Asianet Suvarna News Asianet Suvarna News

ರಾಜಧಾನಿಯಲ್ಲಿ ಸತತ ಏಳು ಗಂಟೆ ಮಳೆ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜಧಾನಿ ಬೆಂಗಳೂರಿನಾದ್ಯಂತ ಶುಕ್ರವಾರ ಧಾರಾಕಾರ ಮಳೆಯಾಗಿದೆ. ಸತತ 7 ಗಂಟೆಗಳ ಕಾಲ ಮಳೆ ಸುರಿದಿದೆ. 

7 Hour Continuous Rain In Bengaluru
Author
Bengaluru, First Published Nov 24, 2018, 8:36 AM IST

ಬೆಂಗಳೂರು :  ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜಧಾನಿ ಬೆಂಗಳೂರಿನಾದ್ಯಂತ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ವಿವಿಧೆಡೆ ಮೂರು ಮರಗಳು ಧರೆಗುರುಳಿವೆ. ಇನ್ನೂ ಎರಡು ದಿನ ನಗರದಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ನಗರದೆಲ್ಲೆಡೆ ಬೆಳಗ್ಗೆಯಿಂದಲೇ ದಡ್ಡಮೋಡ ಕವಿದ ವಾತಾವರಣದಿಂದ ಮಧ್ಯಾಹ್ನದ ವೇಳೆಗೆ ಜಿಟಿ ಜಿಟಿ ಮಳೆ ಸುರಿಸಿತು. ಸಂಜೆಯಾದಂತೆ ಜಿಟಿ ಜಿಟಿ ಮಳೆ ಹದಿ ಬಿರುಸುಗೊಂಡು ಧಾರಾಕಾರವಾಗಿ ಸುರಿಯಲಾರಂಭಿಸಿತು. ಕೆಲ ಗಂಟೆಗಳ ಕಾಲ ಒಂದೇ ಸಮನೆ ಸುರಿದ ಮಳೆಯಿಂದ ನಗರದ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಇದರಿಂದ ವಾಹನ ಸವಾರರು, ಪ್ರಯಾಣಿಕರು ಕೆಲ ಕಾಲ ಪರಿತಪಿಸಿದರು. ಕೆಲಸ ಮುಗಿಸಿ ಹೊರಟ ದ್ವಿಚಕ್ರವಾಹನ ಸವಾರರು ಮಳೆಯಲ್ಲಿ ತೋಯ್ದುಕೊಂಡೇ ಹೋಗುತ್ತಿದ್ದುದು ಕಂಡುಬಂತು.

ಕೆಲವರು ನಗರದ ವಿವಿಧಡೆ ಅಂಡರ್‌ ಪಾಸ್‌ಗಳು, ಮೇಲ್ಸೇತುವೆಗಳ ಕೆಳಗೆ, ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಮಳೆ ನಿಲ್ಲಬಹುದೆಂದು ಕಾಯುತ್ತಿದ್ದರಾದರೂ, ಮಳೆ ನಿಲ್ಲುವ ಲಕ್ಷಣ ಕಾಣದ್ದರಿಂದ ನೆನೆದುಕೊಂಡೇ ಸಾಗಿದರು. ಸಂಜೆ 4ರ ಸುಮಾರಿಗೆ ಬಿರುಸುಗೊಂಡ ಜಿಟಿ ಜಿಟಿ ಮಳೆ ರಾತ್ರಿ 10 ಗಂಟೆಯಾದರೂ ನಿಲ್ಲದೆ ಸುರಿಯುತ್ತಿತ್ತು. ಹಗುರ ಮಳೆಯಾದರೂ ದೀರ್ಘ ಕಾಲ ಸುರಿದಿದ್ದರಿಂದ ಜನರು ತೀವ್ರ ಪರಿತಪಿಸಬೇಕಾಯಿತು.

ಮೆಜೆಸ್ಟಿಕ್‌, ಪಾರ್ಕೊರೇಷನ್‌, ಕೆ.ಆರ್‌.ಮಾರುಕಟ್ಟೆ, ಶಿವಾಜಿನಗರ, ಚಾಮರಾಜಪೇಟೆ, ಮೈಸೂರು ರಸ್ತೆ, ಬಸವನಗುಡಿ, ಹನುಮಂತ ನಗರ, ಶ್ರೀನಗರ, ಬನಶಂಕರಿ, ಜಯನಗರ, ಜೆ.ಪಿ.ನಗರ, ಬನ್ನೇರುಘಟ್ಟರಸ್ತೆ, ಹೊಸೂರು ರಸ್ತೆ, ಮಡಿವಾಳ, ದೊಮ್ಮಲೂರು, ಕೋರಮಂಗಲ, ತುಮಕೂರು ರಸ್ತೆ, ಯಶವಂತಪುರ, ವಿಜಯನಗರ, ರಾಜರಾಜೇಶ್ವರಿ ನಗರ ಸೇರಿದಂತೆ ನಗರದ ಬಹುತೇಕ ಎಲ್ಲಾ ಪ್ರದೇಶಗಳಲ್ಲೂ ಧಾರಾಕಾರ ಮಳೆಯಾಗಿದೆ.

3 ಮರ ಧರೆಗೆ: ಸಿಲ್ಕ್ ಬೋರ್ಡ್‌, ಮಹಾಲಕ್ಷ್ಮೇ ಲೇಔಟ್‌ನ ಗೆಳೆಯರ ಬಳಗ, ಸಂಜಯನಗರ ಈ ಮೂರು ಕಡೆ ಬೃಹತ್‌ ಮರಗಳು ಉರುಳಿ ರಸ್ತೆಗೆ ಬಿದ್ದಿದ್ದು, ಇದರಿಂದ ಕೆಲ ಕಾಲ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಇನ್ನೂ 2 ದಿನ ಮಳೆ:  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೀಸುತ್ತಿರುವ ಗಾಳಿ ಚಳಿಯ ಜೊತೆಗೆ ತುಂತುರು ಹನಿಗಳನ್ನೂ ಹೊತ್ತು ತರುತ್ತಿದೆ. ಇದೇ ವಾತಾವರಣ ಇನ್ನೂ ಎರಡು ದಿನ ನಗರದಲ್ಲಿ ಮುಂದುವರೆಯಲಿದೆ. ಆಗಾಗ ತುಂತುರು ಮಳೆ ಸುರಿಸಲಿದೆ, ಭಾರೀ ಮಳೆಯ ಸಾಧ್ಯತೆ ಇಲ್ಲ. ಭಾನುವಾರ ವಾಯುಭಾರ ಕುಸಿತದ ಪ್ರಭಾವ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ.ಪ್ರಭು ತಿಳಿಸಿದ್ದಾರೆ.

Follow Us:
Download App:
  • android
  • ios