ಸಂಪತ್‌ ತರೀಕೆರೆ

 ಬೆಂಗಳೂರು [ಮಾ.02]:  ರಾಷ್ಟ್ರದ ಅತಿ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಹೆಚ್ಚು ತಲಾದಾಯ ಹೊಂದಿರುವ ರಾಜ್ಯಗಳಲ್ಲಿ 7ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿನ ಪ್ರತಿಯೊಬ್ಬರ ಸರಾಸರಿ ವಾರ್ಷಿಕ ತಲಾದಾಯ 2.10 ಲಕ್ಷ ರು.ಗಳಷ್ಟಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಎಲ್ಲಾ ರೀತಿಯಲ್ಲೂ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ನಮ್ಮ ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ.57) ಬಡವರೇ ಇದ್ದಾರೆ! ಇದರಲ್ಲಿ 10.93 ಲಕ್ಷ ಕುಟುಂಬಗಳು ಕಡುಬಡತನದಿಂದ ನಲುಗುತ್ತಿವೆಯಂತೆ!

ಹೀಗೆಂದು ರಾಜ್ಯ ಆಹಾರ ಇಲಾಖೆಯು ವಿತರಿಸಿರುವ ಬಿಪಿಎಲ್‌ ಪಡಿತರ ಚೀಟಿಗಳ ಅಂಕಿ-ಅಂಶಗಳು ಹೇಳುತ್ತಿವೆ. ಆದರೆ, ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ಮೂರನೇ ಶ್ರೀಮಂತ ರಾಜ್ಯವಾಗಿರುವ ಕರ್ನಾಟಕದಲ್ಲಿ ನಿಜಕ್ಕೂ ಇಷ್ಟುಬಡವರಿದ್ದಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದ ಜನತೆಯ ಸರಾಸರಿ ತಲಾದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2015-16ನೇ ಸಾಲಿನಲ್ಲಿ 1.46 ಲಕ್ಷ ರು.ಗಳಷ್ಟಿದ್ದ ಸರಾಸರಿ ತಲಾದಾಯವು 2019ನೇ ಸಾಲಿನ 2.10 ಲಕ್ಷ ರು. ತಲುಪಿದೆ. ಹೀಗಿದ್ದರೂ ಒಟ್ಟಾರೆ ಕುಟುಂಬದ ವರಮಾನ 1.20 ಲಕ್ಷ ರು. ಸಹ ಇಲ್ಲ ಎಂದು ಘೋಷಿಸಿಕೊಂಡವರು ಬರೋಬ್ಬರಿ 3.84 ಕೋಟಿ (ಶೇ.57) ಜನರು. ಇದರಲ್ಲಿ 10.93 ಲಕ್ಷ ಕುಟುಂಬಗಳ 46.57 ಲಕ್ಷ (ಅಂತ್ಯೋದಯ ಫಲಾನುಭವಿಗಳು) ಮಂದಿ ಕಡು ಬಡವರಾಗಿದ್ದಾರೆ. ಜತೆಗೆ 2016-17ರಿಂದ ಈಚೆಗೆ ಹೊಸದಾಗಿ ಶೇ.21ರಷ್ಟುಮಂದಿ ಹೊಸದಾಗಿ ಬಡವರೆಂದು ಘೋಷಿಸಿಕೊಂಡು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದಾರೆ.

ಆದರೆ, ವಾಸ್ತವದಲ್ಲಿ ಹೀಗಿಲ್ಲ. ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡ್‌ ವಿತರಣೆಯಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಕೋಟ್ಯಂತರ ಮಂದಿ ಅನರ್ಹರು ಈ ಯೋಜನೆಗಳ ದುರ್ಲಾಭ ಪಡೆಯುತ್ತಿದ್ದಾರೆ ಎಂಬುದನ್ನು ಆಹಾರ ಮತ್ತು ನಾಗರಿಕ ಇಲಾಖೆ ಕಂಡುಕೊಂಡಿದೆ. ಇದರಿಂದ ವಾರ್ಷಿಕ ಸುಮಾರು 300 ಕೋಟಿ ರು. ಮೌಲ್ಯದ ಪಡಿತರ ಧಾನ್ಯ ಅನರ್ಹರ ಪಾಲಾಗುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಖುದ್ದು ಆಹಾರ ಇಲಾಖೆ ಹಿರಿಯ ಅಧಿಕಾರಿಗಳೂ ಒಪ್ಪಿದ್ದು, ನಕಲಿ ಕಾರ್ಡ್‌ದಾರರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಲು ಮುಂದಾಗುತ್ತಿರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿರುವ ಆಹಾರ ಇಲಾಖೆ ಸಚಿವ ಕೆ. ಗೋಪಾಲಯ್ಯ ಅವರು ಅನರ್ಹರು ಬಿಪಿಎಲ್‌ ಕಾರ್ಡ್‌ ಪಡೆದಿರುವುದನ್ನು ಒಪ್ಪಿದ್ದಾರೆ. ಅಲ್ಲದೆ ಇಲಾಖೆಗೆ ನೂರಾರು ಕೋಟಿ ರು. ನಷ್ಟಉಂಟಾಗುತ್ತಿದ್ದು, ಏಪ್ರಿಲ್‌ ಒಳಗಾಗಿ ಅನರ್ಹರು ಪಡೆದಿರುವ ಕಾರ್ಡ್‌ಗಳನ್ನು ಇಲಾಖೆಗೆ ವಾಪಸು ನೀಡಬೇಕು. ಇಲ್ಲದಿದ್ದರೆ ಏಪ್ರಿಲ್‌ ಬಳಿಕ ಇಲಾಖೆ ಅಧಿಕಾರಿಗಳೇ ಪತ್ತೆಹಚ್ಚಿ ಈವರೆಗೂ ಅನರ್ಹರು ಪಡೆದಿರುವ ಪ್ರತಿ ಕೆ.ಜಿ. ಅಕ್ಕಿಗೆ 28 ರು.ಗಳಂತೆ ದಂಡ ವಿಧಿಸಲಾಗುವುದು. ಜತೆಗೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶೇ.10ರಿಂದ 15ರಷ್ಟುನಕಲಿ ಕಾರ್ಡ್‌:

ಆಹಾರ ಇಲಾಖೆಯ ಅಂದಾಜು ಪ್ರಕಾರವೇ, ಬಿಪಿಎಲ್‌ ಕಾರ್ಡು ಪಡೆದಿರುವವರಲ್ಲಿ ಶೇ.10ರಿಂದ 15ರಷ್ಟುಮಂದಿ ಸುಳ್ಳು ವಾರ್ಷಿಕ ವರಮಾನ ದೃಢೀಕರಣ ನೀಡಿರಬಹುದು. ಇವರನ್ನು ಪತ್ತೆ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಅಂದಾಜು 300 ಕೋಟಿಗೂ ಅಧಿಕ ಮೊತ್ತದ ಆಹಾರ ಧಾನ್ಯದ ಸೋರಿಕೆ ತಡೆಗಟ್ಟಬಹುದು. ಅದಕ್ಕಾಗಿ ಪಡಿತರ ಕಾರ್ಡುಗಳನ್ನು ಸ್ವಯಂಪ್ರೇರಿತವಾಗಿ ಹಿಂದಿರುಗಿಸಲು ಅವಕಾಶ ನೀಡಲಾಗಿದೆ. ಜತೆಗೆ ಪಡಿತರ ಚೀಟಿಗೆ ಆಧಾರ್‌ ಜೋಡಣೆ ಮಾಡಲು ಇ-ಕೆವೈಸಿ ದೃಢೀಕರಣವನ್ನು ಪುನಃ ಆರಂಭಿಸಿದ್ದೇವೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಜಿಲ್ಲಾವಾರು ಬಿಪಿಎಲ್‌ ಫಲಾನುಭವಿಗಳು:

ಬಿಪಿಎಲ್‌ ಕಾರ್ಡುಗಳನ್ನು ಅತಿ ಹೆಚ್ಚು ಪಡೆದ ಜಿಲ್ಲೆಗಳ ಪೈಕಿ ಬೆಳಗಾವಿ 10,62,356 ಮೊದಲ ಸ್ಥಾನದಲ್ಲಿದೆ. ಮೈಸೂರು 6,56,095, ತುಮಕೂರು 6,13,067, ಬಳ್ಳಾರಿ 5,28,359, ಬೆಂಗಳೂರು 4,95,737, ಕಲಬುರಗಿ 4,81,354, ಮಂಡ್ಯ 450808, ರಾಯಚೂರು 4,04,333 ನಂತರದ ಸ್ಥಾನದಲ್ಲಿವೆ. ಹಾವೇರಿಯಲ್ಲಿ 99,796 ಮತ್ತು ಬೆಂಗಳೂರು ಪೂರ್ವದಲ್ಲಿ 68,482 ಬಿಪಿಎಲ್‌ ಕಾರ್ಡುಗಳನ್ನು ಹಂಚಿಕೆ ಮಾಡಲಾಗಿದೆ. ಹೀಗೆ 30 ಜಿಲ್ಲೆಗಳಿಗೆ 1,16,11,147 ಬಿಪಿಎಲ್‌ ಕಾರ್ಡುಗಳನ್ನು ಹಂಚಿಕೆ ಮಾಡಲಾಗಿದೆ.

ತಲಾದಾಯ ಹೆಚ್ಚಿದರೂ ‘ಬಡವರು’ ಇಳಿದಿಲ್ಲ:

2017ಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ಬಿಪಿಎಲ್‌ ಕಾರ್ಡ್‌ ಪಡೆದವರ ಸಂಖ್ಯೆ ಶೇ.21ಕ್ಕೆ ಏರಿಕೆ ಆಗಿದೆ. ವರ್ಷದಿಂದ ವರ್ಷಕ್ಕೆ ಬಿಪಿಎಲ್‌ ಕಾರ್ಡ್‌ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ನಾಲ್ಕು ವರ್ಷಗಳಿಂದ ಬಿಪಿಎಲ್‌ ಕಾರ್ಡ್‌ ಪಡೆದ ಯಾವುದೇ ಕುಟುಂಬ ಆರ್ಥಿಕವಾಗಿ ಪ್ರಗತಿಯನ್ನೇ ಸಾಧಿಸಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಮತ್ತೊಂದೆಡೆ, ಆಹಾರ ಇಲಾಖೆ ಬಿಪಿಎಲ್‌ ಫಲಾನುಭವಿಗಳಿಗೆ ವಿಧಿಸಿರುವ ಮಾನದಂಡಗಳ ಬಗ್ಗೆಯೂ ಪ್ರಶ್ನೆಗಳು ಏಳುತ್ತಿವೆ. ವಾರ್ಷಿಕ ಒಂದು ಕುಟುಂಬದ ಆದಾಯ 1.20 ಲಕ್ಷ ರು.ಗಿಂತ ಹೆಚ್ಚಿದ್ದರೆ ಅಂತಹವರು ಬಿಪಿಎಲ್‌ ಕಾರ್ಡ್‌ ಪಡೆಯಲು ಅನರ್ಹರು ಎಂದು ಹೇಳಲಾಗುತ್ತಿದೆ. ಆದಾಯ ಹೆಚ್ಚಾದಂತೆ ದಿನಬಳಕೆ ವಸ್ತುಗಳ ದರವೂ ಹೆಚ್ಚುತ್ತಿದೆ. 1.20 ಲಕ್ಷ ರು.ಗಿಂತ ಹೆಚ್ಚು ವರಮಾನ ಗಳಿಸಿದರೆ ಅವರು ಬಡತನ ರೇಖೆಗಿಂತ ಮೇಲಿರುವುದಿಲ್ಲ. ಈ ಅವೈಜ್ಞಾನಿಕ ಮಾನದಂಡ ಬದಲಾಗುವವರೆಗೂ ಜನಸಾಮಾನ್ಯರ ಮನಸ್ಥಿತಿ (ಆದಾಯ ಹೆಚ್ಚಿದ್ದರೂ ಕುಟುಂಬದ ನಿರ್ವಹಣೆಗೆ ಅದು ಸಾಲದೆ ಹೋಗುವುದರಿಂದ ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆಯುವುದು) ಬದಲಾಗುವುದಿಲ್ಲ ಎಂದು ಸಾಮಾಜಿಕ ತಜ್ಞರು ಹೇಳುತ್ತಾರೆ.

ಸುಳ್ಳು ದಾಖಲೆ ಕೊಟ್ಟು ಎಷ್ಟುಮಂದಿ ಬಿಪಿಎಲ್‌ ಪಡಿತರ ಕಾರ್ಡ್‌ ಪಡೆದಿದ್ದಾರೆ ಎಂದು ಅಂದಾಜು ಮಾಡಿಲ್ಲ. ಅನರ್ಹರು ಬಿಪಿಎಲ್‌ ಕಾರ್ಡುಗಳನ್ನು ವಾಪಸು ಮಾಡಲು ಏಪ್ರಿಲ್‌ ಅಂತ್ಯದವರೆಗೆ ಅವಕಾಶ ನೀಡಲಾಗಿದೆ. ನಂತರ ಇಲಾಖೆ ಅಧಿಕಾರಿಗಳು ಪತ್ತೆ ಕಾರ್ಯ ಆರಂಭಿಸಲಿದ್ದು, ಎಲ್ಲವೂ ಪೂರ್ಣಗೊಂಡ ಬಳಿಕವಷ್ಟೇ ನಷ್ಟದ ಪ್ರಮಾಣದ ಅಂಕಿ-ಅಂಶ ದೊರೆಯಲಿದೆ. ಈವರೆಗೆ 64 ಸಾವಿರ ಜನರು ಬಿಪಿಎಲ್‌ ಕಾರ್ಡುಗಳನ್ನು ಸ್ವಯಂಪ್ರೇರಿತರಾಗಿ ಹಿಂದಿರುಗಿಸಿದ್ದಾರೆ. ಅವರಿಂದ 96 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.

- ಡಾ.ಶಮ್ಲಾ ಇಕ್ಬಾಲ್‌, ಆಯುಕ್ತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ರಾಜ್ಯದಲ್ಲಿ 3.84 ಕೋಟಿ ‘ಬಡವರು’

ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 6.4 ಕೋಟಿ ಜನಸಂಖ್ಯೆ ಇದೆ. ಪ್ರಸ್ತುತ 1.16 ಕೋಟಿ ಕುಟುಂಬಗಳ 3.84 ಕೋಟಿ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ ವಿತರಿಸಲಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ಇರುವ ಬಿಪಿಎಲ್‌ ಕುಟುಂಬಗಳು 10.1 ಲಕ್ಷ, ಇಬ್ಬರು ಸದಸ್ಯರಿರುವ ಕುಟುಂಬ 25.9 ಲಕ್ಷ, ಮೂವರು ಸದಸ್ಯರಿರುವ ಕುಟುಂಬ 27.04 ಲಕ್ಷ, ನಾಲ್ಕು ಮಂದಿ ಇರುವ ಕುಟುಂಬ 33.65 ಲಕ್ಷ, ಐದು ಸದಸ್ಯರಿರುವ ಕುಟುಂಬ 12.60 ಲಕ್ಷ ಹಾಗೂ 5ಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬ 6.81 ಲಕ್ಷ ಇವೆ. ಇದಲ್ಲದೆ, ಕಡುಬಡವರಿಗೆ 10,93,583 ಅಂತ್ಯೋದಯ ಕಾರ್ಡ್‌ ವಿತರಿಸಲಾಗಿದ್ದು, 46,57,237 ಮಂದಿ ಇದರ ಫಲ ಅನುಭವಿಸುತ್ತಿದ್ದಾರೆ. ಬಿಪಿಎಲ್‌ ಕಾರ್ಡ್‌ದಾರರ ಕುಟುಂಬದ ಪ್ರತಿ ಸದಸ್ಯನಿಗೆ ತಲಾ 7 ಕೆ.ಜಿ ಅಕ್ಕಿ ಮತ್ತು ಅಂತ್ಯೋದಯ ಕಾರ್ಡುದಾರರ ಕುಟುಂಬವೊಂದಕ್ಕೆ ಸದಸ್ಯರ ಸಂಖ್ಯೆಯ ಭೇದವಿಲ್ಲದೆ 35 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಸರ್ಕಾರ ವಿತರಿಸುತ್ತಿದೆ. ಈ ಮೂಲಕ ಸರ್ಕಾರ ಪ್ರತಿ ತಿಂಗಳು 30.70 ಕೋಟಿ ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸುತ್ತಿದೆ.