ಬೆಂಗಳೂರು(ಜು.25): ಕರುನಾಡಿನಲ್ಲಿ ಕೊರೋನಾ ಸೋಂಕು ಏರುಗತಿಯಲ್ಲಿ ಸಾಗುತ್ತಲೇ ಇದ್ದು, ಸತತ ಎರಡನೇ ದಿನವಾದ ಶುಕ್ರವಾರವೂ ಐದು ಸಾವಿರ ಗಡಿ ದಾಟಿ 5007 ಸೋಂಕು ದೃಢಪಟ್ಟಿದೆ. ಇದೇ ವೇಳೆ 2037 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಶುಕ್ರವಾರ ಸಾವಿನ ಸಂಖ್ಯೆ ಮತ್ತಷ್ಟುಹೆಚ್ಚಳವಾಗಿದ್ದು ಒಂದೇ ದಿನ 110 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತ ಸೋಂಕಿತರ ಸಂಖ್ಯೆ 1724ಕ್ಕೆ (ಆತ್ಮಹತ್ಯೆ ಸೇರಿ 8 ಅನ್ಯಕಾರಣದ ಪ್ರಕರಣ ಹೊರತುಪಡಿಸಿ) ಏರಿಕೆಯಾಗಿದೆ.

ಕೊರೋನಾ ಚಿಕಿತ್ಸೆಗೆ ಮತ್ತೆ 3 ಔಷಧಕ್ಕೆ ಗ್ರೀನ್ ‌ಸಿಗ್ನಲ್!

ರಾಜ್ಯದಲ್ಲಿ ಈ ವರೆಗೆ ಒಟ್ಟು ಸೋಂಕು ದೃಢಪಟ್ಟವರ ಸಂಖ್ಯೆ 85,870ಕ್ಕೆ ಮತ್ತು ಗುಣಮುಖರಾದವರ ಒಟ್ಟು ಸಂಖ್ಯೆ 31,347ಕ್ಕೆ ಹೆಚ್ಚಿದೆ. 52,791 ಮಂದಿ ಸಕ್ರಿಯ ಸೋಂಕಿತರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬೆಂಗಳೂರಿನ 362 ಮಂದಿ ಸೇರಿ ಒಟ್ಟು 611 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಲ್ಲೇ 2267 ಕೇಸ್‌:

ಶುಕ್ರವಾರ ರಾಜ್ಯದಲ್ಲಿ 29819 ಮಂದಿಯ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ದಾಖಲೆಯ 2267 ಮಂದಿಗೆ ಸೋಂಕು ಹರಡಿದೆ. ಇದರೊಂದಿಗೆ ನಗರದ ಒಟ್ಟು ಸೋಂಕಿತರ ಸಂಖ್ಯೆ 41,467ಕ್ಕೆ ಏರಿಕೆಯಾಗಿದೆ. ಇದರಲ್ಲಿ 10,072 ಮಂದಿ ಬಿಡುಗಡೆಯಾಗಿದ್ದು, 30,561 ಮಂದಿ ಆಸ್ಪತ್ರೆಯಲ್ಲಿದ್ದಾರೆ.

ಕೊರೋನಾ ಲಸಿಕೆ ಸಂಶೋಧನೆ ಹ್ಯಾಕ್‌ಗೆ ಚೀನಾ ಯತ್ನ!

ಇನ್ನು ಶುಕ್ರವಾರ 13 ಜಿಲ್ಲೆಗಳಲ್ಲಿ ಶತಕ ಮೀರಿ ಸ್ಫೋಟಗೊಂಡಿದೆ. ಮೈಸೂರಿನಲ್ಲಿ 281, ಉಡುಪಿ 190, ಬಾಗಲಕೋಟೆ 184, ದಕ್ಷಿಣ ಕನ್ನಡ 180, ಧಾರವಾಡ 174, ಕಲಬುರಗಿ 159, ವಿಜಯಪುರ 158, ಬಳ್ಳಾರಿ 136, ಹಾಸನ 118, ಬೆಳಗಾವಿ 116, ಗದಗ 108, ರಾಯಚೂರು 107, ಚಿಕ್ಕಬಳ್ಳಾಪುರ 92, ಉತ್ತರ ಕನ್ನಡ 88, ಬೀದರ್‌ 87, ದಾವಣಗೆರೆ 77, ಶಿವಮೊಗ್ಗ 67, ತುಮಕೂರು 59, ಮಂಡ್ಯ 57, ಯಾದಗಿರಿ 53, ಕೊಪ್ಪಳ 39, ಕೋಲಾರ 36, ಚಾಮರಾಜನಗರ 33, ಚಿಕ್ಕಮಗಳೂರು 28, ಬೆಂಗಳೂರು ಗ್ರಾಮಾಂತರ 26, ಚಿತ್ರದುರ್ಗ 13, ರಾಮನಗರ 12 ಹಾಗೂ ಕೊಡಗಿನಲ್ಲಿ 3 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ.

ಸಾವು ಎಲ್ಲಿ ಎಷ್ಟು?:

ಶುಕ್ರವಾರ ಬೆಂಗಳೂರು ನಗರದಲ್ಲೇ 50 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು, ದಕ್ಷಿಣ ಕನ್ನಡದಲ್ಲಿ ತಲಾ 6, ತುಮಕೂರು, ಧಾರವಾಡ ತಲಾ 5, ಕಲಬುರಗಿ 4, ಚಿಕ್ಕ ಮಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ ತಲಾ 3, ಕೊಪ್ಪಳ, ಗದಗ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಹಾಸನ, ಬಳ್ಳಾರಿಯಲ್ಲಿ ತಲಾ 2, ಕೋಲಾರ, ಹಾವೇರಿ, ಉತ್ತರ ಕನ್ನಡ, ಚಾಮರಾಜನಗರ, ಬೆಳಗಾವಿ ಮತ್ತು ರಾಯಚೂರಿನಲ್ಲಿ ತಲಾ ಒಬ್ಬರು ಸೇರಿ ಒಟ್ಟು 110 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 16 ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ. ಉಳಿದ 94 ಮಂದಿ ಐಎಲ್‌ಐ ಮತ್ತು ಸಾರಿ ಹಿನ್ನೆಲೆಯಿಂದ ಸೋಂಕು ದೃಢಪಟ್ಟವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.