ಕೊರೋನಾ ಸೋಂಕಿತರ ನೆರವಿಗೂ ರಾಜ್ಯ ಕಾಂಗ್ರೆಸ್‌ ಮುಂದಾಗಿದ್ದು, ಬೆಂಗಳೂರಿನಲ್ಲಿ 50 ಹಾಸಿಗೆಗಳ ಕೊರೋನಾ ಚಿಕಿತ್ಸಾ ಕೇಂದ್ರವನ್ನು ತೆರೆದಿದೆ. ಇಲ್ಲಿ 24 ಗಂಟೆಯೂ ಆಕ್ಸಿಜನ್ ಸೌಲಭ್ಯ ಒದಗಲಿದೆ. 

ಬೆಂಗಳೂರು (ಮೇ.04): ವಿರೋಧಪಕ್ಷವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುವ ಜತೆಗೆ ಕೊರೋನಾ ಸೋಂಕಿತರ ನೆರವಿಗೂ ರಾಜ್ಯ ಕಾಂಗ್ರೆಸ್‌ ಮುಂದಾಗಿದ್ದು, ಬೆಂಗಳೂರಿನಲ್ಲಿ 50 ಹಾಸಿಗೆಗಳ ಕೊರೋನಾ ಚಿಕಿತ್ಸಾ ಕೇಂದ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದ್ದಾರೆ.

ಕೊರೋನಾ ಸೋಂಕಿತರ ನೆರವಾಗಿ ಶನಿವಾರವಷ್ಟೇ 10 ಆ್ಯಂಬುಲೆನ್ಸ್‌ ಸೇವೆ ಹಾಗೂ ಸಹಾಯವಾಣಿಗೆ ಚಾಲನೆ ನೀಡಿದ್ದ ಡಿ.ಕೆ. ಶಿವಕುಮಾರ್‌, ಸೋಮವಾರ ಗಾಂಧಿನಗರದ ಗೋಲ್ಡನ್‌ ರೆಸಿಡೆನ್ಸಿಯಲ್ಲಿ ಟ್ರಸ್ಟ್‌ವೆಲ್‌ ಆಸ್ಪತ್ರೆ ಮತ್ತು ಜಿಟೋ ಸಹಯೋಗದೊಂದಿಗೆ ಕಾಂಗ್ರೆಸ್‌ ಪಕ್ಷ ತೆರೆದಿರುವ 50 ಹಾಸಿಗೆಗಳ ಕೊರೋನಾ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿದರು.

ಚಾಮರಾಜನಗರ ಆಸ್ಪತ್ರೆ ದುರಂತ: ಸಿದ್ದರಾಮಯ್ಯ ಕೆಂಡಾಮಂಡಲ ..

24 ಗಂಟೆ ಆಕ್ಸಿಜನ್‌ ವ್ಯವಸ್ಥೆ:  ಚಿಕಿತ್ಸಾ ಕೇಂದ್ರದಲ್ಲಿ ಸೋಂಕಿತರಿಗೆ ವೆಂಟಿಲೇಟರ್‌ ಸಮಸ್ಯೆ ತಲೆದೋರುವವರೆಗೂ ಅಗತ್ಯವಿರುವ ಎಲ್ಲ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ. 24 ಗಂಟೆ ಆಕ್ಸಿಜನ್‌ ವ್ಯವಸ್ಥೆ ಇರಲಿದೆ. ಮಂಗಳವಾರದ ವೇಳೆಗೆ ಎಲ್ಲ ಹಾಸಿಗೆಗಳಿಗೂ ಆಕ್ಸಿಜನ್‌ ವ್ಯವಸ್ಥೆ ಮಾಡಲಾಗುವುದು. 50 ಸಿಲಿಂಡರ್‌ ಜೋಡಿಸಲು ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟದ ಚಿಕಿತ್ಸೆ ನೀಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ವ್ಯವಸ್ಥಾಪಕರು ಮಾಹಿತಿ ನೀಡಿದರು.

ಆಕ್ಸಿಜನ್‌ಗಾಗಿ ಕಾಂಗ್ರೆಸ್‌ಗೆ ಮೊರೆ ಹೋದ ನ್ಯೂಜಿಲೆಂಡ್‌, ಫಿಲಿಪ್ಪೀನ್ಸ್‌ ರಾಯಭಾರ ಕಚೇರಿ! ...

ಈ ವೇಳೆ ಗೋಲ್ಡನ್‌ ರೆಸಿಡೆನ್ಸಿ ಮಾಲೀಕ ಮುರಳಿ, ಜಿಟೋ ಅಧ್ಯಕ್ಷ ಅಶೋಕ್‌ ನಗೋರಿ, ಚಿಕ್ಕಪೇಟೆ ಯುವ ಕಾಂಗ್ರೆಸ್‌ ಮುಖಂಡ ರಾಘವ ಹಾಜರಿದ್ದರು.

ಈಗಾಗಲೇ 10 ಆ್ಯಂಬುಲೆನ್ಸ್‌ನಿಂದ ಸೇವೆ: ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಈಗಾಗಲೇ 10 ಆ್ಯಂಬುಲೆನ್ಸ್‌ಗಳು ಸೋಂಕಿತರು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲು ಸೇವೆ ಒದಗಿಸುತ್ತಿವೆ. ‘ಕಾಂಗ್ರೆಸ್‌ ಕೇರ್ಸ್‌’ ಹೆಸರಿನ ಆ್ಯಂಬುಲೆನ್ಸ್‌ ಸೇವೆ ಮೃತರ ಶವ ಸಾಗಣೆಗೂ ಬಳಕೆಯಾಗುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಮಂದಿಗೆ ಕೊರೋನಾ ಔಷಧಗಳನ್ನು ಉಚಿತವಾಗಿ ಪೂರೈಸಲಾಗಿದೆ. ಈ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸಹ ಸಿದ್ಧತೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮನೆ-ಮನೆಗೂ ಲಸಿಕೆ ನೋಂದಣಿ ಸೇವೆ: ‘ರಾಜ್ಯದಲ್ಲಿ ವ್ಯಾಕ್ಸಿನ್‌ಗಾಗಿ ಆನ್‌ಲೈನ್‌ ನಲ್ಲಿ ನೋಂದಣಿ ಮಾಡಿಸುವಂತೆ ಅವರು ತಿಳಿಸಿದ್ದಾರೆ. ಹಳ್ಳಿ, ನಗರ ಪ್ರದೇಶದಲ್ಲಿರುವ ಅನಕ್ಷರಸ್ಥರಿಗೆ ಆನ್‌ಲೈನ್‌ ಮೂಲಕ ನೋಂದಣಿ ಮಾಡಿ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ವ್ಯಾಕ್ಸಿನ್‌ ನೀಡುವ ಸಂಬಂಧ ಪ್ರತಿ ಮನೆಗೆ ತೆರಳಿ ನೋಂದಣಿ ಅಭಿಯಾನ ನಡೆಸಲು ಕಾಂಗ್ರೆಸ್‌ ಮುಂದಾಗಿದೆ. ಇದಕ್ಕಾಗಿ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಯೋಧರನ್ನು ನೇಮಕ ಮಾಡುತ್ತಿದ್ದು, ಜಾಲತಾಣದ ಯೋಧರಾಗಲು ‘1800 1200 00044’ ಈ ಸಂಖ್ಯೆಗೆ ಮಿಸ್ಡ್‌ ಕಾಲ್ ಅಥವಾ 75740 00525 ಗೆ ವಾಟ್ಸಪ್‌ ಮಾಡಬಹುದು. ಬಳಿಕ ಪಕ್ಷದವರೇ ಸಂಪರ್ಕಿಸಿ ವಿವರಗಳನ್ನು ಪರಿಶೀಲಿಸಿ ನೇಮಕ ಮಾಡುತ್ತಾರೆ’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಆರೋಗ್ಯಹಸ್ತ ಸಹಾಯವಾಣಿ:  ಆ್ಯಂಬುಲೆನ್ಸ್‌ ಹಾಗೂ ಚಿಕಿತ್ಸೆಗೆ ಆರೋಗ್ಯ ಹಸ್ತ ಸಹಾಯವಾಣಿ 080-47188000, 72045 27379ಗೆ ಸಂಪರ್ಕಿಸಬಹುದು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona