ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ನಾಗರಿಕರೊಂದಿಗೆ ಪಾಲಿಕೆ ಕಾರ್ಯಾಗಾರ ಇಂದು ಬೆಳಗ್ಗೆ 10 ರಿಂದ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಾಗಾರ ಇನ್ನೊಂದೆಡೆ ಇಟ್ಟಮಡು ಕೆರೆ ಅಂಗಳದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ, ಸಾರ್ವಜನಿಕರಿಂದ ಆಕ್ಷೇಪ
ಬೆಂಗಳೂರು (ಜು.13): ಅಮೃತ ನಗರೋತ್ಥಾನ ಕ್ರಿಯಾ ಯೋಜನೆ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯ ವಿವಿಧ ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಪುನಶ್ಚೇತನ ಕಾಮಗಾರಿಗಳ ಅನುಷ್ಠಾನಕ್ಕೆ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಬಿಬಿಎಂಪಿ ಸಲಹೆಗಳನ್ನು ಆಹ್ವಾನಿಸಿದೆ. ಯೋಜನಾ ವರದಿ ತಯಾರಿಸಲು ವಲಯವಾರು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಜುಲೈ 13ರಂದು ಬೆಳಗ್ಗೆ 10ರಿಂದ ಮಲ್ಲೇಶ್ವರ 16ನೇ ಅಡ್ಡರಸ್ತೆಯಲ್ಲಿರುವ ಚೌಡಯ್ಯ ಸ್ಮಾರಕ ಭವನದ ಸಮೀಪವಿರುವ ಐಪಿಪಿ ಸಭಾಂಗಣದಲ್ಲಿ ವಲಯವಾರು ಕಾರ್ಯಗಾರ ನಡೆಯಲಿದೆ. ಆಸಕ್ತರು, ವಲಯವಾರು ಕೆರೆಗಳಿಗೆ ಸಂಬಂಧಿಸಿದಂತೆ ನಿಗದಿತ ಸಮಯದಲ್ಲಿ ಕಾರ್ಯಾಗಾರಕ್ಕೆ ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬಿಬಿಎಂಪಿ ಮುಖ್ಯ ಅಭಿಯಂತರರು(ಕೆರೆಗಳು) ಮನವಿ ಮಾಡಿದ್ದಾರೆ.
ಯಲಹಂಕ ವಲಯದ ವೆಂಕಟೇಶಪುರ ಕೆರೆ, ಸಿಂಗಾಪುರ ಕೆರೆ, ಶಿವನಹಳ್ಳಿ ಕೆರೆ (ಬೆಳಗ್ಗೆ 10-11.30), ದಾಸರಹಳ್ಳಿ ವಲಯದ ಲಕ್ಷ್ಮೇಪುರ ಕೆರೆ, ಕರಿಹೊಬನಹಳ್ಳಿ ಕೆರೆ (ಬೆಳಗ್ಗೆ 11.30-12.30ರವರೆಗೆ), ರಾಜರಾಜೇಶ್ವರಿ ನಗರ ವಲಯದ ದುಬಸಿಪಾಳ್ಯ ಕೆರೆ, ಗಾಂಧಿ ನಗರ ಹೊಸಕೆರೆ ಕೆರೆ, ಲಿಂಗಾದೆರನಹಳ್ಳಿ 13 ಕೆರೆ (ಮಧ್ಯಾಹ್ನ 12.30-1.30ರವರೆಗೆ), ಬೊಮ್ಮನಹಳ್ಳಿ ವಲಯದ ಸ್ವರನಕುಂಟೆ ಗುಡ್ಡೆ ಕೆರೆ, ಗಾರ್ವೆಬಾವಿ ಪಾಳ್ಯ ಕೆರೆ (ಮಧ್ಯಾಹ್ನ 2.30-3ರವರೆಗೆ), ಪೂರ್ವ ವಲಯದ ಸರ್ವಜ್ಞ ನಗರ ಕೆರೆ (ಮಧ್ಯಾಹ್ನ 3.30-3.45ರವರೆಗೆ) ಮತ್ತು ಮಹದೇವಪುರದ ಗುಂಜೂರು ಕಾರ್ಮೆಲ ರಾಂ ಕೆರೆ, ಗುಂಜೂರು ಮಾವಿನಕೆರೆ, ಬಿ.ನಾರಾಯಣಪುರ ಕೆರೆಗಳ (ಮಧ್ಯಾಹ್ನ 3.45-5ರವರೆಗೆ) ಅಭಿವೃದ್ಧಿ ಕುರಿತು ಸಾರ್ವಜನಿಕರು, ಸಂಘ-ಸಂಸ್ಥೆಗಳು ಸಲಹೆ ನೀಡುವ ಮೂಲಕ ಯೋಜನಾ ವರದಿ ತಯಾರಿಸಲು ಸಹಕರಿಸಬೇಕೆಂದು ಕೋರಿದ್ದಾರೆ.
ಇಟ್ಟಮಡು ಕೆರೆ ಅಂಗಳದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಪಾಲಿಕೆ ಸಿದ್ಧತೆ
ಬೆಂಗಳೂರು (ಜು.13):ಕೆರೆ ಉಳಿಸಬೇಕಾದ ಜವಾಬ್ದಾರಿ ಹೊಂದಿರುವ ಬಿಬಿಎಂಪಿಯೇ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಸೇವೆ ನೀಡುವ ನೆಪದಲ್ಲಿ ಇಟ್ಟುಮಡು ಕೆರೆ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ.
ಒಟ್ಟು 10.23 ಎಕರೆ ವಿಸ್ತೀರ್ಣ ಇರುವ ಇಟ್ಟಮಡು ಕೆರೆಯನ್ನು ಈಗಾಗಲೇ ಒತ್ತುವರಿ ಮಾಡಿಕೊಂಡು ಕಟ್ಟಡಗಳು, ಅಪಾರ್ಚ್‌ಮೆಂಟ್, ಶಾಲೆಗಳು ಹಾಗೂ ರಸ್ತೆಯನ್ನೂ ನಿರ್ಮಿಸಲಾಗಿದೆ. ಇದೀಗ ಕೆರೆಯ ಜಾಗದಲ್ಲಿಯೇ ಬಿಬಿಎಂಪಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ಮತ್ತು ಗುದ್ದಲಿ ಪೂಜೆಯೂ ಸಹ ನೆರವೇರಿಸಲಾಗಿದೆ. ಇತ್ತೀಚೆಗೆ ಪಾಲಿಕೆಯ ದಕ್ಷಿಣ ವಿಭಾಗ ಒತ್ತುವರಿಯಾಗಿದ್ದ ಒಂದು ಎಕರೆ ಕೆರೆ ಜಾಗವನ್ನು ತೆರವುಗೊಳಿಸಿತ್ತು. ಈಗ ಅದೇ ಜಾಗದಲ್ಲಿ ಆರೋಗ್ಯ ಕೇಂದ್ರ ನಿರ್ಮಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಪಾಲಿಕೆಯ ಈ ಕ್ರಮಕ್ಕೆ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 19 ಕೆರೆಗಳು ಕಣ್ಮರೆಯಾಗಿದ್ದು, ಇದೀಗ ಈ ಸಾಲಿಗೆ ಇಟ್ಟಮಡು ಕೆರೆ ಸೇರ್ಪಡೆ ಆಗುವ ಭೀತಿ ಉಂಟಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ, ಪಾಲಿಕೆಯ ಕೇಂದ್ರ ಕಚೇರಿಯ ಯೋಜನಾ ವಿಭಾಗ ಅಥವಾ ಕೆರೆಯ ವಿಭಾಗದಿಂದ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಈ ಬಗ್ಗೆ ಮತ್ತೊಮ್ಮೆ ಕಡತಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
