ಕೇಂದ್ರ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳ ಮುನ್ಸೂಚನೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.40ರಿಂದ 50ರಷ್ಟು ಮಳೆ ಕೊರತೆ ಉಂಟಾಗಲಿದೆ ಎಂದು ತಿಳಿಸಿದ ಹವಾಮಾನ ಇಲಾಖೆ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಆ.05): ರಾಜ್ಯದ ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಬಹುತೇಕ ಜಿಲ್ಲೆಗಳಲ್ಲಿ ಆಗಸ್ಟ್ ಮತ್ತು ಸæಪ್ಟೆಂಬರ್‌ನಲ್ಲಿ ವಾಡಿಕೆ ಪ್ರಮಾಣದ ಅರ್ಧದಷ್ಟುಕಡಿಮೆ ಮಳೆ ಆಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ರೈತರನ್ನು ಆತಂಕಕ್ಕೀಡು ಮಾಡಿದೆ.
ಕೇಂದ್ರ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳ ಮುನ್ಸೂಚನೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.40ರಿಂದ 50ರಷ್ಟು ಮಳೆ ಕೊರತೆ ಉಂಟಾಗಲಿದೆ ಎಂದು ತಿಳಿಸಿದೆ.
ಜೂನ್‌ನಲ್ಲಿ ಶೇ.9ರಷ್ಟು ಮಳೆ ಕೊರತೆ: ಜುಲೈನಲ್ಲಿ ಶೇ.13ರಷ್ಟು ಅಧಿಕ ಮಳೆ
ಮುಂಗಾರು ಆರಂಭದಲ್ಲಿ ಉಂಟಾದ ಮಳೆ ಕೊರತೆ ಪ್ರಮಾಣವು ಜುಲೈ ಕೊನೆಯ ವಾರದಲ್ಲಿ ಸುರಿದ ಮಳೆಯಿಂದ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ. ರೈತರು ಇದೀಗ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬರಿದಾಗಿದ್ದ ರಾಜ್ಯದ ಕೆರೆ, ಕುಂಟೆ, ಜಲಾಶಯಗಳಿಗೆ ಒಂದಿಷ್ಟು ನೀರು ಹರಿದು ಬಂದಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಇದೀಗ ಮತ್ತೆ ಮಳೆ ಕೈಕೊಡಲಿದೆ ಎಂಬ ವಿಚಾರ ರೈತರನ್ನು ಆತಂಕಕ್ಕೆ ದೂಡಿದೆ.
ಈಗಾಗಲೇ ಮಲೆನಾಡು ಪ್ರದೇಶ ಶೇ.27ರಷ್ಟುಮಳೆ ಕೊರತೆ ಎದುರಿಸುತ್ತಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ತಲಾ ಶೇ.7ರಷ್ಟು ಮಳೆ ಕೊರತೆ ಇದೆ. ಮತ್ತೆ ಮಳೆ ಕೊರತೆ ಉಂಟಾದರೆ ಕೃಷಿ ಚಟುವಟಿಕೆ ಮೇಲೆ ಭಾರೀ ಪರಿಣಾಮ ಬೀರಲಿದೆ.
ಬರ ಪರಿಸ್ಥಿತಿ ಹೇಳಲಾಗದು:
ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ ಮತ್ತು ಸಪ್ಟೆಂಬರ್‌ನಲ್ಲಿ ವಾಡಿಕೆ ಪ್ರಮಾಣದ ಅರ್ಧದಷ್ಟುಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಆದರೂ, ಒಂದಿಷ್ಟುಪ್ರಮಾಣ ಮಳೆಯಾಗಲಿದೆ ಎಂಬ ನಿರೀಕ್ಷೆ ಇದೆ. ಆದರೆ, ವಾಡಿಕೆ ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣ ಮಳೆ ಆಗುವುದಿಲ್ಲ. ಹಾಗೆಂದು ಬರದ ಛಾಯೆ ಮೂಡಲಿದೆ ಎಂಬುದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಪ್ರಸಾದ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
53 ವರ್ಷದಲ್ಲಿ 25ಕ್ಕೂ ಹೆಚ್ಚು ಬಾರಿ ಮಳೆ ಕೊರತೆ:
ಕರ್ನಾಟಕ ರಾಜ್ಯ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದ 1971ರಿಂದ 2023ರವರೆಗಿನ 53 ವರ್ಷದಲ್ಲಿ ಒಟ್ಟು 25 ವರ್ಷ ಆಗಸ್ಟ್‌ನಲ್ಲಿ, 28 ವರ್ಷ ಸæಪ್ಟೆಂಬರ್‌ನಲ್ಲಿ ಮಳೆ ಕೊರತೆ ಉಂಟಾಗಿದೆ. ಆಗಸ್ಟ್ ತಿಂಗಳಿನಲ್ಲಿ 220 ಮಿ.ಮೀ ನಷ್ಟುವಾಡಿಕೆ ಪ್ರಮಾಣ ಮಳೆಯಾಗಿದೆ. 1972 ಮತ್ತು 2016ರಲ್ಲಿ ಅತಿ ಹೆಚ್ಚು ಶೇ.43ರಷ್ಟುಮಳೆ ಕೊರತೆ ಉಂಟಾದರೆ, 2021ರಲ್ಲಿ ಶೇ.32ರಷ್ಟುಮಳೆ ಕೊರತೆ ಉಂಟಾಗಿತ್ತು.
ಇನ್ನು 160.8 ಮಿ.ಮೀ. ಸಪ್ಟೆಂಬರ್‌ನ ವಾಡಿಕೆ ಮಳೆಯಾಗಿದೆ. 2018ರಲ್ಲಿ ಅತಿ ಹೆಚ್ಚು ಶೇ.45 ರಷ್ಟುಮಳೆ ಕೊರತೆ ಉಂಟಾದರೆ, 2016ರಲ್ಲಿ ಶೇ.31ರಷ್ಟು, 2012ರಲ್ಲಿ 35ರಷ್ಟುಹಾಗೂ 2011ರಲ್ಲಿ ಶೇ.25ರಷ್ಟುಮಳೆ ಕೊರತೆ ಉಂಟಾಗಿರುವುದನ್ನು ಗಮನಿಸಬಹುದಾಗಿದೆ.
ಕೊಡಗಿನಲ್ಲಿ ವಾರದಿಂದ ಸುರಿದ ಮಳೆಗೆ ಬಂಡೆ ಕುಸಿತ, ಗೋಡೆಗಳು ಬಿರುಕು!
ಪ್ರದೇಶವಾರು ವಾಡಿಕೆ ಮಳೆ ವಿವರ (ಮಿ.ಮೀ)
ಪ್ರದೇಶವಾರು ಆಗಸ್ಟ್ ವಾಡಿಕೆ ಮಳೆ ಸæಪ್ಟೆಂಬರ್ ವಾಡಿಕೆ ಮಳೆ
ದಕ್ಷಿಣ ಒಳನಾಡು 88.2 136
ಉತ್ತರ ಒಳನಾಡು 117.7 142
ಮಲೆನಾಡು 423.2 179
ಕರಾವಳಿ 822.9 304
ರಾಜ್ಯ 220 161
ಪ್ರಸಕ್ತ ಮುಂಗಾರು ಮಳೆ ವಿವರ (ಮಿ.ಮೀ)
ಪ್ರದೇಶವಾರು ವಾಡಿಕೆ ಮಳೆ ಸುರಿದ ಮಳೆ ಶೇಕಡಾ ಪ್ರಮಾಣ
ದಕ್ಷಿಣ ಒಳನಾಡು 151 138 -8
ಉತ್ತರ ಒಳನಾಡು 228 245 7
ಮಲೆನಾಡು 993 725 -27
ಕರಾವಳಿ 2046 1909 -7
ರಾಜ್ಯ 489 443 -9
