Covid19: ಕೊರೋನಾ ಅಲೆ ಭೀತಿ: 6 ಜಿನೋಮಿಕ್ ಲ್ಯಾಬ್ ಇನ್ನೂ ಆರಂಭವೇ ಆಗಿಲ್ಲ
* ಕೋವಿಡ್ 2ನೇ ಅಲೆ ವೇಳೆ ಘೋಷಿಸಿ, ಸೋಂಕಿನ ಅಬ್ಬರ ಇಳಿಯುತ್ತಿದ್ದಂತೆ ಸರ್ಕಾರ ನಿರ್ಲಕ್ಷ್ಯ
* ವರದಿಗೆ 2 ತಿಂಗಳು ಕಾಯುವ ದುಸ್ಥಿತಿ
* ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ಸಂಬಂಧಿಸಿದಂತೆ ವೈದ್ಯರು ಮತ್ತು ಸಿಬ್ಬಂದಿಗೆ ತರಬೇತಿ
ರಾಕೇಶ್ ಎನ್.ಎಸ್.
ಬೆಂಗಳೂರು(ನ.28): ಕೊರೋನಾ(Coronavirus) ವೈರಾಣುವಿನ ರೂಪಾಂತರವನ್ನು ಆರಂಭದಲ್ಲೇ ಪತ್ತೆ ಹಚ್ಚುವ ಉದ್ದೇಶದಿಂದ ರಾಜ್ಯ ಸರ್ಕಾರ ಆರು ಕಡೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್ (ತಳಿ ಪತ್ತೆ ಪ್ರಯೋಗಾಲಯ) ಇನ್ನೂ ಸಜ್ಜಾಗಿಲ್ಲ. ಇತ್ತೀಚೆಗೆ ಕೊರೋನಾ ಸೋಂಕು ಕಡಿಮೆಯಾಗಿರುವುದು, ಲ್ಯಾಬ್ ಸ್ಥಾಪನೆಗೆ ಆಗುವ ದುಬಾರಿ ವೆಚ್ಚ, ಮಾನವ ಸಂಪನ್ಮೂಲದ ನಿರ್ವಹಣೆ ಮುಂತಾದ ಕಾರಣಗಳಿಂದ ಸರ್ಕಾರ ಲ್ಯಾಬ್ ಸ್ಥಾಪನೆಗೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಆದ ಕಾರಣ ಲ್ಯಾಬ್ ಶುರುವಾಗಿಲ್ಲ ಎಂದು ಹೇಳಲಾಗಿದೆ.
ಕೊರೋನಾ ವೈರಾಣು ರೂಪಾಂತರಗೊಂಡು ಹರಡುವುದನ್ನು ಪತ್ತೆ ಮಾಡಿ ಇದಕ್ಕೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಮಹತ್ವದ ಪಾತ್ರ ವಹಿಸುವ ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್‌ಗಳು(Genomic Sequencing Lab) ಬೆರಳೆಣಿಕೆಯಷ್ಟು ಇವೆ. ಕೊರೋನಾ ಎರಡನೇ ಅಲೆ ಮಿತಿ ಮೀರಿದ ಸಂದರ್ಭದಲ್ಲಿ ರೂಪಾಂತರಿ ಕೊರೋನಾ ವೈರಾಣು ತಳಿ ಕಂಡು ಬಂದಿತ್ತು. ಆಗ ತಳಿ ಪತ್ತೆ ಮಾಡುವ ಉದ್ದೇಶದಿಂದ ಸರ್ಕಾರ ಈ ಲ್ಯಾಬ್‌ಗಳನ್ನು ರಾಜ್ಯದ(Karnataka) ಬೇರೆ ನಗರಗಳಲ್ಲಿ ಸ್ಥಾಪಿಸಲು ನಿರ್ಧರಿಸಿತ್ತು. ಆದರೆ ಈವರೆಗೂ ಕಾರ್ಯಾರಂಭವಾಗಿಲ್ಲ.
ವೈದ್ಯಕೀಯ ಶಿಕ್ಷಣ ಇಲಾಖೆಯಡಿ(Department of Medical Education) ಕಲಬುರಗಿಯ(Kalaburagi) ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿಯ(Belagavi) ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಂಗಳೂರಿನ(Bengaluru) ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ವಿಜ್ಞಾನ ಸಂಸ್ಥೆ, ಮೈಸೂರು ಮೆಡಿಕಲ್ ಕಾಲೇಜು, ಮಂಗಳೂರು(Mangaluru) ಮತ್ತು ವಿಜಯಪುರ(Vijayapura) ಜಿಲ್ಲಾ ಆಸ್ಪತ್ರೆಯಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್ ಅನ್ನು ತೆರೆಯಲು ಜೂನ್ ತಿಂಗಳಿನಲ್ಲೇ ಸರ್ಕಾರ ನಿರ್ಧಾರ ಕೈಗೊಂಡಿತ್ತು.
Covid-19 Variant: ಜಾಗತಿಕ ತಲ್ಲಣ ಸೃಷ್ಟಿಸಿದ ಒಮಿಕ್ರೋನ್ : 9 ದೇಶಗಳಿಗೆ ಹಬ್ಬಿದ ಹೊಸ ತಳಿ!
ಸದ್ಯ ಇರೋದು ನಾಲ್ಕೇ ಲ್ಯಾಬ್:
ಸದ್ಯ ರಾಜ್ಯದಲ್ಲಿ ನಿಮ್ಹಾನ್ಸ್, ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ, ಟ್ರೆಂಡ್ ಜಿನೋಮಿಕ್ಸ್‌ನಲ್ಲಿ ಮಾತ್ರ ತಳಿ ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿ ತಿಂಗಳಿಗೆ ಕನಿಷ್ಠ 500 ಮಾದರಿಗಳ ಪರೀಕ್ಷೆ ನಡೆಸಲು ಸಾಧ್ಯ ಎಂದು ರಾಜ್ಯ ಜಿನೋಮಿಕ್ ಸರ್ವೇಕ್ಷಣೆ ಸಮಿತಿಯ ಸದಸ್ಯ, ಎಚ್‌ಸಿಜಿ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ವಿಶಾಲ್ ರಾವ್ ಹೇಳುತ್ತಾರೆ.
ಪರೀಕ್ಷೆ ವಿಳಂಬ:
ರಾಜ್ಯದಲ್ಲಿ ಸದ್ಯ ಕೊರೋನಾ ತಳಿ ಪತ್ತೆ ಪರೀಕ್ಷೆ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ. ಆರ್‌ಟಿ-ಪಿಸಿಆರ್(RTPCR) ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಬಳಿಕ ತಳಿ ಪರೀಕ್ಷೆಗೆ ಕಳುಹಿಸಿದ ಮಾದರಿಯ ಫಲಿತಾಂಶ ಬರಲು ಒಂದೂವರೆಯಿಂದ ಎರಡು ತಿಂಗಳು ಕಾಯಬೇಕಾಗಿದೆ. ಉದಾಹರಣೆಗೆ ಕೊರೋನಾದ ರೂಪಾಂತರಗಳಾದ ಇಟಿಎ, ಡೆಲ್ಟಾಪ್ಲಸ್ ತಳಿಗಳು ರಾಜ್ಯಕ್ಕೆ ಕಾಲಿಟ್ಟು ಸುಮಾರು ಎರಡು ತಿಂಗಳ ಬಳಿಕ ತಳಿ ಪರೀಕ್ಷೆಯಲ್ಲಿ ಖಾತರಿಯಾಗಿತ್ತು. ಇಷ್ಟು ತಡವಾಗಿ ಫಲಿತಾಂಶ ಬಂದರೆ ಅಷ್ಟರೊಳಗೆ ವೈರಾಣು ಸಾಕಷ್ಟು ಹಾನಿ ಮಾಡಿರುತ್ತದೆ ಹಾಗೂ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ ಎಂದು ವೈರಾಣು ತಜ್ಞರು ಅಭಿಪ್ರಾಯ ಪಡುತ್ತಾರೆ.
Omicron: ನಿಯಂತ್ರಣಕ್ಕೆ ರಾಜ್ಯ ಸಜ್ಜು: ಸಚಿವ ಸುಧಾಕರ್
ಆರೋಗ್ಯ ಸಚಿವ ಡಾ. ಕೆ. ಸುಧಾಕರ್(Dr K Sudhakar), ಸಾಂಕ್ರಾಮಿಕದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪರೀಕ್ಷೆ ಮತ್ತು ಸಂಪರ್ಕ ಪತ್ತೆಯೊಂದಿಗೆ ತಳಿ ಪರೀಕ್ಷೆ ಮಾಡಲು ಹೊಸ ಪ್ರಯೋಗಾಲಯಗಳನ್ನು ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ ಅವರು ಈ ಹೇಳಿಕೆ ನೀಡಿ ಆರು ತಿಂಗಳಾದರೂ ಒಂದೇ ಒಂದು ಪ್ರಯೋಗಾಲಯ ತನ್ನ ಕಾರ್ಯ ಆರಂಭಿಸಿಲ್ಲ. ಕೋವಿಡ್ ಅಲೆಯ ಅಬ್ಬರ ಕಡಿಮೆ ಆಗುತ್ತಿದ್ದಂತೆ ಸರ್ಕಾರ(Government of Karnataka) ಕೂಡ ಇಂತಹ ಪ್ರಯೋಗಾಲಯ ಸ್ಥಾಪನೆಗಿದ್ದ ಉತ್ಸಾಹ ಕಳೆದುಕೊಂಡಿತು. ಈ ಪ್ರಯೋಗಾಲಯಗಳಿಗೆ(Laboratory) ದುಬಾರಿ ಖರ್ಚು, ಮಾನವ ಸಂಪನ್ಮೂಲದ ನಿರ್ವಹಣೆ ಮುಂತಾದ ಕಾರಣಗಳಿಂದಾಗಿ ಸರ್ಕಾರ ಅಷ್ಟೊಂದು ಆಸಕ್ತಿ ತೋರಲಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಸಾಂಕ್ರಾಮಿಕ ರೋಗಗಳ ಪರಿಸ್ಥಿತಿ ನಿಭಾಯಿಸುವಲ್ಲಿ ತಳಿ ಪತ್ತೆ ಪರೀಕ್ಷೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದು ರೋಗ ಲಕ್ಷಣಗಳ ಜೊತೆ ಜೊತೆಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳಿಗೆ ದಿಕ್ಸೂಚಿ ಆಗುತ್ತದೆ. ಸದ್ಯ ರಾಜ್ಯದಲ್ಲಿ ಐದು ದಿನದೊಳಗೆ ತಳಿ ಪರೀಕ್ಷೆ ನಡೆಸಿ ವರದಿ ನೀಡಲು ಸಾಧ್ಯವಾಗುತ್ತಿದೆ ಎಂದು ಡಾ. ವಿಶಾಲ್ ರಾವ್ ಹೇಳುತ್ತಾರೆ.
4 ಜಿನೋಮಿಕ್ ಲ್ಯಾಬ್ 15 ದಿನದಲ್ಲಿ ಆರಂಭ: ಆರೋಗ್ಯ ಇಲಾಖೆ
ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು, ಕಲಬುರಗಿ, ಮೈಸೂರು, ಬೆಳಗಾವಿ ಹೀಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಡಿಯಲ್ಲಿನ ನಾಲ್ಕು ಪ್ರಯೋಗಾಲಯಗಳು ಕೆಲಸ ಪ್ರಾರಂಭಿಸಲು ಸಜ್ಜಾಗಿವೆ. ಉಪಕರಣಗಳ ಖರೀದಿ ಪ್ರಕ್ರಿಯೆ ನಡೆದಿದೆ. ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ಸಂಬಂಧಿಸಿದಂತೆ ವೈದ್ಯರು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಇನ್ನು 15 ದಿನದಲ್ಲಿ ಈ ಪ್ರಯೋಗಾಲಯಗಳು ಕಾರ್ಯಾರಂಭ ಮಾಡಲಿವೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.