56 ವರ್ಷದ ಅಭಿಮನ್ಯುಗೆ 2ನೇ ವರ್ಷ ಚಿನ್ನದ ಅಂಬಾರಿ ಹೊರುವ ಅವಕಾಶ
- ಕಾಡಾನೆಗಳನ್ನು ಸೆರೆ ಹಿಡಿಯುವ, ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಪರಿಣಿತ ಹೊಂದಿರುವ ಅಭಿಮನ್ಯು
- ತನ್ನ ಹೆಗಲ ಮೈಮೇಲೆ ಅಂಬಾರಿ ಹೊರಲು ಅಭಿಮನ್ಯು ಆನೆ ಸಜ್ಜು
ವರದಿ : ಬಿ. ಶೇಖರ್ ಗೋಪಿನಾಥಂ
ಮೈಸೂರು (ಅ.14): ಕಾಡಾನೆಗಳನ್ನು (Wild Elephants) ಸೆರೆ ಹಿಡಿಯುವ, ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಪರಿಣಿತ ಹೊಂದಿರುವ ಅಭಿಮನ್ಯು (Abhimanyu) ಆನೆಯು (Elephant) ಕಳೆದ ವರ್ಷ ದಸರಾ (Dasara) ಜಂಬೂಸವಾರಿಯಲ್ಲಿ (Jambusavari) 750 ಕೆ.ಜಿ. ಚಿನ್ನದ ಅಂಬಾರಿಯನ್ನು (Golden Hwda) ಯಶಸ್ವಿಯಾಗಿ ಹೊರುವ ಮೂಲಕ ಸೈ ಎನಿಸಿಕೊಂಡಿತ್ತು. ಈ ಬಾರಿಯ ತನ್ನ ಹೆಗಲ ಮೈಮೇಲೆ ಅಂಬಾರಿ ಹೊರಲು ಅಭಿಮನ್ಯು ಆನೆಯು ಸಜ್ಜಾಗಿದೆ.
ಕಳೆದ 22 ವರ್ಷಗಳಿಂದ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿರುವ ಅಭಿಮನ್ಯು ಆನೆಗೆ ಕಳೆದ ವರ್ಷ ಮೊದಲ ಬಾರಿ ಚಿನ್ನದ ಅಂಬಾರಿ ಹೊರುವ ಅವಕಾಶ ಸಿಕ್ಕಿತ್ತು. ಜಂಬೂಸವಾರಿಯಲ್ಲಿ ಕರ್ನಾಟಕ (Karnataka) ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿದ್ದ ಅಭಿಮನ್ಯು ಆನೆಯು ನಂತರ ನೌಫತ್ ಆನೆಯಾಗಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಅಲ್ಲದೆ, ಶ್ರೀರಂಗಪಟ್ಟಣ (Shrirangapattana) ದಸರೆಯಲ್ಲಿ ಮರದ ಅಂಬಾರಿಯನ್ನು (wooden Ambari) 7- 8 ವರ್ಷ ಹೊತ್ತಿರುವ ಅನುಭವ ಸಹ ಹೊಂದಿದೆ.
ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜಾ ಸಂಭ್ರಮ
ಕೋವಿಡ್ (Covid) ಕಾರಣ ಈ ಬಾರಿ 8 ಆನೆಗಳನ್ನು ಮಾತ್ರ ಕಾಡಿನಿಂದ (Forest) ನಾಡಿಗೆ ಕರೆ ತರಲಾಗಿದೆ. ಮೈಸೂರು ಅರಮನೆ (Mysuru Palace) ಆವರಣದಲ್ಲೇ ಎಲ್ಲಾ ರೀತಿಯ ತಾಲೀಮು ನಡೆಸಿ ಅಂತಿಮ ಹಂತದ ಜಂಬೂಸವಾರಿಗೆ ಸಿದ್ಧವಾಗಿವೆ. ಮಸ್ತಿಯಲ್ಲಿರುವ (ಮದ) ವಿಕ್ರಮ ಆನೆ ಮತ್ತು ಲಕ್ಷ್ಮಿ ಆನೆ ಜಂಬೂಸವಾರಿಯಿಂದ ದೂರ ಉಳಿಯಲಿವೆ. ಉಳಿದ 6 ಆನೆಗಳ ಪೈಕಿ 5 ಅಥವಾ 6 ಆನೆಗಳೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಈ ಸಂಬಂಧ ಅರಣ್ಯ ಇಲಾಖೆಯು( Forest Department) ಆಯುಧಪೂಜೆ ದಿನ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಅಂಬಾರಿ ಆನೆಗಳು
ದಸರಾ ವಿಜಯದಶಮಿ (Vijayadashami) ಮೆರವಣಿಗೆಯಲ್ಲಿ ಮೊದಲು ದ್ರೋಣ ಆನೆಯು (Drona) ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿತ್ತು. ದ್ರೋಣನ ನಂತರ ಬಲರಾಮ ಆನೆಯು ಸತತ 14 ವರ್ಷ ಅಂಬಾರಿ ಹೊತ್ತು ಸಾಧನೆ ಮಾಡಿತ್ತು. 2012ರಲ್ಲಿ ಬಲರಾಮ ಆನೆಗೆ ನಿಶ್ಯಕ್ತಿ ಕಾಡಿದ್ದರಿಂದ ಅರ್ಜುನ ಆನೆಗೆ ಅಂಬಾರಿ ಹೊರಿಸಲಾಯಿತು. ಒಮ್ಮೆ ವಾಪಸ್ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸತತ 8 ಬಾರಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಅರ್ಜುನ ಆನೆಗೆ 60 ವರ್ಷ ತುಂಬಿದ ಕಾರಣ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಆನೆ ಹೆಗಲಿದೆ ಬಂದಿದೆ.
ಅಭಿಮನ್ಯು ಆನೆ ಕಳೆದ ವರ್ಷ ಅಂಬಾರಿ ಹೊತ್ತಿದ್ದು, ಈಗ 2ನೇ ಬಾರಿಗೆ ಅಂಬಾರಿ ಹೊರಲು ಸಿದ್ಧವಾಗಿದೆ. ಉಳಿದ ಅಂಬಾರಿ ಆನೆಗಳು ಅರಮನೆಯಿಂದ ಬನ್ನಿಮಂಟಪವರೆಗೆ 5 ಕಿ.ಮೀ. ಅಂಬಾರಿ ಹೊತ್ತಿವೆ. ಆದರೆ, ಅಭಿಮನ್ಯು ಆನೆಯು ಕೊರೋನಾ (corona) ಕಾರಣದಿಂದಾಗಿ ಅರಮನೆ ಒಳಾವರಣದಲ್ಲಿ ಅಂಬಾರಿ ಹೊರುತ್ತಿರುವುದು ವಿಶೇಷ. ಕೊರೋನಾದಿಂದಾಗಿ ಅಭಿಮನ್ಯು ಆನೆಗೂ ಪರಿಪೂರ್ಣವಾಗಿ ಬನ್ನಿಮಂಟಪವರೆಗೂ ಅಂಬಾರಿ ಹೊರುವ ಅವಕಾಶ ಒದಗಿ ಬಂದಿಲ್ಲ.
ಕ್ಯಾಪ್ಟನ್ ಅಭಿಮನ್ಯು : 56 ವರ್ಷದ ಅಭಿಮನ್ಯು ಆನೆಯ ಶರೀರದ ಎತ್ತರ- 2.72 ಮೀಟರ್, ಶರೀರದ ಉದ್ದ- 3.51 ಮೀಟರ್ ಇದ್ದು, ಅಂದಾಜು ತೂಕ- 4720 ಕೆ.ಜಿ. ಇದ್ದು, ಇದರ ಮಾವುತ- ವಸಂತ, ಕಾವಾಡಿ- ರಾಜು. ಮತ್ತಿಗೋಡು ಆನೆ ಶಿಬಿರದಲ್ಲಿ ಅಭಿಮನ್ಯು ಆಶ್ರಯ ಪಡೆದಿದೆ.
ಅಭಿಮನ್ಯು ಆನೆಯನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಕಾಡಾನೆಗಳನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯ ಹೊಂದಿದೆ. ಹೀಗಾಗಿ, ಇದನ್ನು ಕೂಂಬಿಂಗ್ ಸ್ಪೆಷಲಿಸ್ಟ್, ಕ್ಯಾಪ್ಟನ್ ಎಂದು ಸಹ ಕರೆಯಲಾಗುತ್ತದೆ. ಈ ಆನೆಯು ಸುಮಾರು 22 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದು, ಜಂಬೂಸವಾರಿಯಲ್ಲಿ 2015 ರವರೆಗೆ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿತ್ತು. ಆದರೆ, ಕಳೆದ 6 ವರ್ಷದಿಂದ ಆನೆ ಗಾಡಿ ಎಳೆಯುವ ಜವಾಬ್ದಾರಿ ವಹಿಸರಲಿಲ್ಲ. ನೌಫನ್ ಆನೆಯಾಗಿ ಜಂಬೂಸವಾರಿಯಲ್ಲಿ ಸಾಗಿತ್ತು.
ಯಾವ ಆನೆಗೆ ಯಾವ ಜವಾಬ್ದಾರಿ?
ಅಂಬಾರಿ ಆನೆ- ಅಭಿಮನ್ಯು
ಅಂಬಾರಿ ಆನೆಗೆ ಕುಮ್ಕಿ ಆನೆಗಳು- ಕಾವೇರಿ ಮತ್ತು ಚೈತ್ರಾ
ನಿಶಾನೆ ಆನೆ- ಧನಂಜಯ
ನೌಫತ್ ಆನೆ- ಗೋಪಾಲಸ್ವಾಮಿ
ಸಾಲಾನೆ- ಅಶ್ವತ್ಥಾಮ
ಜಂಬೂಸವಾರಿಗೆ ಗಜಪಡೆ ಎಲ್ಲಾ ರೀತಿಯ ತಾಲೀಮು ನಡೆಸಿ ಸಜ್ಜಾಗಿದ್ದು, ಎಲ್ಲಾ ಆನೆಗಳ ಆರೋಗ್ಯ ಸ್ಥಿರವಾಗಿದೆ. ಅಭಿಮನ್ಯು ಆನೆಯು ಅಂಬಾರಿ ಹೊರಲಿದ್ದು, ಅದರ ಅಕ್ಕಪಕ್ಕದಲ್ಲಿ ಕುಮ್ಕಿಗಳಾಗಿ ಕಾವೇರಿ ಮತ್ತು ಚೈತ್ರಾ ಸಾಗಲಿವೆ. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಾಲಸ್ವಾಮಿ, ಸಾಲಾನೆಯಾಗಿ ಅಶ್ವತ್ಥಾಮ ಸಾಗಲಿದೆ. ಮದ ಬಂದಿರುವ ಕಾರಣ ವಿಕ್ರಮ ಆನೆ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿಲ್ಲ. ಅದೇ ರೀತಿ ಲಕ್ಷ್ಮಿ ಆನೆ ಸಹ ಮೆರವಣಿಗೆಯಲ್ಲಿ ಭಾಗವಹಿಸುತ್ತಿಲ್ಲ. ಈ ಬಾರಿ 8 ಆನೆ ತಂದಿದ್ದು, ಮೆರವಣಿಗೆಯಲ್ಲಿ 5 ಅಥವಾ 6 ಆನೆಗಳು ಮಾತ್ರ ಭಾಗವಹಿಸಲಿವೆ.
- ಕರಿಕಾಳನ್, ಡಿಸಿಎಫ್, ಮೈಸೂರು ವನ್ಯಜೀವಿ ವಿಭಾಗ