ಪ್ರಯಾಣಿಕರು, ಸಿಬ್ಬಂದಿ ನಡುವೆ ಸಂಪರ್ಕ ತಪ್ಪಿಸಲು ಯೋಜನೆ| ಪ್ರಯಾಣಿಕರಿಗಾಗಿ 4 ಮಾಹಿತಿ ಡೆಸ್ಕ್‌ ಸ್ಥಾಪನೆ| ಡೆಸ್ಕ್‌ ಮುಂದೆ ನಿಂತರೆ ಸ್ಕ್ರೀನ್‌ನಲ್ಲಿ ಸಿಬ್ಬಂದಿ ಪ್ರತ್ಯಕ್ಷ| ಪರಸ್ಪರ ಮಾತುಕತೆಯ ಮೂಲಕ ಮಾಹಿತಿ ಸಾಧ್ಯ|  

ಬೆಂಗಳೂರು(ಆ.21): ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ಸಿಬ್ಬಂದಿ ನಡುವಿನ ಸಂಪರ್ಕ ತಪ್ಪಿಸುವ ಸಲುವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿನ ಮಾಹಿತಿ ಕೇಂದ್ರವನ್ನು ವರ್ಚ್ಯುವಲ್‌ ಆಗಿ ಪರಿವರ್ತಿಸಲಾಗಿದೆ.

ವಿಮಾನಗಳ ಹಾರಾಟ, ಆಗಮನದ ಮಾಹಿತಿ, ವಿಮಾನ ನಿಲ್ದಾಣದಲ್ಲಿನ ಸೇವೆಗಳ ಮಾಹಿತಿ ಹೀಗೆ ನಾನಾ ವಿಚಾರಗಳ ಕುರಿತು ಮಾಹಿತಿ ನೀಡಲು ಕೆಐಎನಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಆದರೆ, ಇದೀಗ ಕೊರೋನಾ ಸೋಂಕು ಹರಡುವ ಭೀತಿಯಿಂದ ಮಾಹಿತಿ ಕೇಂದ್ರ ವರ್ಚ್ಯುವಲ್‌ ಆಧಾರದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತಿದೆ. ಅದರಂತೆ ಪ್ರಯಾಣಿಕರು ಮಾಹಿತಿ ಕೇಂದ್ರ ಸಿಬ್ಬಂದಿ ಜೊತೆಗೆ ಮಾತನಾಡಲು ನಾಲ್ಕು ಕಡೆ ವರ್ಚ್ಯುವಲ್‌ ಡೆಸ್ಕ್‌ ಸ್ಥಾಪಿಸಲಾಗಿದೆ. ಪ್ರಯಾಣಿಕರು ಆ ಡೆಸ್ಕ್‌ ಮುಂದೆ ನಿಂತರೆ, ಅದರಲ್ಲಿನ ಸೆನ್ಸಾರ್‌ ಕೆಲಸ ಮಾಡಲಿದೆ. ಆನಂತರ ಸಿಬ್ಬಂದಿ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳಲಿದ್ದು, ಪರಸ್ಪರ ಮಾತುಕತೆ ಮೂಲಕ ಪ್ರಯಾಣಿಕರು ತಮಗೆ ಬೇಕಾದ ಮಾಹಿತಿ ಪಡೆಯಬಹುದಾಗಿದೆ. ಇದರಿಂದ ಡೆಸ್ಕ್‌ ಮುಟ್ಟುವ ಅವಕಾಶವೂ ಇರುವುದಿಲ್ಲ.

ಕೊರೋನಾ ಮಧ್ಯೆ ಗೌರಿ-ಗಣೇಶ ಹಬ್ಬ: ಊರುಗಳತ್ತ ಜನರು, ಹೆದ್ದಾರಿಗಳಲ್ಲಿ ಟ್ರಾಫಿಕ್‌

ಡೆಸ್ಕ್‌ ಮೂಲಕ ವಿಮಾನ ನಿಲ್ದಾದಲ್ಲಿನ ಸೌಲಭ್ಯ, ವಿಮಾನಗಳ ಹಾರಾಟ, ಆಹಾರ, ಸಾರಿಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಸೇವೆ ನೀಡಲಾಗುತ್ತದೆ. ಒಂದು ವೇಳೆ ವರ್ಚ್ಯುವಲ್‌ ಡೆಸ್ಕ್‌ ಬಳಸಲು ಸಾಧ್ಯವಾಗದಿದ್ದರೆ, ನಿಲ್ದಾಣದಲ್ಲಿನ ಸಿಬ್ಬಂದಿಯ ಸಹಾಯ ಪಡೆಯಬಹುದಾಗಿದೆ ಎಂದು ಕೆಐಎ ಪ್ರಕಟಣೆಯಲ್ಲಿ ತಿಳಿಸಿದೆ.