ಕೊಡಗು ಜಿಲ್ಲೆಯ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳ 50ಕ್ಕೂ ಹೆಚ್ಚು ಕುಟುಂಬಗಳು ಖಾಸಗಿ ಫೈನಾನ್ಸ್ ಕಂಪೆನಿಗಳಿಂದ ಸಾಲ ಪಡೆದು ಹೆಚ್ಚಿನ ಬಡ್ಡಿ ದರ ಮತ್ತು ಕಿರುಕುಳದಿಂದಾಗಿ ಊರು ತೊರೆದಿವೆ. ಕೇವಲ ಆಧಾರ್ ಕಾರ್ಡ್ ಆಧಾರದ ಮೇಲೆ ಸಾಲ ನೀಡಿ, ನಂತರ ಅತಿ ಹೆಚ್ಚಿನ ಬಡ್ಡಿ ವಿಧಿಸಿ ಕಿರುಕುಳ ನೀಡುತ್ತಿರುವುದರಿಂದ ಬಡ ಕುಟುಂಬಗಳು ಸಾಲ ತೀರಿಸಲಾಗದೆ ಕಣ್ಣೀರು ಹಾಕುತ್ತಿವೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.21) : ಸುಲಭವಾಗಿ ಸಾಲ ದೊರೆಯುತ್ತದೆ ಎಂದು ಖಾಸಗಿ ಫೈನಾನ್ಸ್ ಕಂಪೆನಿಗಳು ಕೊಡುವ ಸಾಲವನ್ನು ತೆಗೆದುಕೊಂಡು ಖರ್ಚು ಮಾಡಿರುವ ಕುಟುಂಬಗಳು, ಇದೀಗ ಅವುಗಳು ವಿಧಿಸುವ 24 ರಿಂದ 26 ಪರ್ಸೆಂಟ್ ಬಡ್ಡಿದರದ ಸಾಲ ತೀರಿಸಲಾಗದೆ ಈಗ ಊರನ್ನೇ ಬಿಟ್ಟಿವೆ.
ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿ ಒಂದರಲ್ಲೇ ನಾಲ್ಕು ಗ್ರಾಮಗಳ 50 ಕ್ಕೂ ಹೆಚ್ಚು ಕುಟುಂಬಗಳು ಗ್ರಾಮವನ್ನು ತೊರೆದಿವೆ. ಮೀನುಕೊಲ್ಲಿ ಹಾಡಿ, ದಾಸವಾಳ ಪೈಸಾರಿ, ಬೆಳ್ಳಿ ಕಾಲೋನಿ ಮತ್ತು ಕಾವೇರಿ ಕಾಲೋನಿಗಳಲ್ಲಿ ಫೈನಾನ್ಸ್ ಕಂಪೆನಿಗಳಿಂದ ಕಿರುಕುಳ ನಡೆಯುತ್ತಿರುವ ಆರೋಪವಿದೆ. ಹೀಗಾಗಿ ಗ್ರಾಮ ತೊರೆದು ಬೇರೆ ಊರುಗಳಿಗೆ ಹೋಗಿವೆ. ಬೇರೆ ಊರುಗಳಲ್ಲಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬಗಳನ್ನು ಬಿಡದೆ ಅಲ್ಲಿಗೂ ಹುಡುಕಿಕೊಂಡು ಹೋಗಿ ಕಿರುಕುಳ ನೀಡಲು ಆರಂಭಿಸಿದ ಹಿನ್ನೆಲೆಯಲ್ಲಿ ಇದೀಗ ಆ ಕುಟುಂಬಗಳು ರಾಜ್ಯವನ್ನೇ ಬಿಟ್ಟು ಕೇರಳ ಸೇರಿವೆ.
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಇದೇ ರೀತಿ ಕಿರುಕುಳ ನಡೆದಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಫೈನಾನ್ಸ್ ಕಂಪೆನಿಗಳ ವಿರುದ್ಧ ಗರಂ ಆಗಿದ್ದರು. ಆ ವಿಷಯ ಇನ್ನೂ ಮಾಸುವ ಮುನ್ನವೇ ಇದೀಗ ಕೊಡಗಿನಲ್ಲೂ ಕಿರುಕುಳಕ್ಕೆ ಹೆದರಿ ರಾಜ್ಯವನ್ನೇ ಹಲವು ಕುಟುಂಬಗಳು ಬಿಟ್ಟಿವೆ. ಅಂದರೆ ಸಿಎಂ ಅವರ ಮಾತಿಗೂ ಖಾಸಗಿ ಕಂಪೆನಿಗಳು ಕ್ಯಾರೆ ಎನ್ನುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. 15 ಕ್ಕೂ ಹೆಚ್ಚು ಫೈನಾನ್ಸ್ ಕಂಪೆನಿಗಳು ಅತೀ ಹೆಚ್ಚಿನ ಬಡ್ಡಿದರ ವಿಧಿಸಿ ಸಾಲ ವಸೂಲಿಗೆ ಇಳಿದಿದ್ದರಿಂದ ನಾಲ್ಕು ಗ್ರಾಮಗಳಲ್ಲೇ 50 ಕ್ಕೂ ಹೆಚ್ಚು ಕುಟುಂಬಗಳು ಊರನ್ನೇ ಬಿಟ್ಟಿವೆ. ಕೇವಲ ಆಧಾರ್ ಕಾರ್ಡಿನ ಆಧಾರದ ಮೇಲೆ ಸಾಲ ನೀಡಿರುವ ಫೈನಾನ್ಸ್ ಗಳು ಬಳಿಕ ಅತೀ ಹೆಚ್ಚಿನ ಬಡ್ಡಿದರ ವಿಧಿಸಿ ಸಾಲ ವಸೂಲಿ ಮಾಡುತ್ತಿವೆ. ಬಡ್ಡಿಗೆ ಬಡ್ಡಿ ಹಾಕುತ್ತಿರುವುದರಿಂದ ಎಷ್ಟೇ ಕಟ್ಟಿದರೂ ಬಡ, ಕೂಲಿಕಾರ್ಮಿಕ ಕುಟುಂಬಗಳು ಸಾಲ ತೀರಿಸಲಾಗದೆ ಕಣ್ಣೀರಿಡುತ್ತಿವೆ.
ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಯೋಜನೆ, ಕೇವಲ 4 ಗಂಟೆಯಲ್ಲಿ ಇನ್‌ಸ್ಟಾಂಟ್ ಸಾಲ
ಬೆಳಗ್ಗೆ 6 ಗಂಟೆಯಿಂದ ಸಾಲ ವಸೂಲಿಗೆ ಮನೆಗಳ ಬಳಿಗೆ ಬರುವ ಒಂದೊಂದು ಫೈನಾನ್ಸ್ ಕಂಪೆನಿಗಳ ಸಿಬ್ಬಂದಿ ರಾತ್ರಿ ಒಂಭತ್ತು ಗಂಟೆಯವರೆಗೆ ಬರುತ್ತಲೇ ಇರುತ್ತಾರೆ. ಸಾಲದ ಕಂತಿನ ಹಣ ಕಟ್ಟುವವರೆಗೆ ಬಿಡುವುದಿಲ್ಲ. ಮನಸ್ಸೋ ಇಚ್ಛೆ ಬೈಯುತ್ತಾರೆ, ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ಮೀನುಕೊಲ್ಲಿ ಹಾಡಿ ಒಂದರಲೇ 12 ಕುಟುಂಬಗಳು ಊರು ತೊರೆದಿವೆ. ಒಂದೊಂದು ಹಾಡಿಯಿಂದಲೂ ಊರು ತೊರೆದ 10 ರಿಂದ 15 ಕುಟುಂಬಗಳು ಇವೆ. ಫೈನಾನ್ಸ್ ಕಂಪೆನಿಗಳ ಕಿರುಕುಳ ತಾಳಲಾರದೆ ಚಿಕ್ಕಪುಟ್ಟ ಮಕ್ಕಳೊಂದಿಗೆ ಊರು ತೊರೆದಿವೆ. ಕೆಲ ಕುಟುಂಬಗಳಲ್ಲಿ ನಡೆದಾಡಲೂ ಸಾಧ್ಯವಿಲ್ಲದ ವೃದ್ಧ ತಂದೆ ತಾಯಿಗಳನ್ನು ಮನೆಯಲ್ಲಿ ಬಿಟ್ಟು ಊರು ತೊರೆಯಲಾಗಿದೆ. ರಾಜು ಎಂಬುವರು ಒಂದೆಡೆ ಕಾಲು, ಬೆನ್ನು ಮೂಳೆ ಮುರಿದುಕೊಂಡು ಕುಳಿತಿದ್ದರೆ, ಮತ್ತೊಂದೆಡೆ ಅವರ ಪತ್ನಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಾಜು ಅವರ ಇಬ್ಬರು ಮಕ್ಕಳು ತಮ್ಮ ಕುಟುಂಬ ಸಮೇತ ಮೂರು ತಿಂಗಳಿಂದ ಮನೆ ತೊರೆದು ಹೋಗಿದ್ದರೆ, ಫೈನಾನ್ಸ್ ಕಂಪೆನಿ ಸಿಬ್ಬಂದಿ ಮಕ್ಕಳ ಸಾಲ ನೀವೇ ಕಟ್ಟಿಯೆಂದು ರಾಜು ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಕಿರುಕುಳಕ್ಕೆ ಹೆದರಿ ಊರು ಬಿಟ್ಟಿರುವುದರಿಂದ ವೃದ್ದ ರಾಜು ದಂಪತಿ ಊಟಕ್ಕೂ ಗತಿಯಿಲ್ಲದೆ ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಪಿಪಿಎಫ್‌ನಿಂದ-ನ್ಯಾಷನ್ ಸೇವಿಂಗ್ಸ್ ಸ್ಕೀಮ್‌ವರೆಗೆ.. ದೇಶದ 10 ಸರ್ಕಾರಿ ಉಳಿತಾಯ ಯೋಜನೆಗಳು
ಸಾಲ ಕಟ್ಟಿಲ್ಲವೆಂದು ತಮ್ಮ ಪತ್ನಿ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದಾರೆಂದು ಕುಮಾರ ಎಂಬುವರು ಕಣ್ಣೀರಿಟ್ಟಿದ್ದಾರೆ. ಈ ಗ್ರಾಮಗಳಲ್ಲಿ ಫೈನಾನ್ಸ್ ಕಂಪೆನಿಗಳವರ ಕಿರುಕುಳಕ್ಕೆ ಹೆದರಿ ಮೂರ್ನಾಲ್ಕು ಮಹಿಳೆಯರು ಆತ್ಮಹತ್ಯೆಗೂ ಯತ್ನಿಸಿರುವ ಘಟನೆಗಳು ನಡೆದಿವೆ. ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಈ ಕುರಿತು ಮಾತನಾಡಿರುವ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಜನರಿಗೆ ಸುಲಭವಾಗಿ ಸಾಲ ನೀಡುವ ಆಸೆ ತೋರಿಸಿ ಅವರಿಗೆ ಕಟ್ಟುವ ಶಕ್ತಿ ಇಲ್ಲದಿದ್ದರೂ ಸಾಲ ನೀಡಿ ಈಗ ಹೆಚ್ಚಿನ ಬಡ್ಡಿದರ ವಿಧಿಸಿ ಅವರಿಗೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ನಮ್ಮ ಪಂಚಾಯಿತಿ ವ್ಯಾಪ್ತಿ ನಾಲ್ಕು ಗ್ರಾಮಗಳಲ್ಲಿ ಇಂತಹ ಸ್ಥಿತಿ ಇದ್ದು, ಜಿಲ್ಲೆಯ ಹಲವು ಗ್ರಾಮಗಳಲ್ಲಿ ಈ ಪರಿಸ್ಥಿತಿ ಇದೆ. ಯಾರಾದರೂ ಜೀವಹಾನಿ ಮಾಡಿಕೊಳ್ಳುವ ಮೊದಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
