ಬೆಂಗಳೂರು(ಆ.21): ಕರ್ತವ್ಯ ನಿರ್ವಹಿಸದೆ, ಪಾರ್ಕ್‌ನಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ ನಗರದ ಆರು ಮಂದಿ ಸಂಚಾರಿ ಪೊಲೀಸರಿಗೆ ಅಮಾನತು ಶಿಕ್ಷೆ ಪ್ರಾಪ್ತಿಯಾಗಿದೆ.

ಇತ್ತೀಚೆಗೆ ಜಾಲಹಳ್ಳಿ ಠಾಣೆಯ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಸೇರಿ ಆರು ಮಂದಿ ತಮ್ಮ ಬೇಜಾಬ್ದಾರಿಯಿಂದಾಗಿ ಅಮಾನತುಗೊಂಡಿದ್ದಾರೆ. ಜಾಲಹಳ್ಳಿ ಸಂಚಾರ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಮಂಜುನಾಥಯ್ಯ, ಹೆಡ್‌ ಕಾನ್‌ಸ್ಪೇಬಲ್‌ ನಾಗರಾಜು, ಹೆಡ್‌ಕಾನ್ಸ್‌ಟೇಬಲ್‌ಗಳಾದ ಪದ್ಮನಾಭ, ಮಧುಸೂನ್‌, ವಿಶ್ವನಾಥ್‌ ಹಾಗೂ ಮಹಿಳಾ ಕಾನ್ಸ್‌ಟೇಬಲ್‌ ಸುಜನಾ ಅವರನ್ನು ಅಮಾನತುಗೊಳಿಸಿ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಸೌಮ್ಯಲತಾ ಆದೇಶ ಹೊರಡಿಸಿದ್ದಾರೆ.

ಕೊರೋನಾ ಭೀತಿ: ಕೆಂಪೇಗೌಡ ಏರ್‌ಪೋರ್ಟಲ್ಲಿ ವರ್ಚ್ಯುವಲ್‌ ಮಾಹಿತಿ ಸೇವೆ

ಜಾಲಹಳ್ಳಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಆ.11ರಂದು ಠಾಣೆಯ ಆರು ಸಿಬ್ಬಂದಿಯನ್ನು ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ಕೋಬ್ರಾ ಡ್ಯೂಟಿಗೆ, ಜಾಲಹಳ್ಳಿ ಜಂಕ್ಷನ್‌, ಗಂಗಮ್ಮನ ವೃತ್ತ, ಸಾಹಿತ್ಯ ಕೂಟ ಜಂಕ್ಷನ್‌ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಸಂಚಾರ ನಿರ್ವಹಣೆಯ ಕರ್ತವ್ಯಕ್ಕೆ ನಿಯೋಜಿಸಿದ್ದರು. ಕರ್ತವ್ಯ ನಿಯೋಜಿಸುವ ಮುನ್ನ ಕೊರೋನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ ಧರಿಸುವುದು ಸೇರಿದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ನಿಯಮ ಪಾಲಿಸದೆ, ಕರ್ತವ್ಯದ ಸಮಯದಲ್ಲಿ 6 ಮಂದಿ ಸಿಬ್ಬಂದಿ ಸಾಹಿತ್ಯ ಕೂಟ ವೃತ್ತದಲ್ಲಿರುವ ಜಂಕ್ಷನ್‌ ಬಳಿ ಇರುವ ಪಾರ್ಕ್‌ನಲ್ಲಿ ಅಕ್ಕ-ಪಕ್ಕ ಕುಳಿತು ಹರಟೆ ಹೊಡೆಯುತ್ತಿದ್ದರು. ಸಿಬ್ಬಂದಿ ಹರಟೆ ಹೊಡೆಯುತ್ತಿರುವುದನ್ನು ನೋಡಿದ ಹಿರಿಯ ಅಧಿಕಾರಿಯೊಬ್ಬರು ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಠಾಣಾ ಇನ್ಸ್‌ಪೆಕ್ಟರ್‌ ಡಿಸಿಪಿ ಅವರಿಗೆ ನೀಡಿದ ವರದಿ ಮೇಲೆ ಆರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.