ಕೊಡಗಿನಲ್ಲಿ ವಾರದಿಂದ ಸುರಿದ ಮಳೆಗೆ ಬಂಡೆ ಕುಸಿತ, ಗೋಡೆಗಳು ಬಿರುಕು!
ಜಿಲ್ಲೆಯಲ್ಲಿ ಕಳೆದ ಒಂದು ವಾರ ತೀವ್ರ ಮಳೆ ಸುರಿದಿದ್ದು, ಈಗ ಒಂದಷ್ಟು ಪ್ರಮಾಣ ತಗ್ಗಿದೆ. ಮಳೆ ತಗ್ಗಿದ್ದರೂ ಸುರಿದಿರುವ ಮಳೆಗೆ ಸಮಸ್ಯೆಗಳು ಮುಂದುವರಿಯುತ್ತಲೇ ಇವೆ. ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ಕಾರೇಕಾಡು ಎಂಬಲ್ಲಿ ಕುಮಾರ್ ಎಂಬುವರ ಮನೆ ಪಕ್ಕದಲ್ಲಿಯೇ ಬಂಡೆಗಳು ಕುಸಿದಿದ್ದರೆ, ಕೆಳಭಾಗದಲ್ಲಿರುವ ಲಲಿತಾ ಎಂಬುವರ ಮನೆ ಎಲ್ಲಾ ಗೋಡೆಗಳು ಬಿರುಕು ಬಿಟ್ಟಿವೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.01): ಜಿಲ್ಲೆಯಲ್ಲಿ ಕಳೆದ ಒಂದು ವಾರ ತೀವ್ರ ಮಳೆ ಸುರಿದಿದ್ದು, ಈಗ ಒಂದಷ್ಟು ಪ್ರಮಾಣ ತಗ್ಗಿದೆ. ಮಳೆ ತಗ್ಗಿದ್ದರೂ ಸುರಿದಿರುವ ಮಳೆಗೆ ಸಮಸ್ಯೆಗಳು ಮುಂದುವರಿಯುತ್ತಲೇ ಇವೆ. ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ಕಾರೇಕಾಡು ಎಂಬಲ್ಲಿ ಕುಮಾರ್ ಎಂಬುವರ ಮನೆ ಪಕ್ಕದಲ್ಲಿಯೇ ಬಂಡೆಗಳು ಕುಸಿದಿದ್ದರೆ, ಕೆಳಭಾಗದಲ್ಲಿರುವ ಲಲಿತಾ ಎಂಬುವರ ಮನೆ ಎಲ್ಲಾ ಗೋಡೆಗಳು ಬಿರುಕು ಬಿಟ್ಟಿವೆ. ಇದು ಎರಡು ಕುಟುಂಬಗಳನ್ನು ಆತಂಕಕ್ಕೆ ದೂಡಿದೆ. 2018 ರಲ್ಲಿ ಭೀಕರ ಭೂಕುಸಿತವಾದಾಗ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಭೀಕರ ಭೂಕುಸಿತವಾಗಿತ್ತು.
ಜೊತೆಗೆ ಮಾದಾಪುರ ಹೊಳೆ ಉಕ್ಕಿ ಹರಿದಿತ್ತು. ಈ ವೇಳೆ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಕಾಡಿನ ಕುಮಾರ್ ಎಂಬುವವರ ಮನೆ ಕುಸಿದು ಬಿದ್ದಿತ್ತು. ಅಷ್ಟೇ ಅಲ್ಲ ಲಲತಾ ಎಂಬುವರ ಮನೆಯ ಹಿಂಭಾಗದಲ್ಲಿ ಭೂಕುಸಿತವಾಗಿತ್ತು. ಪರಿಣಾಮ ಮನೆಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿತ್ತು. ಆದರೆ ಭೂಕುಸಿತ, ಪ್ರವಾಹದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರಿಂದ ಲಲಿತಾ ಅವರ ಕುಟುಂಬ ಬಚಾವ್ ಆಗಿ ನಿಟ್ಟುಸಿರು ಬಿಟ್ಟಿತ್ತು. ಆನಂತರ ಪ್ರತೀ ಮಳೆಗಾಲದಲ್ಲಿ ಸಾಕಷ್ಟು ಮಳೆ ಸುರಿಯುವುದರಿಂದ ಲಲಿತಾ ಅವರ ಮನೆ ಬಿರುಕುಬಿಟ್ಟು ಕುಸಿದು ಬೀಳುವ ಹಂತಕ್ಕೆ ತಲುಪಿದೆ.
ಕಾಂಗ್ರೆಸ್ ಗ್ಯಾರಂಟಿಯಿಂದ ಕುಟುಂಬದ ಆರ್ಥಿಕ ಸ್ಥಿತಿ ಸದೃಢ: ಸಚಿವ ಚಲುವರಾಯಸ್ವಾಮಿ
ಮನೆಯ ಮುಂಭಾಗದ ಗೋಡೆ ಬಿಟ್ಟು ಉಳಿದ ಎಲ್ಲಾ ಗೋಡೆಗಳು ದೊಡ್ಡ ದೊಡ್ಡ ಬಿರುಕು ಮೂಡಿವೆ. ಹೀಗಾಗಿ ಇಡೀ ಕುಟುಂಬ ಆತಂಕದಲ್ಲಿ ಬದುಕುತ್ತಿದೆ. ಮನೆಯಲ್ಲಿ ನಾಲ್ವರು ಇದ್ದು, ಏಳು ತಿಂಗಳ ಹಸುಗೂಸು ಕೂಡ ಇದೆ. ಹೀಗಾಗಿ ಮಳೆ ಶುರುವಾದಾಗಿನಿಂದ ಮನೆಯಲ್ಲಿ ನಿದ್ದೆ ಮಾಡಲು ಆಗುತ್ತಿಲ್ಲ ಎಂದು ಲಲಿತಾ ಅಳಲು ತೋಡಿಕೊಂಡಿದ್ದಾರೆ. 2018 ರಲ್ಲಿಯೇ ಮನೆ ಸಣ್ಣ ಪ್ರಮಾಣದಲ್ಲಿ ಬಿರುಕುಬಿಟ್ಟಿತ್ತು. ಆಗಾಲೇ ಮನೆ ಕೊಡುವಂತೆ ಮನವಿ ಮಾಡಿದ್ದೆವು. ಪಂಚಾಯಿತಿಗೆ ಮನವಿ ಸಲ್ಲಿಸಿದ್ದೆವು. ಮನೆಯ ಶೀಟುಗಳು ಹಾರಿಹೋಗಿದ್ದರಿಂದ ಪಂಚಾಯಿತಿಯಿಂದ ಶೀಟುಗಳನ್ನು ನೀಡಿದರು.
ಆದರೆ ನಂತರ ಇಡೀ ಮನೆ ಹಂತ ಹಂತವಾಗಿ ಬಿರುಕು ಬಿಡುತ್ತಾ ಹೋಯಿತು. ಇದೀಗ ಮನೆ ಪೂರ್ಣ ಪ್ರಮಾಣದಲ್ಲಿ ಬಿರುಕುಬಿಟ್ಟು ಯಾವ ಸಮಯದಲ್ಲಿ ಕುಸಿದು ಬೀಳುತ್ತದೆ ಎನ್ನುವ ಆತಂಕವಿದೆ. ಆದ್ದರಿಂದಲೇ ಮನೆಯನ್ನು ಖಾಲಿ ಮಾಡಿ ಬೇರೆ ಬಾಡಿಗೆ ಮನೆಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ. ಇನ್ನು ಕುಮಾರ್ ಅವರ ಮನೆ ಕುಸಿದು ಬಿದ್ದು ಹೋಗಿದ್ದರಿಂದ ರೋಟರಿ ಸಂಸ್ಥೆ ಕುಮಾರ್ ಅವರಿಗೆ ಅದೇ ಸ್ಥಳದಲ್ಲಿ ಮನೆ ನಿರ್ಮಿಸಿಕೊಟ್ಟಿತ್ತು. ಇದೀಗ ಆ ಮನೆಯ ಗೋಡೆಗೆ ಹೊಂದಿಕೊಂಡಂತೆ ಇರುವ ಗುಡ್ಡದ ಮಣ್ಣಿನಿಂದ ಬಂಡೆಗಳು ಕುಸಿದು ಬಿದ್ದಿವೆ. ಭೂಮಿಯೊಳಗೆ ಇನ್ನೂ ದೊಡ್ಡ ದೊಡ್ಡ ಬಂಡೆಗಳು ಜಾರುತ್ತಿದ್ದು, ಒಂದು ವೇಳೆ ಅವು ಕುಸಿದಿದ್ದೇ ಆದಲ್ಲಿ ಮನೆಗೆ ತೀವ್ರ ತೊಂದರೆ ಆಗಲಿದೆ.
ನಗರಸಭೆಯ ಭ್ರಷ್ಟಾಚಾರ ಕ್ಲೀನ್ ಮಾಡುವೆ: ಶಾಸಕ ಪ್ರದೀಪ್ ಈಶ್ವರ್
ಹಾಗೇನಾದರೂ ಆದರೆ ತಮ್ಮ ಮನೆಯಲ್ಲೂ ಎರಡು ಪುಟ್ಟ ಮಕ್ಕಳಿದ್ದು, ನಮ್ಮ ಸ್ಥಿತಿ ಏನಾಗಬಹುದು ಎಂದು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಂಡೆಗಳು ಉರುಳಿರುವ ಬಗ್ಗೆ ಈಗಾಗಲೇ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಬಂದು ನೋಡಿ ಹೋಗಿದ್ದಾರೆ ಅಷ್ಟೇ. ಆದರೆ ಯಾವುದೇ ತಡೆಗೋಡೆ ಮಾಡುವ ಬಗ್ಗೆ ಮಾಹಿತಿ ಇಲ್ಲ ಎಂದು ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಳೆ ಸುರಿದಿದ್ದು, ಆಗಸ್ಟ್ ತಿಂಗಳಿನಲ್ಲಿ ಇನ್ನೂ ಸಾಕಷ್ಟು ಮಳೆ ಸುರಿಯುವ ಸಾಧ್ಯತೆ ಇದ್ದು ಹಲವು ಕುಟುಂಬಗಳು ಆತಂಕದಲ್ಲಿ ಕಾಲ ದೂಡುವಂತೆ ಆಗಿದೆ.