Asianet Suvarna News Asianet Suvarna News

ಗೃಹ ಮಂಡಳಿಯಿಂದ ಈ ವರ್ಷ 50,000 ನಿವೇಶನ: ಸಚಿವ ಸೋಮಣ್ಣ

ಬೆಂಗಳೂರಿನ ಸೂರ್ಯನಗರದಲ್ಲೇ 30 ಸಾವಿರ ಸೈಟ್‌ ಹಂಚಿಕೆ,  ನಿವೇಶನಕ್ಕಾಗಿ ಭೂ ಸ್ವಾಧೀನ ಸಂಬಂಧ ಉದ್ಭವಿಸಿದ್ದ ಕೋರ್ಟ್‌ ವ್ಯಾಜ್ಯಗಳು ಇತ್ಯರ್ಥ: ಸಚಿವ ಸೋಮಣ್ಣ

50000 Sites This Year by the Karnataka Housing Board Says Minister V Somanna grg
Author
Bengaluru, First Published Aug 20, 2022, 7:22 AM IST

ಬೆಂಗಳೂರು(ಆ.20):  ಕರ್ನಾಟಕ ಗೃಹ ಮಂಡಳಿಯಿಂದ ಈ ವರ್ಷ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಗಳೂರಿನ ಸೂರ್ಯನಗರ ನಾಲ್ಕನೇ ಹಂತದಲ್ಲಿ 30 ಸಾವಿರ ನಿವೇಶನ ಸೇರಿದಂತೆ ರಾಜ್ಯದ ವಿವಿಧ ಕಡೆ ಒಟ್ಟು 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಜೊತೆಗೆ ಮಂಡಳಿಯು ರಾಜ್ಯದ ವಿವಿಧ ನಗರಗಳಲ್ಲಿ ನಿವೇಶನ ರಚಿಸಲು ವಶಪಡಿಸಿಕೊಂಡಿದ್ದ ಭೂಮಿ ಸಂಬಂಧ ಉದ್ಭವವಾಗಿದ್ದ ಪ್ರಕರಣಗಳು ಇತ್ಯರ್ಥವಾಗಿದ್ದು, ಡಿಪಿಆರ್‌ ಮತ್ತು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ವಿವಿಧ ನಗರಗಳಲ್ಲಿ ಲಾಟರಿ ಮೂಲಕ ಸುಮಾರು ಮೂರು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದರು.

15-20 ವರ್ಷಗಳ ಹಿಂದೆಯೇ ನಿವೇಶನಕ್ಕಾಗಿ ಮಂಡಳಿ ಭೂ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಕೆಲವರು ಕೋರ್ಚ್‌ಗೆ ಹೋಗಿದ್ದರು. ಆದರೆ ಹೈಕೋರ್ಟ್‌ ಭೂಮಿ ವಾಪಸ್‌ ಪಡೆಯುವಂತೆ ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗಿತ್ತು. ಇತ್ತೀಚೆಗೆ ಮಂಡಳಿಯ ಭೂ ಸ್ವಾಧೀನ ಕ್ರಮವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಇದರ ಜೊತೆಗೆ ಮಾತುಕತೆ ನಡೆಸಿ ಪರಿಹಾರ ರೂಪದಲ್ಲಿ ಒಟ್ಟು ನಿವೇಶನಗಳಲ್ಲಿ ಶೇ. 50ರಷ್ಟನ್ನು ರೈತರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ಗೃಹ ಮಂಡಳಿಯಿಂದ ಇನ್ನು ಲೇ ಔಟ್‌ ಇಲ್ಲ, ರೈತರ ಭೂಸ್ವಾದೀನ ಇಲ್ಲ

ಮೈಸೂರು, ಮುಂಡರಗಿ, ಬಾಗಲಕೋಟೆ, ಹರಿಹರ, ಗದಗ, ಚನ್ನಗಿರಿ, ನೆಲಮಂಗಲ, ಮಾದನಾಯಕನಹಳ್ಳಿಯಲ್ಲಿ ನಿವೇಶನವನ್ನು ಹಂಚಿಕೆ ಮಾಡಲಾಗುವುದು. 18 ಯೋಜನೆ ಸಂಬಂಧ 16 ದಿನಗಳಲ್ಲಿ ಡಿಪಿಆರ್‌ ಮಾಡಿ ಟೆಂಡರ್‌ ಕರೆಯಲಾಗುವುದು. ಈ ಎಲ್ಲ ಪ್ರಕ್ರಿಯೆ ಮುಗಿದ ನಂತರ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಒಂದು ಲಕ್ಷ ಮನೆ ಯೋಜನೆ:

ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಯೋಜನೆಯಡಿ ಈವರೆಗೆ 48,498 ಮನೆ ಹಂಚಿಕೆ ಮಾಡಲಾಗಿದೆ. ಶೇ. 50ರಷ್ಟುಮನೆಗಳಿಗೆ ಆಯಾ ಕ್ಷೇತ್ರದ ಶಾಸಕರು ಅರ್ಹರನ್ನು ಆಯ್ಕೆ ಮಾಡಿ ಪಟ್ಟಿಕೊಡದ ಕಾರಣ ಹಂಚಿಕೆ ವಿಳಂಬವಾಗಿದೆ. ಹೀಗಾಗಿ ಇನ್ನೊಂದು ವಾರದಲ್ಲಿ ಪಟ್ಟಿಸಿದ್ಧಪಡಿಸದಿದ್ದರೆ, ಅಧಿಕಾರಿಗಳ ಮೂಲಕ ಅರ್ಹರನ್ನು ಆಯ್ಕೆ ಮಾಡಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದ ಮೂಲಕ ಶಾಸಕರಿಗೆ ತಿಳಿಸಲಾಗಿದೆ ಎಂದರು.

ತಾವು ಅಧಿಕಾರಕ್ಕೆ ಬಂದ ನಂತರ 3.50 ಲಕ್ಷ ಮನೆ ನೀಡಲಾಗಿದೆ. ಬಾಕಿ ಇರುವ 1.50 ಲಕ್ಷ ಮನೆಗಳನ್ನು ಸಹ ಆದಷ್ಟು ಬೇಗ ನೀಡಲಾಗುವುದು, ಸೆಪ್ಟೆಂಬರ್‌/ಅಕ್ಟೋಬರ್‌ ಒಳಗೆ 16 ಸಾವಿರ ಮನೆಗಳನ್ನು ಅರ್ಹರಿಗೆ ವಿತರಿಸಲಾಗುವುದು. ಎಲ್ಲಿಯೂ ಅಪಚಾರ ಆಗದಂತೆ, ಪಾರದರ್ಶಕವಾಗಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೃಹ ಮಂಡಳಿಯಿಂದ ಜಿ ಕೆಟಗರಿ ನಿವೇಶನ, ಮನೆ

ಗೃಹ ಮಂಡಳಿಯಿಂದ ನೀಡುವ ನಿವೇಶನ, ಮನೆಗಳಲ್ಲಿ ಶೇ. 5ರಷ್ಟನ್ನು ಜಿ ಕೆಟಗರಿ ಅಡಿಯಲ್ಲಿ ನೀಡಲು ನಿರ್ಧರಿಸಿದ್ದು, ಶೀಘ್ರದಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ. ಪ್ರಮುಖ ಪ್ರಶಸ್ತಿ ಪುರಸ್ಕೃತರು, ಅಂಗವಿಕಲರು, ನ್ಯಾಯಾಧೀಶರು, ಕ್ರೀಡಾಪಟುಗಳು, ಪತ್ರಕರ್ತರಿಗೆ ಜಿ ಕೆಟಗರಿ ಅಡಿಯಲ್ಲಿ ನಿವೇಶನ, ಮನೆ ನೀಡಲಾಗುವುದು ಎಂದು ವಿವರಿಸಿದರು.
 

Follow Us:
Download App:
  • android
  • ios