Asianet Suvarna News Asianet Suvarna News

ಇಂದು ರಾತ್ರಿಯಿಂದ 57 ತಾಸು ವೀಕೆಂಡ್‌ ಕರ್ಫ್ಯೂ: ಸುಮ್‌ ಸುಮ್ನೆ ತಿರುಗಾಡೋ ಹಾಗಿಲ್ಲ..!

ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರವರೆಗೆ ರಾಜ್ಯದಲ್ಲಿ ಕಠಿಣ ನಿಯಮ|ಅಗತ್ಯ, ತುರ್ತು ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲ ಬಂದ್‌| ಹಾಲು, ತರಕಾರಿ, ಹಣ್ಣು, ದಿನಸಿ, ಮಾಂಸ ಮಾರಾಟಕ್ಕೆ 4 ತಾಸು ಟೈಮ್‌| ಬಸ್‌, ರೈಲು, ವಿಮಾನ, ಟ್ಯಾಕ್ಸಿ ಸಂಚಾರಕ್ಕೆ ಸರ್ಕಾರದ ಅನುಮತಿ| ಪೊಲೀಸರು ತಡೆದರೆ ಟಿಕೆಟ್‌ ತೋರಿಸಬೇಕು| 

57 Hours Weekend Curfew From Tonight in Karnataka grg
Author
Bengaluru, First Published Apr 23, 2021, 8:40 AM IST

ಬೆಂಗಳೂರು(ಏ.23): ರಾಜ್ಯವನ್ನು ಭೀಕರವಾಗಿ ಕಾಡುತ್ತಿರುವ ಕೋವಿಡ್‌ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಆದೇಶಿಸಿರುವ ಮೊದಲ ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 9 ರಿಂದ ಆರಂಭಗೊಂಡು ಸೋಮವಾರ ಬೆಳಗ್ಗೆ 6 ಗಂಟೆವರೆಗೆ 57 ತಾಸು ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅತಿ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಅನಗತ್ಯ ಸಾರ್ವಜನಿಕ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ವಾರಾಂತ್ಯದ ಕರ್ಫ್ಯೂ ವೇಳೆ ಆಹಾರ, ದಿನಸಿ, ಹಣ್ಣು, ತರಕಾರಿ, ಹಾಲು, ಮೀನು ಮತ್ತು ಮಾಂಸದ ಅಂಗಡಿಗಳನ್ನು ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಈ ನಾಲ್ಕು ಗಂಟೆಗಳ ಒಳಗೆ ಸಾರ್ವಜನಿಕರು ತಮ್ಮ ದಿನದ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಬೆಳಗ್ಗೆ 10 ಗಂಟೆ ಬಳಿಕ ಈ ಎಲ್ಲಾ ಅಂಗಡಿಗಳ ಬಾಗಿಲು ಬಂದ್‌ ಮಾಡಬೇಕು. ಅನಂತರ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳಿಲ್ಲದಂತೆ ಕೋವಿಡ್‌ ನಿಯಮ ಪಾಲಿಸಿ ಅಗತ್ಯ ವಸ್ತುಗಳ ಹೋಂ ಡೆಲಿವರಿಗೆ ಅವಕಾಶವಿದೆ. ರೆಸ್ಟೋರೆಂಟ್‌ ಮತ್ತು ಇತರೆ ತಿನಿಸು ಪದಾರ್ಥಗಳ ಅಂಗಡಿ, ಮಳಿಗೆಗಳಲ್ಲಿ ಪಾರ್ಸೆಲ್‌ ಪಡೆಯಲು ಮತ್ತು ಹೋಂ ಡೆಲಿವರಿಗೆ ಮಾತ್ರ ಅವಕಾಶವಿರುತ್ತದೆ.

ರೋಗಿಗಳು ಹಾಗೂ ಅವರ ಸಹಾಯಕರು, ವ್ಯಾಕ್ಸಿನೇಷನ್‌ ಸೇರಿದಂತೆ ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವವರು ಕನಿಷ್ಠ ಪುರಾವೆಗಳೊಂದಿಗೆ ಸಂಚರಿಸಲು ಯಾವುದೇ ನಿರ್ಬಂಧವಿರುವುದಿಲ್ಲ. ಇನ್ನು, ಮದುವೆ ಕಾರ್ಯಗಳಿಗೆ ಗರಿಷ್ಠ 50ಕ್ಕಿಂತ ಹೆಚ್ಚು ಜನ ಭಾಗವಹಿಸುವಂತಿಲ್ಲ. ಅಂತ್ಯ ಸಂಸ್ಕಾರದಲ್ಲಿ ಗರಿಷ್ಠ 20ಕ್ಕಿಂತ ಹೆಚ್ಚು ಜನ ಭಾಗಿಯಾಗುವಂತಿಲ್ಲ. ಅನಗತ್ಯವಾಗಿ ಸಾರ್ವಜನಿಕರು ಮನೆಯಿಂದ ಹೊರಗೆ ಸಂಚರಿಸುವಂತಿಲ್ಲ.

ಬೆಂಗ್ಳೂರಲ್ಲಿ ಕಟ್ಟುನಿಟ್ಟಿನ ನೈಟ್‌ ಕರ್ಫ್ಯೂ

ತುರ್ತು ಸೇವೆಯ ಕಚೇರಿಗೆ ಅವಕಾಶ:

ತುರ್ತು ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸುವ ಹಾಗೂ ಕೋವಿಡ್‌ 19 ಕಂಟೈನ್ಮೆಂಟ್‌ ಮತ್ತು ನಿರ್ವಹಣಾ ಕಾರ್ಯಗಳನ್ನು ನಡೆಸುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು ಮತ್ತು ಅಗತ್ಯ ಸೇವೆಗಳಡಿ ಮತ್ತು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು/ಕಂಪನಿಗಳು/ ಸಂಸ್ಥೆಗಳಿಗೆ ಪೂರ್ಣಾವಧಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ.
ಈ ಸಂಬಂಧಿತ ಸರ್ಕಾರಿ ಕಚೇರಿಗಳು ಹಾಗೂ ಇತರೆ ಎಲ್ಲಾ ಕೈಗಾರಿಕೆ, ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಟೆಲಿಕಾಂ ಮತ್ತು ಇಂಟರ್ನೆಟ್‌ ಸೇವಾ ಕಂಪನಿಗಳ ನೌಕರರು ಮತ್ತು ವಾಹನಗಳ ಸಂಚಾರಕ್ಕೆ ಯಾವುದೇ ನಿಬಂರ್‍ಧ ಇರುವುದಿಲ್ಲ. ಆದರೆ, ಸಂಚಾರದ ಅವಧಿಯಲ್ಲಿ ಇವರೆಲ್ಲರೂ ತಾವು ಕಾರ್ಯ ನಿರ್ವಹಿಸುತ್ತಿರುವ ಇಲಾಖೆ, ಸಂಸ್ಥೆ, ಕಂಪನಿಯ ಅರ್ಹ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ.

ದೂರ ಪ್ರಯಾಣದ ಬಸ್ಸು, ರೈಲು ಮತ್ತು ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇತರೆ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ವಾಹನಗಳು ಮತ್ತು ಕ್ಯಾಬ್ಸ್‌ ಸೇರಿದಂತೆ ಎಲ್ಲಾ ಟ್ಯಾಕ್ಸಿಗಳು ವಿಮಾನ ನಿಲ್ದಾಣ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಿಂದ ಮತ್ತು ಇದೇ ಸ್ಥಳಗಳಿಗೆ ಪ್ರಯಾಣಿಕರನ್ನು ಸಾಗಿಸಲು ಅವಕಾಶವಿರುತ್ತದೆ. ಈ ವೇಳೆ ಮಾನ್ಯತೆಯುಳ್ಳ ಪ್ರಯಾಣದ ದಾಖಲೆ/ಟಿಕೆಟ್‌ ಹೊಂದಿರಬೇಕು ಮತ್ತು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಚಿತ್ರಮಂದಿರ, ಮಾಲ್‌, ಬಾರ್‌ ತೆರೆಯುವಂತಿಲ್ಲ

ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಎಲ್ಲಾ ಚಿತ್ರಮಂದಿರಗಳು, ಶಾಪಿಂಗ್‌ ಮಾಲ್‌ಗಳು, ಬಾರ್‌, ಪಬ್‌, ಜಿಮ್‌, ಕ್ರೀಡಾ ಕಾಂಪ್ಲೆಕ್ಸ್‌ಗಳು, ಆಡಿಟೋರಿಯಂ, ಸ್ಟೇಡಿಯಂಗಳು, ಈಜು ಕೊಳ, ಮನೋರಂಜನಾ ಪಾರ್ಕ್ಗಳು, ಸಭಾಂಗಣಗಳು ಮತ್ತು ಇದೇ ಮಾದರಿಯ ಇತರೆ ಎಲ್ಲಾ ಸ್ಥಳಗಳನ್ನು ತೆರೆಯುವಂತಿಲ್ಲ. ಎಲ್ಲಾ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಸೇರಿ ಯಾವುದೇ ಸಭೆ, ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ. ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಮಂದಿರಗಳಲ್ಲಿ ಸಾರ್ವಜನಿಕ ಪ್ರವೇಶ ಇರುವುದಿಲ್ಲ. ಆದರೆ, ದೇವಾಲಯ, ಧಾರ್ಮಿಕ ಸ್ಥಳಗಳಲ್ಲಿ ಅರ್ಚಕರು ಎಂದಿನಂತೆ ಪೂಜಾ ಕಾರ್ಯಗಳನ್ನು ನಡೆಸಬಹುದು ಎಂದು ಸರ್ಕಾರ ತಿಳಿಸಿದೆ.
 

Follow Us:
Download App:
  • android
  • ios