*   ಮನೆಯಲ್ಲಿಯೇ ಆರೈಕೆಯಲಿರುವ 57 ಸಾವಿರಕ್ಕೂ ಅಧಿಕ ಸೋಂಕಿತರು*   ಸಾಮಾನ್ಯ ಹೋಟೆಲ್‌ಗೆ ದಿನಕ್ಕೆ 4000, ತ್ರಿ ಸ್ಟಾರ್‌ಗೆ 8000, ಫೈವ್‌ ಸ್ಟಾರ್‌ಗೆ 10000 ರು.*   ಒಂದು ಮತ್ತು ಎರಡನೇ ಅಲೆಗೆ ಹೋಲಿಸಿದರೆ ಆಸ್ಪತ್ರೆ ದಾಖಲಾತಿ ಕಡಿಮೆ 

ಬೆಂಗಳೂರು(ಜ.12):  ರಾಜ್ಯದಲ್ಲಿ ಈ ಹಿಂದಿನ ಕೊರೋನಾ(Coronavirus) ಅಲೆಗಳಿಗೆ ಹೋಲಿಸಿದರೆ ಸೋಂಕಿತರ ಆಸ್ಪತ್ರೆ(Hospital) ದಾಖಲಾತಿ ಪ್ರಮಾಣ ನಿಯಂತ್ರಣ ಮಟ್ಟದಲ್ಲಿದೆ. ಸೋಂಕಿತರ ಪೈಕಿ ಶೇ.6ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ(Department of Health) ತಿಳಿಸಿದೆ.

ಕಳೆದ 10 ದಿನಗಳಲ್ಲಿ (ಡಿ.31ರಿಂದ ಜ.11ವರೆಗೂ) 62691 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 3761 ಮಂದಿ (ಶೇ.6ರಷ್ಟು)ಆಸ್ಪತ್ರೆಯಲ್ಲಿ, ಶೇ.1ರಷ್ಟು ಸೋಂಕಿತರು ಕೊರೋನಾ ಕೇರ್‌ ಸೆಂಟರ್‌ನಲ್ಲಿ(Covid Care Center) ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಉಳಿದ 57 ಸಾವಿರಕ್ಕೂ ಅಧಿಕ ಸೋಂಕಿತರು (ಶೇ.93ರಷ್ಟು) ಮನೆಯಲ್ಲಿಯೇ ಆರೈಕೆಯಲಿದ್ದಾರೆ. ಕೊರೋನಾ ಒಂದು ಮತ್ತು ಎರಡನೇ ಅಲೆಗೆ ಹೋಲಿಸಿದರೆ ಆಸ್ಪತ್ರೆ ದಾಖಲಾತಿ ಕಡಿಮೆಯಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

Covid In Bengaluru: 'ಲಕ್ಷಣರಹಿತ ಸೋಂಕಿತರಿಗೆ ಮನೆಯಲ್ಲೇ ಐಸೋಲೇಷನ್‌'

ಎರಡನೇ ಅಲೆಗೆ ಹೋಲಿಸಿದರೆ ಐದು ಪಟ್ಟು ಕಮ್ಮಿ:

ಈ ಹಿಂದೆ ಎರಡನೇ ಅಲೆ ಆರಂಭದ ದಿನಗಳಾದ 2020ರ ಏ.14ರಿಂದ ಏ.22ರ ನಡುವೆ 1.27 ಲಕ್ಷ ಸೋಂಕಿತರಾಗಿದ್ದು, ಶೇ.30ರಷ್ಟುಆಸ್ಪತ್ರೆ, ಶೇ.6ರಷ್ಟು ಕೊರೋನಾ ಕೇರ್‌ ಸೆಂಟರ್‌, ಶೇ.61ರಷ್ಟು ಮನೆ ಆರೈಕೆಯಲ್ಲಿ ಇದ್ದರು. ಎರಡನೇ ಅಲೆ ಉಚ್ಛ್ರಾಯ ಹಂತದಲ್ಲಿ 2020 ಮೇ 7ರಿಂದ 14ವರೆಗೂ 3.1 ಲಕ್ಷ ಸೋಂಕಿತರಾಗಿದ್ದು, ಶೇ.22ರಷ್ಟು ಆಸ್ಪತ್ರೆ, ಶೇ.5ರಷ್ಟು ಕೊರೋನಾ ಕೇರ್‌ ಸೆಂಟರ್‌, ಶೇ.74ರಷ್ಟು ಮನೆ ಆರೈಕೆಯಲ್ಲಿ ಇದ್ದರು. ಇನ್ನು ಕಳೆದ ತಿಂಗಳು ಡಿ.1ರಿಂದ 12ರ ನಡುವೆ 3,151 ಮಂದಿ ಸೋಂಕಿತರಾಗಿದ್ದು, ಶೇ.23ರಷ್ಟು ಆಸ್ಪತ್ರೆ, ಶೇ.3ರಷ್ಟು ಕೊರೋನಾ ಕೇರ್‌ ಸೆಂಟರ್‌, ಶೇ.93ರಷ್ಟು ಮನೆ ಆರೈಕೆಯಲ್ಲಿ ಇದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಅಂಕಿ -ಅಂಶಗಳು

ಸೋಂಕಿತರ ಚಿಕಿತ್ಸೆ/ ಆರೈಕೆ ವಿಧ

*ಸಕ್ರಿಯ ಸೋಂಕಿತರು - 74 ಸಾವಿರ
*ಆಸ್ಪತ್ರೆಯಲ್ಲಿರುವ ಸೋಂಕಿತರು - 3761
*ಮನೆ ಆರೈಕೆಯಲ್ಲಿ - 57 ಸಾವಿರ
*ಕೊರೋನಾ ಕೇರ್‌ ಸೆಂಟರ್‌ - 425
ಆಸ್ಪತ್ರೆ ಸೋಂಕಿತರಲ್ಲಿ ಚಿಕಿತ್ಸೆ ವಿಧ
*ಸಾಮಾನ್ಯ ಹಾಸಿಗೆ - 3511
*ಆಕ್ಸಿಜನ್‌ ಹಾಸಿಗೆ - 178
*ಐಸಿಯು ಹಾಸಿಗೆ - 53
*ವೆಂಟಿಲೇಟರ್‌ - 19

Coronavirus in Karnataka: ಲಾಕ್‌ಡೌನ್‌ ಬಗ್ಗೆ ಹೇಳಿ ಉಲ್ಟಾ ಹೊಡೆದ ಸಚಿವ ಜ್ಞಾನೇಂದ್ರ

ಹೋಟೆಲ್‌ಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ದರ ನಿಗದಿ

ರಾಜ್ಯಾದ್ಯಂತ(Karnataka) ಹೋಟೆಲ್‌ಗಳಲ್ಲಿ(Hotels) ಕೋವಿಡ್‌ ಆರೈಕೆ ಕೇಂದ್ರ ಸ್ಥಾಪಿಸಲು ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ(Government of Karnataka) ಅವಕಾಶ ನೀಡಿದ್ದು, ಈ ಕುರಿತು ಮಾರ್ಗಸೂಚಿ(Guidelines) ಹೊರಡಿಸಿದೆ. ಸಾಮಾನ್ಯ ಹೋಟೆಲ್‌ನಲ್ಲಿ ದಿನವೊಂದಕ್ಕೆ 4 ಸಾವಿರ ರು., ತ್ರಿ ಸ್ಟಾರ್‌ ಹೋಟೆಲ್‌ಗೆ 8 ಸಾವಿರ ರು. ಮತ್ತು ಪಂಚತಾರಾ ಹೋಟೆಲ್‌ಗೆ ಗರಿಷ್ಠ 10 ಸಾವಿರ ರು.ಗಳ ದರವನ್ನು ನಿಗದಿ ಮಾಡಿದೆ.

ಈ ಆರೈಕೆ ಕೇಂದ್ರದಲ್ಲಿ ಸೋಂಕಿನ ಲಕ್ಷಣ ರಹಿತರನ್ನು ಮತ್ತು ಸೌಮ್ಯ ಲಕ್ಷಣ ಉಳ್ಳವರನ್ನು ಮಾತ್ರ ದಾಖಲಿಸಿಕೊಳ್ಳಬೇಕು. ಸೋಂಕಿತರ ಮಾಹಿತಿಯನ್ನು ಜಿಲ್ಲಾಡಳಿತ ಅಥವಾ ಬಿಬಿಎಂಪಿಗೆ ನೀಡಬೇಕು. ಆರೈಕೆ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಇರಬೇಕು. ಟೆಲಿ ಮಾನಿಟರಿಂಗ್‌ ವ್ಯವಸ್ಥೆ ಇರಬೇಕು. ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳ ಶಿಷ್ಟಾಚಾರದ ಪಾಲನೆ ಮಾಡಬೇಕು. ದಿನದ 24 ಗಂಟೆಯೂ ಆ್ಯಂಬ್ಯುಲೆನ್ಸ್‌ ಇರಬೇಕು. ಆರೈಕೆ ಕೇಂದ್ರದ ಎಲ್ಲ ದರಗಳನ್ನು ಪ್ರಕಟಿಸಿರಬೇಕು. ಸೋಂಕಿತರನ್ನು ದಿನದಲ್ಲಿ ಮೂರು ಬಾರಿ ಪರೀಕ್ಷೆ ನಡೆಸಬೇಕು. ಹೋಟೆಲ್‌ ಸಿಬ್ಬಂದಿ ಸೋಂಕಿತರ ಜೊತೆ ಸಂಪರ್ಕಕ್ಕೆ ಬರಬಾರದು ಎಂಬ ನಿಬಂಧನೆಯನ್ನು ಹಾಕಿದೆ.