ಹಳೆ ಎಪಿಎಂಸಿ ಕಾಯ್ದೆ ಮರುಜಾರಿ: 650 ಕೋಟಿ ರು. ಆದಾಯ, ಸಚಿವ ಶಿವಾನಂದ ಪಾಟೀಲ್
ಎಪಿಎಂಸಿ ತಿದ್ದುಪಡಿ ಕಾಯ್ದೆ ಈಗಾಗಲೆ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ವಿಧಾನಪರಿಷತ್‌ಗೂ ತರಲಾಗುವುದು. ಆಗ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ಸಹಕಾರ ಬೇಕಿದೆ ಎಂದು ಮನವಿ ಮಾಡಿದ ಸಚಿವ ಶಿವಾನಂದ ಎಸ್.ಪಾಟೀಲ್
ವಿಧಾನ ಪರಿಷತ್(ಜು.13): ಎಪಿಎಂಸಿ ಕಾಯ್ದೆಯನ್ನು ಹಿಂದೆ ಇದ್ದ ರೀತಿಯಲ್ಲಿಯೇ ಮರುಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಅದರಿಂದ ಎಪಿಎಂಸಿಗಳಿಂದ ಸರ್ಕಾರಕ್ಕೆ 650 ಕೋಟಿ ರು. ಆದಾಯ ಬರುವ ನಿರೀಕ್ಷೆಯಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ತಿಳಿಸಿದರು.
ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳ ದುರಸ್ತಿ ಕುರಿತಂತೆ ಜೆಡಿಎಸ್‌ನ ಗೋವಿಂದರಾಜು ಸಚಿವರ ಗಮನ ಸೆಳೆದರು. ಅದಕ್ಕುತ್ತರಿಸಿದ ಶಿವಾನಂದ ಎಸ್.ಪಾಟೀಲ್, ಹಿಂದಿನ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ಎಪಿಎಂಸಿಗಳ ಆದಾಯ ಕುಸಿದು, ಸಂಕಷ್ಟಕ್ಕೆ ಸಿಲುಕುವಂತಾಗಿದೆ. 2019-20ರಲ್ಲಿ ಎಪಿಎಂಸಿಗಳಿಗೆ 620 ಕೋಟಿ ರು. ಆದಾಯವಿತ್ತು. ಅದೇ ಕಾಯ್ದೆ ತಿದ್ದುಪಡಿ ತಂದ ನಂತರ 2022-23ರ ವೇಳೆಗೆ ಆದಾಯ 194 ಕೋಟಿ ರು.ಗೆ ಇಳಿದಿದೆ. ಹೀಗಾಗಿ ಎಪಿಎಂಸಿಗಳಿಗೆ ಹೊಸದಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿಲ್ಲ. ಸಿಬ್ಬಂದಿಗಳಿಗೆ ವೇತನ, ಎಪಿಎಂಸಿ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ. ಹೀಗಾಗಿ ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಾಸ್ ಪಡೆದು, ಹಿಂದಿನಂತೆ ಕಾಯ್ದೆ ರೂಪಿಸಲಾಗುವುದು ಎಂದು ತಿಳಿಸಿದರು.
ರೈತರ ಕಬ್ಬಿನ ಬಾಕಿ 400 ಕೋಟಿ: ಸಕ್ಕರೆ ಸಚಿವ ಶಿವಾನಂದ ಪಾಟೀಲ
ಎಪಿಎಂಸಿ ತಿದ್ದುಪಡಿ ಕಾಯ್ದೆ ಈಗಾಗಲೆ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ವಿಧಾನಪರಿಷತ್‌ಗೂ ತರಲಾಗುವುದು. ಆಗ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ಸಹಕಾರ ಬೇಕಿದೆ ಎಂದು ಸಚಿವರು ಮನವಿ ಮಾಡಿದರು.
ಅದಕ್ಕೆ ಜೆಡಿಎಸ್‌ನ ಟಿ.ಎ.ಶರವಣ, ಎಪಿಎಂಸಿ ಕಾಯ್ದೆ ವಿಚಾರವಾಗಿ ಜೆಡಿಎಸ್‌ನ ಬೆಂಬಲ ಸದಾ ನಿಮಗಿರಲಿದೆ ಎಂದು ಭರವಸೆ ನೀಡಿದರು.