಈ ಬಾರಿ ನಿರಂತರ ಮಳೆಗೆ 1875ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿವೆ. ಕಳೆದ ವರ್ಷ ಬಿದ್ದ ಮಳೆಯಿಂದಲೇ ಕೋಲಾರಮ್ಮನ ಕೆರೆ, ಕಣ್ಣೂರು ಕೆರೆಯೂ ಸೇರಿದಂತೆ ಇಲ್ಲಿನ ಬಹುತೇಕ ಕೆರೆಗಳು 25 ವರ್ಷಗಳ ನಂತರ ಕೋಡಿ ಬಿದ್ದಿದ್ದವು. ಇದೀಗ ಮತ್ತೆ ಅದರ ಪುನರಾವರ್ತನೆಯಾಗಿದೆ.

Kolar Muduvadi Lake: ಆಯಾ ತಪ್ಪಿ ಬಿದ್ರೇ ಶಿವನ ಪಾದ ಸೇರೊದು ಗ್ಯಾರಂಟಿ!

ಇನ್ನು ರಾಮನಗರ ಜಿಲ್ಲೆಯಲ್ಲಿರುವ ಒಟ್ಟು 1451 ಕೆರೆಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಮಳೆಗೆ 1281 ಭರ್ತಿಯಾಗಿವೆ. ಜಿಲ್ಲೆ​ಯಲ್ಲಿ ಅತಿ ದೊಡ್ಡ ಕೆರೆ​ಗ​ಳಾದ ಮಾಗಡಿ ತಾಲೂಕು ಕುದೂರು ಹೋಬ​ಳಿಯ ಮಾಯ​ಸಂದ್ರ ಕೆರೆ 20 ವರ್ಷ​ಗಳ ನಂತರ ಕೋಡಿ ಬಿದ್ದರೆ, ರಾಮ​ನ​ಗರ ತಾಲೂ​ಕಿನ ಕೇತೋ​ಹಳ್ಳಿ ಕೆರೆ 15 ವರ್ಷಗಳ ತರು​ವಾಯ ಮೈದುಂಬಿ​ಕೊಂಡಿದೆ.

ಮಂಡ್ಯ ಜಿಲ್ಲೆಯಲ್ಲಿ 1024 ಕೆರೆಗಳಿದ್ದು, ವರುಣಾರ್ಭಟಕ್ಕೆ ಬಹುತೇಕ ಕೆರೆಗಳು ಭರ್ತಿಯಾಗಿವೆ. ಸುಮಾರು 600ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿದ್ದರೆ, ಮಳೆ ನೀರಿನ ರಭಸಕ್ಕೆ ನೂರಾರು ಕೆರೆಗಳು ಒಡೆದುಹೋಗಿವೆ. ಮಳೆಯಾಶ್ರಿತ ಪ್ರದೇಶದಲ್ಲಿದ್ದ ಕೆರೆಗಳೆಲ್ಲವೂ ತುಂಬಿ ಹರಿಯುತ್ತಿವೆ. ದುರ್ದೈವವೆಂದರೆ ಕೆ.ಆರ್‌.ಪೇಟೆ ತಾಲೂಕು ಸಂತೇಬಾಚಹಳ್ಳಿ ಹೋಬಳಿಯ ನಾಲ್ಕೈದು ಕೆರೆಗಳು ಭರ್ತಿಯಾದ ಸಂತಸದಲ್ಲಿ ರೈತರಿದ್ದರು. ಆದರೆ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಆ ಕೆರೆಗಳು ಒಡೆದು ಖಾಲಿಯಾಗಿವೆ.

ಹಾಸನ ಜಿಲ್ಲೆಯಲ್ಲಿ 250ರಲ್ಲಿ 200 ಕೆರೆಗಳು ಭರ್ತಿಯಾಗಿದ್ದರೆ, ತುಮಕೂರು ಜಿಲ್ಲೆಯ 371 ಕೆರೆಗಳ ಪೈಕಿ 240 ಕೆರೆಗಳು ಭರ್ತಿಯಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ 64 ಪ್ರಮುಖ ಕೆರೆಗಳಲ್ಲಿ 17 ಕೆರೆಗಳು ಭರ್ತಿಯಾಗಿವೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 49 ಕೆರೆಗಳು ಭರ್ತಿಯಾಗಿ ಕೋಡಿ ಹರಿದಿವೆ.

ಇದೇ ವೇಳೆ ಉತ್ತರ ಕರ್ನಾಟಕದ ಭಾಗದ ಬೆಳಗಾವಿ ಜಿಲ್ಲೆಯ ಒಟ್ಟು 288 ಕೆರೆಗಳಲ್ಲಿ 118 ಕೆರೆಗಳು ಭರ್ತಿಯಾಗಿದ್ದರೆ, ವಿಜಯಪುರ ಜಿಲ್ಲೆಯ ಒಟ್ಟು 156 ಕೆರೆಗಳಲ್ಲಿ 108 ಕೆರೆಗಳು ಭರ್ತಿಯಾಗಿವೆ. ಬಾಗಲಕೋಟೆ ಜಿಲ್ಲೆಯ ಒಟ್ಟು 62 ಕೆರೆಗಳಲ್ಲಿ 32 ಕೆರೆಗಳು ಭರ್ತಿಯಾಗಿವೆ. ಧಾರವಾಡ ಜಿಲ್ಲೆಯಲ್ಲಿ 260 ಕೆರೆಗಳಿದ್ದು 80 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ 492 ಕೆರೆಗಳಲ್ಲಿ 492 ಕೆರೆಗಳೂ ಭರ್ತಿಯಾಗಿದ್ದರೆ, ಹಾವೇರಿ ಜಿಲ್ಲೆಯ 1146 ಕೆರೆಗಳಲ್ಲಿ 300, ಗದಗ ಜಿಲ್ಲೆಯ 186ರಲ್ಲಿ 86 ಕೆರೆಗಳು ಭರ್ತಿಯಾಗಿವೆ.

ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ನಾಗರಿಕರೊಂದಿಗೆ ಪಾಲಿಕೆ ಕಾರ್ಯಾಗಾರ

ಜಲ‘ಕಲ್ಯಾಣ’:

ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ 350 ಕೆರೆಗಳಿದ್ದು 350 ಭರ್ತಿಯಾಗಿವೆ. ಕಲಬುರಗಿ ಜಿಲ್ಲೆಯಲ್ಲಿ 166 ಕೆರೆಗಳಿದ್ದು 100ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಯಾದಗಿರಿ ಜಿಲ್ಲೆಯ 100ಕ್ಕೂ ಹೆಚ್ಚು ಕೆರೆಗಳಲ್ಲಿ 72 ಕೆರೆಗಳು ಭರ್ತಿಯಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ 16 ದೊಡ್ಡ ಕೆರೆಗಳಿದ್ದು ಅವುಗಳಲ್ಲಿ 5 ಭರ್ತಿಯಾಗಿದ್ದರೆ ವಿಜಯನಗರ ಜಿಲ್ಲೆಯಲ್ಲಿ 15 ಕೆರೆಗಳಿದ್ದು ಅದರಲ್ಲಿ 7 ಕೆರೆಗಳು ಭರ್ತಿಯಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ 280 ಕೆರೆಗಳಿದ್ದು ಕೇವಲ 1 ಕೆರೆ ಮಾತ್ರ ಭರ್ತಿಯಾಗಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿಯಲ್ಲಿ 100ಕ್ಕೂ ಹೆಚ್ಚು ಕೆರೆಗಳಿದ್ದು ಸುಮಾರು 80 ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 654 ಕೆರೆಗಳಿದ್ದು ಅಷ್ಟೂಭರ್ತಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ 12 ಪ್ರಮುಖ ಕೆರೆಗಳು ಭರ್ತಿಯಾಗಿವೆ. ಮಲೆನಾಡು ಭಾಗದ ಚಿಕ್ಕಮಗಳೂರು ಜಿಲ್ಲೆಯಲ್ಲಿ 124 ಕೆರೆಗಳಿದ್ದು 86 ಕೆರೆಗಳು ಕೋಡಿ ತುಂಬಿ ಬಿದ್ದಿದ್ದರೆ, ಕೊಡಗು ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ದೊಡ್ಡಮಟ್ಟದ ಕೆರೆಗಳಿದ್ದು ಅಷ್ಟೂ ಭರ್ತಿಯಾಗಿವೆ.

ಕೋಲಾರ
1875/2500
ರಾಮನಗರ
1281/1451
ಮಂಡ್ಯ
600/1024
ಬೆಳಗಾವಿ
288/ 118
ರಾಯಚೂರು
350/350
ಕಲಬುರಗಿ
109/166
ಉಡುಪಿ
80/100
ದಕ್ಷಿಣ ಕನ್ನಡ
654/654
 

Follow Us:
Download App:
  • android
  • ios