ರಾಜ್ಯದ 5 ಜಿಲ್ಲೆಗಳಲ್ಲಿ ಭಾರೀ ಮಳೆ| ಹರಿಹರದಲ್ಲಿ ಭಾರೀ ಗಾಳಿಗೆ ಅನೇಕ ಮರಗಳು ಧರೆಗುರುಳಿವೆ, ವಿದ್ಯುತ್‌ ವ್ಯತ್ಯಯ| ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಸೇರಿ ಒಟ್ಟು 7 ಮಂದಿ ಬಲಿ| 

ಬೆಂಗಳೂರು(ಮೇ.05): ಧಾರವಾಡ, ಹಾವೇರಿ ಸೇರಿ ರಾಜ್ಯದ ಐದು ಜಿಲ್ಲೆಗಳಲ್ಲಿ ಮಂಗಳವಾರ ಸಂಜೆ ವೇಳೆಗೆ ದಿಢೀರ್‌ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಸೇರಿ ಒಟ್ಟು 7 ಮಂದಿ ಬಲಿಯಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ನೆಲಬೊಮ್ಮನಹಳ್ಳಿಯ ಚಿನ್ನಪ್ರಾಪ್ಪ (40), ವೀರಣ್ಣ (50), ಹರವದಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ರಾಜಶೇಖರ (32), ಎಂ.ಬಿ. ಅಯ್ಯನಹಳ್ಳಿಯ ಪತ್ರೆಪ್ಪ (43), ದಾವಣಗೆರೆ ಜಿಲ್ಲೆ ಮಾಯಕೊಂಡ ಗ್ರಾಮದ ಬಳಿ ಹುಚ್ಚವ್ವನಹಳ್ಳಿಯ ರೈತರಾದ ರವಿಕುಮಾರ (32), ರಮೇಶ (30) ಮೃತ​ರು.

ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ

ಚಿನ್ನಪ್ರಾಪ್ಪ ಹಾಗೂ ವೀರಣ್ಣ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದಾಗ, ರಾಜಶೇಖರ ಅವರು ಸೂಲದಹಳ್ಳಿಯಿಂದ ತಮ್ಮೂರಿಗೆ ನಡೆದುಕೊಂಡು ಹೋಗುವಾಗ, ಪತ್ರೆಪ್ಪ ಅವರು ಮಾಳಗಿ ಮನೆಯ ಬಾಗಿಲು ಮುಚ್ಚಲು ಹೋದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನು ಗುಡ್ಡದ ಜಮೀನಿನಲ್ಲಿ ಮುಂಗಾರು ಬಿತ್ತನೆಗಾಗಿ ಕಲ್ಲುಗಳನ್ನು ಆರಿಸಿ, ಹೊಲವನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಸಿಡಿಲು ಬಡಿದು ರೈತರಾದ ರವಿಕುಮಾರ, ರಮೇಶ ಮೃತಪಟ್ಟಿದ್ದಾರೆ.

ಧಾರವಾಡ, ಹಾವೇರಿ, ಬಳ್ಳಾರಿ, ಗದಗದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸಂಜೆ ವೇಳೆಗೆ ಭರ್ಜರಿ ಮಳೆಯಾದರೆ, ದಾವಣಗೆರೆ ಭಾಗದಲ್ಲಿ ಸಿಡಿಲು-ಗಡುಗು ಸಹಿತ ಉತ್ತಮ ಮಳೆಯಾಗಿದೆ. ಜಿಲ್ಲೆಯ ಹರಿಹರ, ಹೊನ್ನಾಳಿ, ಮಲೆಬೆನ್ನೂರು ಭಾಗದಲ್ಲಿ ಮಳೆಯ ಜತೆಗೆ ಗಾಳಿಯ ಆರ್ಭಟವೂ ಜೋರಾಗಿತ್ತು. ಹರಿಹರದಲ್ಲಿ ಭಾರೀ ಗಾಳಿಗೆ ಅನೇಕ ಮರಗಳು ಧರೆಗುರುಳಿವೆ, ವಿದ್ಯುತ್‌ ವ್ಯತ್ಯಯವಾಗಿದೆ.