ಪ್ರಕರಣ ಏರುತ್ತಿರುವ ನಡುವೆಯೇ ಸಮಾಧಾನದ ಸುದ್ದಿ| ರಾಜ್ಯದಲ್ಲಿ 54 ಮಂದಿ ಸೋಂಕಿತರು ಗುಣಮುಖ| ಸೋಂಕು ಪಟ್ಟಿಯಿಂದ ದಾವಣಗೆರೆ, ಕೊಡಗು ಹೊರಕ್ಕೆ

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಏ.13): ಕರುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿರುವ ವೇಳೆಯೇ, ಈ ಮಾರಕ ರೋಗದಿಂದ ಗುಣಮುಖರಾದವರ ಸಂಖ್ಯೆಯೂ ಅರ್ಧ ಶತಕ ದಾಟಿದೆ. ಭಾನುವಾರ ಒಂದೇ ದಿನ 15 ಸೇರಿದಂತೆ 54 ಜನರು ಈವರೆಗೆ ಗುಣಮುಖರಾಗಿದ್ದಾರೆ. ಹೀಗಾಗಿ ಆತಂಕದ ನಡುವೆ ಸಮಾಧಾನದ ಸುದ್ದಿಯೂ ಬಂದಂತಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮೂರು ಪ್ರಕರಣ ಹಾಗೂ ಕೊಡಗಿನಲ್ಲಿ ಒಂದು ಪ್ರಕರಣ ವರದಿಯಾಗಿತ್ತು. ಈ ಜಿಲ್ಲೆಗಳ ಎಲ್ಲ ಸೋಂಕಿತರು ಗುಣಮುಖರಾಗುವುದರೊಂದಿಗೆ ಎರಡು ಜಿಲ್ಲೆಗಳು ಸೋಂಕಿತ ಜಿಲ್ಲೆಗಳ ಪಟ್ಟಿಯಿಂದ ಹೊರ ಹೋಗಿವೆ.

ಇನ್ನು ಈ ಮಾರಕರೋಗ ವಯೋವೃದ್ಧರನ್ನು ತೀವ್ರವಾಗಿ ಕಾಡುತ್ತದೆ ಎಂಬುದು ಸತ್ಯ. ರಾಜ್ಯದಲ್ಲಿ ಈ ಮಹಾಮಾರಿಯಿಂದ ಮೃತಪಟ್ಟವರೆಲ್ಲರೂ 60 ವರ್ಷ ಮೀರಿದವರು. ಇದುವರೆಗೂ ಆರು ಮಂದಿ ಮೃತಪಟ್ಟಿದ್ದು, ಅವರೆಲ್ಲರೂ 60 ವರ್ಷದಾಟಿದವರು. ಇದರ ನಡುವೆಯೇ 60 ವರ್ಷಕ್ಕೂ ಮೇಲ್ಪಟ್ಟಏಳು ಮಂದಿ ಕೊರೋನಾ ಸೋಂಕು ಗುಣಮುಖರಾಗಿ ಮನೆ ಸೇರಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ರಾಜ್ಯದಲ್ಲಿ ಮಾ.9 ರಂದು ಮೊದಲ ಸೋಂಕು ಪ್ರಕರಣ ಪತ್ತೆಯಾದ 46 ವರ್ಷದ ವ್ಯಕ್ತಿ ಮಾ.24 ರಂದು ಗುಣಮುಖರಾದ ಮೊದಲ ವ್ಯಕ್ತಿಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಈವರೆಗೆ 54 ಮಂದಿ ಬಿಡುಗಡೆಯಾಗಿದ್ದು, ಗುಣಮುಖರಾಗಿ ಬಿಡುಗಡೆಯಾದವರು ಸರಾಸರಿ 13-15 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಾಜ್ಯದಲ್ಲಿ ಚೇತರಿಕೆ ಅವಧಿ ಉತ್ತಮವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಪು ವಲಯದಲ್ಲಿ ರಾಜ್ಯದ 11 ಜಿಲ್ಲೆಗಳು!

ವೈದ್ಯರ ಸಹಾಯದಿಂದ 10 ತಿಂಗಳ ಪುಟ್ಟಮಗು ಹಾಗೂ ಏಳು ಮಂದಿ 60 ವರ್ಷಕ್ಕೂ ಮೇಲ್ಪಟ್ಟು ವಯಸ್ಸಿನ ಏಳು ಮಂದಿ ವೃದ್ಧರು ಕೊರೋನಾ ವಿರುದ್ಧದ ಕಠಿಣ ಯುದ್ಧ ಗೆದ್ದಿದ್ದಾರೆ. ಅಲ್ಲದೆ, 50ರಿಂದ 60 ವರ್ಷದ ನಡುವಿನ 5 ಮಂದಿ, 10 ರಿಂದ 50 ವರ್ಷದೊಳಗಿನ 41 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಚಿಕಿತ್ಸೆ ಆಶಾದಾಯಕ ಫಲ ನೀಡುತ್ತಿದೆ.

ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ 54 ಮಂದಿ ಪೈಕಿ 42 ಮಂದಿ ಪುರುಷರು ಹಾಗೂ 12 ಮಂದಿ ಮಹಿಳೆಯರು ಇದ್ದಾರೆ.

ನಂಜನಗೂಡು ಮೊದಲ ಸೋಂಕಿತ ಗುಣಮುಖ:

ರಾಜ್ಯದಲ್ಲಿ ತಬ್ಲೀಘಿ ಜಮಾತ್‌ ಬಳಿಕ ಅತಿ ಹೆಚ್ಚು ಆತಂಕ ಸೃಷ್ಟಿಸಿರುವ ನಂಜನಗೂಡು ಔಷಧ ಕೈಗಾರಿಕೆಯಿಂದ ಈವರೆಗೆ 37 ಮಂದಿಗೆ ಸೋಂಕು ಹರಡಿದೆ. ಆದರೆ, ಈವರೆಗೂ ಸೋಂಕು ಹರಡಿದ ಮೂಲ ಪತ್ತೆಯಾಗಿಲ್ಲ. ಕೈಗಾರಿಕೆಯಲ್ಲಿ ಮಾ.26 ರಂದು 35 ವರ್ಷಗಳ (52ನೇ ಸೋಂಕಿತ) ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಇವರಿಂದ ಈವರೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಸೇರಿ 37 ಮಂದಿಗೆ ಸೋಂಕು ಹರಡಿದೆ. ಇದೀಗ ಕ್ಲಸ್ಟರ್‌ನ ಈ ಮೊದಲ ಸೋಂಕಿತ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ, ಇವರೊಂದಿಗೆ ಇನ್ನೂ ಆರು ಮಂದಿ ಸಹೋದ್ಯೋಗಿಗಳು ಸಹ ಗುಣಮುಖರಾಗಿದ್ದಾರೆ.

ಒಟ್ಟು ಗುಣಮುಖರಾದ 54 ಮಂದಿ ಪೈಕಿ 33 ಮಂದಿ ವಿದೇಶಿ ಪ್ರಯಾಣದ ಹಿನ್ನೆಲೆಯವರು, 13 ಮಂದಿ ವಿದೇಶಿ ಪ್ರಯಾಣಿಕರ ಸಂಪರ್ಕಿತರು, ಏಳು ಮಂದಿ ನಂಜನಗೂಡು ಕೈಗಾರಿಕೆ ನೌಕರರು, ಸೋಂಕಿನ ಮೂಲ ತಿಳಿಯದ ಒಬ್ಬರು ಇದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ​ದಲ್ಲಿ ನಿನ್ನೆ ಒಂದೇ ದಿನ 17 ಮಂದಿಗೆ ಸೋಂಕು ದೃಢ!

ಗುಣಮುಖರಾದವರ ಸೋಂಕಿನ ಮೂಲ:

ವಿದೇಶಿ ಪ್ರಯಾಣಿಕರು: 33

ವಿದೇಶಿ ಪ್ರಯಾಣಿಕರಿಂದ ಸೋಂಕಿತರು: 13

ನಂಜನಗೂಡು ಕಾರ್ಖಾನೆ: ಮೊದಲ ಸೋಂಕಿತ ಸೇರಿ 7

ಸೋಂಕಿನ ಮೂಲ ಗೊತ್ತಿಲ್ಲದವರು: 1

ಗುಣಮುಖರಾದ ಕಿರಿ-ಹಿರಿ ವಯಸ್ಸಿನವರು

ಅತಿ ಕಿರಿಯ: 10 ತಿಂಗಳ ಮಗು

ಅತಿ ಹಿರಿಯ - 70 ವರ್ಷ

ಬಿಡುಗಡೆಯಾದವರ ವಯಸ್ಸು

- 60 ವರ್ಷ ಮೇಲ್ಪಟ್ಟವರು - 7

- 50 ರಿಂದ 60 ವರ್ಷ - 5

- 10 ರಿಂದ 50 ವರ್ಷ- 40

- 10 ರಿಂದ 15 ವರ್ಷ - 1

- 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು - 1